ದೇಶದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿರುವ ರೈತರ ಅನುಕೂಲಕ್ಕಾಗಿ ರೈತ ಕೇಂದ್ರಿತ ನೀತಿಯನ್ನು ಸೆಪ್ಟೆಂಬರ್‌ನಿಂದ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಜು.15): ದೇಶದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿರುವ ರೈತರ ಅನುಕೂಲಕ್ಕಾಗಿ ರೈತ ಕೇಂದ್ರಿತ ನೀತಿಯನ್ನು ಸೆಪ್ಟೆಂಬರ್‌ನಿಂದ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿರುವ ದೇಶದ ಎಲ್ಲ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ 2 ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಮತ್ತು ದೇಶದಲ್ಲಿ ಕೃಷಿಯು ಉತ್ಪಾದನೆ ಕೇಂದ್ರಿತವಾಗಿದ್ದು, ಇದು ರೈತರಿಗೆ ಆದಾಯ ಕೇಂದ್ರಿತವಾಗಬೇಕು.
ರಾಜ್ಯದ ಕೃಷಿ ಚಟುವಟಿಕೆ, ಹವಾಮಾನ, ಭೂ ಮಾಲಿಕತ್ವ ಮೊದಲಾದ ವಿಷಯಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ರೈತ ಕೇಂದ್ರಿತ ನೀತಿಗೆ ಜಾರಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಶೇ.1 ಕೃಷಿ ಕ್ಷೇತ್ರ ಬೆಳವಣಿಗೆಯಾದರೆ ಶೇ.4ರಷ್ಟುಉತ್ಪಾದಕ ವಲಯ ಹಾಗೂ ಶೇ.10ರಷ್ಟು ಸೇವಾ ವಲಯವೂ ಬೆಳೆಯುತ್ತದೆ. ಐಟಿ-ಬಿಟಿ ವಲಯ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಶಕ್ತಿ ನೀಡುತ್ತಿದ್ದರೂ ಮೂಲ ಚಾಲನಾ ಶಕ್ತಿ ಕೃಷಿಯೇ. ದೇಶವನ್ನು ಒಗ್ಗೂಡಿಸುವ ಮತ್ತು ಐಕ್ಯತೆಯನ್ನು ಬಲಗೊಳಿಸುವ ಸಾಮರ್ಥ್ಯ ಕೃಷಿಗೆ ಇದೆ.
ನಮ್ಮದು ಗರ್ಜಿಸುವ, ಕಾಂಗ್ರೆಸ್‌ದು ನಿದ್ರಿಸುವ ಸಿಂಹ: ಸಿಎಂ ಬೊಮ್ಮಾಯಿ
ಆರ್ಥಿಕ ಮತ್ತು ಜಿಡಿಪಿ ಬೆಳವಣಿಗೆಗೆ ಕೃಷಿ ಕ್ಷೇತ್ರ ಪ್ರಮುಖ ಕೊಡುಗೆ ನೀಡುತ್ತಿದೆ. ಕೃಷಿ ವಲಯ ಬೆಳವಣಿಗೆಯಾದಷ್ಟೂದೇಶದ ಆರ್ಥಿಕತೆ ಸಧೃಡವಾಗುತ್ತದೆ ಎಂದು ತಿಳಿಸಿದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗೆ ಎಷ್ಟೇ ಉತ್ತೇಜನ ನೀಡಿದರೂ ಪೂರ್ಣಪ್ರಮಾಣದಲ್ಲಿ ಗುರಿ ಮುಟ್ಟಲಾಗುತ್ತಿಲ್ಲ. ಯಥೇಚ್ಛವಾಗಿ ಸೌಲಭ್ಯಗಳು ಲಭ್ಯವಿದ್ದರೂ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ.
ಪ್ರತಿ ರಾಜ್ಯವೂ ಆಯಾ ಕ್ಷೇತ್ರದ ಅಧಿಕಾರಿಗಳು ರೈತರ ನಡುವೆ ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗುವ ಉದ್ದೇಶದಿಂದ ಡಿಜಿಟಲ್ ಕೃಷಿ ವ್ಯವಸ್ಥೆಗೆ ನಮ್ಮ ಸರ್ಕಾರ ಒತ್ತು ನೀಡಿದೆ. ದೇಶದಲ್ಲಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರ ಬಗ್ಗೆ ಹೆಚ್ಚು ಅವಲಂಬಿತರಾಗಿದ್ದೇವೆ. ಆದ್ದರಿಂದ ಆಮದು ಮನಸ್ಥಿತಿಯಿಂದ ಹೊರಬಂದು ಆತ್ಮನಿರ್ಭರ ಯೋಜನೆಯಡಿ ದೇಶದಲ್ಲೇ ಉತ್ಪನ್ನಗಳನ್ನು ಉತ್ಪಾದಿಸಬೇಕೆಂದು ಕೇಂದ್ರ ಸಚಿವರು ಕರೆ ನೀಡಿದರು.
ಉಡುಪಿಯಲ್ಲಿ ಸಿಎಂ ಮಳೆಹಾನಿ ವೀಕ್ಷಣೆ: ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ
ಆತ್ಮ ನಿರ್ಭರ ಯೋಜನೆಯಡಿ ನ್ಯಾನೋ ಯೂರಿಯಾ ಉತ್ಪಾದನೆ ಮಾಡಲಾಗುತ್ತಿದ್ದು, ರೈತರು ಇದನ್ನೇ ಬಳಸಬೇಕು. 2025ರ ವೇಳೆಗೆ ಒಂಬತ್ತು ನ್ಯಾನೋ ಯೂರಿಯಾ ಘಟಕ ತೆರೆಯಲಾಗುವುದು. ವಾರ್ಷಿಕ 2 ಲಕ್ಷ ಮೆಟ್ರಿಕ್ ಟನ್ ಉತ್ಪಾದಿಸುತ್ತಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಸರ್ಕಾರಗಳು ಅಗತ್ಯ ಸೌಲಭ್ಯ ಒದಗಿಸಲಿವೆ.
- ಮನ್‌ಸುಖ್ ಮಾಂಡವೀಯ, ಕೇಂದ್ರ ಸಚಿವ
