ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸೆ.26ರಂದು ಬೃಹತ್ ರ‍್ಯಾಲಿ
Bengaluru News: ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ KSR ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೂ 'ವಿಧಾನಸೌಧ ಚಲೋ' ಬೃಹತ್ ರ್ಯಾಲಿ ನಡೆಯಲಿದೆ
ಬೆಂಗಳೂರು (ಸೆ. 23): ಬೆಂಗಳೂರಿನಲ್ಲಿ ಸೆ.25 ರಂದು ರಾಷ್ಟ್ರೀಯ ರೈತ ಮುಖಂಡರ ರಾಷ್ಟ್ರೀಯ ಅಧಿವೇಶನ ನಡೆಯಲಿದೆ. ಸೆ. 26 ರಂದು ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಬೆಳಿಗ್ಗೆ 11 ಗಂಟೆಯಿಂದ KSR ರೈಲ್ವೆ ನಿಲ್ದಾಣದಿಂದ ವಿಧಾನಸೌಧವರೆಗೂ 'ವಿಧಾನಸೌಧ ಚಲೋ' ಬೃಹತ್ ರ್ಯಾಲಿ ನಡೆಯಲಿದೆ. ರ‍್ಯಾಲಿಯಲ್ಲಿ ಸುಮಾರು 1ಲಕ್ಷಕ್ಕೂ ಹೆಚ್ಚು ರೈತರು ಭಾಗಿಯಾಗಲಿದ್ದಾರೆ.
ಈ ಬೆನ್ನಲ್ಲೇ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಯುಕ್ತ್ ಕಿಸಾನ್ ಮೋರ್ಚಾ (ರಾಜಕೀಯೇತರ) ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ "ಬಿಜೆಪಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ಜಿಲ್ಲಾ ಮಟ್ಟದಲ್ಲಿ ಎರಡು ತಿಂಗಳಿನಿಂದಲೂ ಹಲವಾರು ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು" ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಹರೀಶ್ ಅದ್ದೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಬರಡನಪುರ ನಾಗರಾಜ್, ಗೋವಿಂದರಾಜ್ ಮುಂತಾದವರು ಉಪಸ್ಥಿತರಿದ್ದರು.
ಈರುಳ್ಳಿ ಬೆಳೆದು ಕಂಗಾಲಾದ ಕೋಟೆನಾಡಿನ ರೈತರು, 14 ಸಾವಿರ ಹೆಕ್ಟೇರ್ ಈರುಳ್ಳಿ ನಾಶ!
ಮೂರು ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂ ಎಸ್ ಪಿ ಗ್ಯಾರೆಂಟಿ ಕಾನೂನು ಜಾರಿ ಮಾಡುತ್ತೇವೆ. ದೆಹಲಿ ರೈತ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ 2021ರ ನವಂಬರ್ ತಿಂಗಳಲ್ಲಿ ಭರವಸೆ ನೀಡಿದ ಪ್ರಧಾನಿ ಮೋದಿ ಭರವಸೆ ಹುಸಿಗೊಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ಸಮಿತಿ ರಚಿಸಿದ್ದು, ವರ್ಷಗಳ ಕಾಲ ಹೋರಾಟ ಮಾಡಿದ, ರೈತ ಮುಖಂಡರನ್ನ ಹೊರಗಿಟ್ಟು ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ.
ಎಲ್ಲಾ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ MSP ಖಾತರಿ ಕಾನೂನು ಜಾರಿಗೆ ತರಬೇಕು, ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ರಾಜ್ಯದಲ್ಲಿ ಅಂದಾಜು10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಳೆ ಹಾನಿಯಿಂದ ರೈತರ ಬೆಳೆ ನಷ್ಟವಾಗಿದ್ದು, ಅಧಿಕಾರಿಗಳು ಕಾಟಚಾರದ ಸಮೀಕ್ಷೆ ನಡೆಸುತ್ತಿದ್ದಾರೆ. ನೈಜ ನಷ್ಟ ಪರಿಹಾರ ನೀಡಲು ಮುಂದಾಗಬೇಕು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ತಾಲೂಕಿಗೂ ಭೇಟಿ ನೀಡಿ ಪರಿಶೀಲಿಸಲು ಸನ್ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಬೇಕು ಎಂದು ರಾಜ್ಯಾಧ್ಯಕ್ಷರು ಆಗ್ರಹಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಬೇಡಿಕೆಗಳು:
- ಪ್ರಸಕ್ತ ಸಾಲಿನ ಕಬ್ಬಿನ ಎಫ್.ಆರ್.ಪಿ. ದರ ಕನಿಷ್ಠ 3,500ರೂ ನಿಗದಿಯಾಗಬೇಕು.
- ಕೃಷಿ ಪಂಪ್ ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರದಿಂದ, ವಿದ್ಯುತ್ ಖಾಸಗೀಕರಣ ಕಾಯ್ದೆ ಮಾಡುವುದನ್ನು ಕೈಬಿಡಬೇಕು
- ಕೊರೊನಾ ಲಾಕ್‌ಡೌನ್ ಸಂಕಷ್ಟ , ಮಳೆಹಾನಿ , ಅತಿವೃಷ್ಟಿ , ಬೆಳೆ ನಷ್ಟ , ಮೂರುವರೆ ಲಕ್ಷ ರೈತರ ಆತ್ಮಹತ್ಯೆ ಪರಿಗಣಿಸಿ ದೇಶದ ರೈತರ ಸಾಲ ಮನ್ನಾ ಆಗಬೇಕು
- ಅತಿವೃಷ್ಟಿ ಮಳೆ ಹಾನಿ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಸಿಗುವಂತಾಗಬೇಕು
- ಅತಿವೃಷ್ಟಿ ಸಮಸ್ಯೆಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲ ವಸೂಲಾತಿ ನಿಲ್ಲಬೇಕು
- ಇರುವ ಸಾಲದ ಮೇಲೆ ಶೇಕಡ 25 ರಷ್ಟು ಹೆಚ್ಚುವರಿ ಸಾಲ ನೀಡಬೇಕು
- ಬ್ಯಾಂಕುಗಳು ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ನೋಡಿ ಸಾಲ ಕೊಡುತ್ತೇವೆ ಎನ್ನುವುದನ್ನು ಕೈಬಿಡಬೇಕು
- ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ಖಾಸಗಿಕರಣ ಮಾಡುವುದನ್ನು ವಿರೋಧಿಸಲು, ನ್ಯಾಯ ಸಮ್ಮತ ಕಬ್ಬುದರ ನಿಗದಿಗೆ ಒತ್ತಾಯಿಸಿ
- 2022ರ ವಿದ್ಯುತ್ ಕಾಯ್ದೆ ತಿದ್ದುಪಡಿ ಖಾಸಗಿಕರಣ ಕೈಬಿಡಬೇಕು
- ಕಬ್ಬಿನ ಎಫ್ ಆರ್ ಪಿ ದರ ಪುನರ್ ಪರಿಶೀಲನೆ ನಡೆಸಿ
- ವೈಜ್ಞಾನಿಕವಾಗಿ ನ್ಯಾಯಯುತ ಕಬ್ಬಿನ ದರ ನಿಗದಿ ಮಾಡಬೇಕು
- ಕೃಷಿ ಉತ್ಪನ್ನಗಳ, ಹಾಗೂ ಉಪಕರಣಗಳ ಮೇಲಿನ GST ರದ್ದುಪಡಿಸಬೇಕು
- ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹಾಗೂ ಕರೋನ ಲಾಕ್ಡೌನ್ ಸಂಕಷ್ಟದಿಂದ ನಲುಗಿದ್ದಾರೆ, ಆದಕಾರಣ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ, ರೈತರ ಸಾಲ ಮನ್ನ ಮಾಡಬೇಕು
- ಫಸಲ್ ಭೀಮಾ ಬೆಳೆವಿಮೆ ಯೋಜನೆ ಮಾನದಂಡ ಬದಲಾಯಿಸಬೇಕು
- ವಿಶ್ವವ್ಯಾಪಾರ ಒಪ್ಪಂದ ಡಬ್ಲ್ಯುಟಿಒ ನಿಂದ ಭಾರತ ಸರ್ಕಾರ ಹೊರಬರಬೇಕು
- ಲಕ್ಷ್ಮಿಪುರ ಕೇರಿ ಪ್ರಕರಣದಲ್ಲಿ ಭಾಗಿಯಾಗಿರುವ ಕೇಂದ್ರದ ರಾಜ್ಯ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾ ಸಂಪುಟದಿಂದ ಕೈಬಿಡಬೇಕು
- ದೆಹಲಿ ಹೋರಾಟದಲ್ಲಿ ಮಾಡಿದ 750 ರೈತ ಕುಟುಂಬಗಳಿಗ ಕೇಂದ್ರ ಸರ್ಕಾರ ನವಂಬರ್ ತಿಂಗಳಲ್ಲಿ ಮೂರು ಕೃಷಿ ಕಾಯ್ದೆ ರದ್ದು ಮಾಡಿದಾಗ ನೀಡಿದ ಭರವಸೆಯಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಭರವಸೆ ಈಡೇರಿಸಬೇಕು
- ದೆಹಲಿ ಹೋರಾಟದಲ್ಲಿ ರೈತರ ಮೇಲೆ ದಾಖಲಾಗಿರುವ ಪೋಲಿಸ್ ಕೇಸ್ ಗಳನ್ನು ವಾಪಸ್ ಪಡೆಯಬೇಕು
- ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು.
ವರದಿ: ನಟರಾಜ್