17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಆರ್‌ಸಿಬಿ ತಂಡದ ಗೆಲುವಿನಲ್ಲಿ ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಹಮದಾಬಾದ್: ಬರೋಬ್ಬರಿ 17 ವರ್ಷಗಳ ವನವಾಸಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು 190 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿಯನ್ನು ರಕ್ಷಿಸಿಕೊಳ್ಳುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು. ಈ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಶಸ್ವಿಯಾಗಿದೆ. ಈ ಗೆಲುವಿಗೆ ಎಲ್ಲಾ ಆಟಗಾರರು ಕಾರಣರಾದರೂ, ಈ ಮೂವರು ಆಟಗಾರರು ನಿಜವಾದ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.

1. ಕೃನಾಲ್ ಪಾಂಡ್ಯ:

ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ, ಬ್ಯಾಟಿಂಗ್‌ನಲ್ಲಿ ಹೆಚ್ಚು ಜಾದು ಮಾಡಲು ಸಾಧ್ಯವಾಗಲಿಲ್ಲ. ಆದರೆ ಬೌಲಿಂಗ್‌ನಲ್ಲಿ ಪಂಜಾಬ್ ಪರ ವಾಲುತ್ತಿದ್ದ ಪಂದ್ಯವನ್ನು ಆರ್‌ಸಿಬಿ ತೆಕ್ಕೆಗೆ ಜಾರುವಂತೆ ಮಾಡುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾದರು. 4 ಓವರ್‌ ಬೌಲಿಂಗ್ ಮಾಡಿದ ಕೃನಾಲ್ ಪಾಂಡ್ಯ ಕೇವಲ 17 ರನ್ ನೀಡಿ ಪ್ರಮುಖ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪಂಜಾಬ್ ಪರ ಅಪಾಯಕಾರಿ ಬ್ಯಾಟರ್ ಎನಿಸಿಕೊಂಡಿದ್ದ ಪ್ರಭ್‌ಸಿಮ್ರನ್ ಸಿಂಗ್(26) ಹಾಗೂ ಜೋಶ್ ಇಂಗ್ಲಿಶ್(39) ಅವರನ್ನು ಬಲಿ ಪಡೆಯುವ ಮೂಲಕ ಆರ್‌ಸಿಬಿ ಗೆಲುವಿನ ರೂವಾರಿ ಎನಿಸಿಕೊಂಡರು.

2. ಭುವನೇಶ್ವರ್ ಕುಮಾರ್:

ಆರ್‌ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮಹತ್ವದ ಘಟ್ಟದಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಗೆಲುವಿನ ರೂವಾರಿ ಎನಿಸಿಕೊಂಡರು. ಭುವನೇಶ್ವರ್ ಕುಮಾರ್ 17ನೇ ಓವರ್‌ನಲ್ಲಿ ನೆಹಾಲ್ ವದೇರಾ ಹಾಗೂ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಕಬಳಿಸುವ ಮೂಲಕ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಈ ಇಬ್ಬರ ವಿಕೆಟ್ ಕಬಳಿಸದಿದ್ದರೇ ಬಹುತೇಕ ಪಂದ್ಯ ಕೈಜಾರುವ ಸಾಧ್ಯತೆಯಿತ್ತು.

3. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದರು. ಫೈನಲ್‌ನಲ್ಲಿ ಆರಂಭದಲ್ಲೇ ಫಿಲ್ ಸಾಲ್ಟ್, ಮಯಾಂಕ್‌ ಅಗರ್‌ವಾಲ್ ಹಾಗೂ ರಜತ್ ಪಾಟೀದಾರ್ ವಿಕೆಟ್ ಪತನವಾದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 35 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 43 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು.