ಬೆಂಗಳೂರು(ಅ.11): ಮಾಹಾಮಾರಿ ಕೊರೋನಾ ವೈರಸ್‌ನಿಂದ ಈ ಬಾರಿ ಶಾಲಾ, ಕಾಲೇಜುಗಳು ಆರಂಭವಾಗಿಲ್ಲ. ಹೀಗಾಗಿ ಮಕ್ಕಳು ವಿದ್ಯಾಭ್ಯಾಸದಿಂದ ದೂರವಾಗಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ವಿದ್ಯಾಗಮದಡಿ ವಠಾರ ಶಾಲೆಗಳನ್ನ ತೆರೆ ತೆರೆದು ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಆದರೆ, ವಿದ್ಯಾಗಮ ಯೋಜನೆ ಶಿಕ್ಷಕರಿಗೆ ಮರಣ ಶಾಸನವಾಗಿ ಮಾರ್ಪಟ್ಟಿದೆ. ಈಗಾಗಲೇ ವಿದ್ಯಾಗಮದಡಿ ಸಾಕಷ್ಟು ಸಂಖ್ಯೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ಕೊರೋನಾಗೆ ಬಲಿಯಾಗಿದ್ದಾರೆ. 

ಹೀಗಾಗಿ ವಿದ್ಯಾಗಮ ಯೋಜನೆಗೆ ರಾಜ್ಯ ಸರ್ಕಾರ ಬ್ರೇಕ್‌ ನೀಡಿದೆ. ವಿದ್ಯಾಗಮ ಕಾರ್ಯಕ್ರಮದಿಂದಾಗಿ ರಾಜ್ಯದ ಹಲವೆಡೆ ಶಿಕ್ಷಕರು ಮಹಾಮಾರಿ ಕೊರೋನಾಗೆ ಅಸುನೀಗಿದ್ದಾರೆ. ಇದರ ಪರಿಣಾಮ ಕುಟುಂಬ ಸದಸ್ಯರಿಗೆ ಸಂಕಷ್ಟ, ಆತಂಕ ಎದುರಾಗಿದೆ. 

ಮನೆಗೆ ಆಧಾರವಾದ ಶಿಕ್ಷಕ ಸವ್ಹಾಣ ಕುಟುಂಬಕ್ಕೆ ಈಗ ಅಕ್ಷರಶಃ ಆಘಾತ

ಬಾಗಲಕೋಟೆ: ತಾಲೂಕಿನ ನೀರಲಕೇರಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಜಯರಾಜ ಚವ್ಹಾಣ ಕೊರೋನಾ ಸೋಂಕಿಗೆ ಬಲಿಯಾದ ನಂತರ ಅವರ ಕುಟುಂಬದವರು ಪಡುತ್ತಿರುವ ಯಾತನೆ ನಿಜಕ್ಕೂ ಮನಕಲಕುವಂತಿದೆ.
ಬಡ ಕುಟುಂಬದಲ್ಲಿ ಜನಿಸಿ ಶಿಕ್ಷಕ ವೃತ್ತಿಗೆ ಸೇರಿ ಸೇವೆನಿರತ ಸಂದರ್ಭದಲ್ಲಿ ಕೊರೋನಾ ಮಹಾಮಾರಿಗೆ ಬಲಿಯಾದ ಜಯರಾಜ ಚವ್ಹಾಣ ಮೂಲತಃ ಜಿಲ್ಲೆಯ ಬಾದಾಮಿ ತಾಲೂಕಿನ ಹಾನಾಪುರ ತಾಂಡಾದವರು. ತಾಯಿ, ಪತ್ನಿ, ಇಬ್ಬರು ಮುದ್ದಾದ ಮಕ್ಕಳ ಜೊತೆ ಬದುಕು ಕಟ್ಟಿಕೊಂಡಿದ್ದ ಜಯರಾಜ ಕೊರೋನಾ ಸೋಂಕಿಗೆ ಬಲಿಯಾಗಿ ಇಡೀ ಕುಟುಂಬವನ್ನೇ ತಬ್ಬಲಿಯಾಗಿಸಿದ್ದಾರೆ.

ಜನಾ​ಕ್ರೋ​ಶಕ್ಕೆ ಮಣಿದ ಸರ್ಕಾ​ರ: ವಿದ್ಯಾಗಮಕ್ಕೆ ತಾತ್ಕಾಲಿಕ ಬ್ರೇಕ್‌!

ಕೋವಿಡ್‌-19ಗೆ ಬಲಿಯಾದ ಪ್ರಾಥಮಿಕ ಶಾಲೆಯ ಶಿಕ್ಷಕನ ಕುಟುಂಬವೀಗ ಅಕ್ಷರಶಃ ಕಣ್ಣೀರಿನಲ್ಲಿ ಕಾಲಕಳೆಯುವ ಸ್ಥಿತಿಯಲ್ಲಿದೆ. ವಯೋವೃದ್ಧ ತಾಯಿ, ಏನು ಅರಿಯದ ಪುಟ್ಟಕಂದಮ್ಮಗಳ ದುಃಖ, ಪತಿಯನ್ನು ಕಳೆದುಕೊಂಡ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ. ಶಿಕ್ಷಕನ ಮನೆಯಲ್ಲಿನ ಸದ್ಯದ ದೃಶ್ಯವನ್ನು ನೋಡಿದವರು ಯಾರು ಸಹ ಕಣ್ಣೀರು ಹಾಕದೆ ಇರಲಾರರು. ಮನೆಯಲ್ಲಿನ ಕುಟುಂಬದ ಸದಸ್ಯರು ಅನುಭವಿಸುತ್ತಿರುವ ನೋವು ನಿಜಕ್ಕೂ ಮನಕಲಕುತ್ತಿದೆ.

ವಿದ್ಯಾಗಮದಿಂದ್ಲೇ ನನ್ನ ಗಂಡನಿಗೆ ಕೊರೋನಾ ಬಂತು: ​ಗುತ್ತೇದಾರ್‌ ಪತ್ನಿ ಕಣ್ಣೀರು

ಕಲಬುರಗಿ: ಅತಿಯಾದ ಮಳೆಯ ನಡುವೆಯೂ ನನ್ನ ಪತಿ ವಠಾರ ಶಾಲೆಗಾಗಿ ತೆರಳುತ್ತಿದ್ದರು, ಸದಾಕಾಲ ಮಳೆಯಲ್ಲಿ ನೆನೆದು ನೆಗಡಿ- ಕೆಮ್ಮು- ಜ್ವರ ಶುರುವಾಯಿತು, ತಪಾಸಣೆಗೆಂದು ವೈದ್ಯರ ಬಳಿ ಹೋದಾಗ ಕೊರೋನಾ ಪಾಸಿಟಿವ್‌ ಎಂದು ಹೇಳಿದರು. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಗಾಬರಿಯಾಗಿ ನನ್ನ ಪತಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಮುನ್ನವೇ ಸಾವಿಗೀಡಾದರು’ ಹೀಗೆಂದು ಕಣ್ಣೀರಿಟ್ಟವರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವ ಕಲಬುರಗಿ ಶಿಕ್ಷಕ ಬಾಬೂರಾವ ಗುತ್ತೇದಾರ್‌ ಪತ್ನಿ. ಇಬ್ಬರು ಮಕ್ಕಳ ಶಿಕ್ಷಣ, ಬದುಕು ರೂಪಿಸುವುದು, ಮನೆ ಸಾಲದ ಕಂತು ಹೇಗೆ ಎಂಬುದು ದಿಕ್ಕುತೋಚದಂತಾಗಿದೆ, ನನ್ನಂತೆ ನೂರಾರು ಕುಟುಂಬಗಳು ಸಂಕಷ್ಟದಲ್ಲಿವೆ ಪತಿ ಕೊರೋನಾದಿಂದ ಸಾವನ್ನಪ್ಪಿದ್ದರೂ ಸರಕಾರದಿಂದ ಹೆಚ್ಚಿನ ಯಾವುದೇ ನೆರವು ಬರಲೇ ಇಲ್ಲ. ಸರ್ಕಾರದಿಂದ ನೆರವಿನ ಮಾತಿರಲಿ, ಸಾಂತ್ವಾನ ಹೇಳಲು ಸಹ ಯಾರೂ ಬಂದಿಲ್ಲ ಎಂದು ಗೋಲಾಡಿದರು.

ರಾಮದುರ್ಗ: ವಿದ್ಯಾಗಮದಡಿ ಪಾಠ, 30 ವಿದ್ಯಾರ್ಥಿಗಳಿಗೆ ಕೊರೋನಾ ದೃಢ

ವಠಾರ ಶಾಲೆಯಿಂದ ಶಿಕ್ಷಕರಿಗೂ ಸುರಕ್ಷತೆಯಿಲ್ಲ, ಮಕ್ಕಳಿಗೂ ಸುರಕ್ಷತೆಯಿಲ್ಲ, ಕೂಡಲೇ ಇದನ್ನ ಬಂದ್‌ ಮಾಡಿ, ತಕ್ಷಣವೇ ವಿದ್ಯಾಗಮ ನಿಲ್ಲಿಸಿ ನನ್ನಂತೆ ಇತರರು ಸಂಕಷ್ಟಪಡುವುದನ್ನು ತಪ್ಪಿಸಿ ಎಂದೂ ಶ್ರೀಮತಿ ಗುತ್ತೇದಾರ್‌ ಆಗ್ರಹಿಸಿದರು. ಕೊರೋನಾ ಕಾಲಿಟ್ಟಾಗಿನ ಮಾ. 12 ರಿಂದ ಇಲ್ಲಿಯವರೆಗೂ ಕಲಬುರಗಿ ಜಿಲ್ಲೆಯಲ್ಲಿ 13 ಶಿಕ್ಷಕರು ಸಾವನ್ನಪ್ಪಿರೋದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಈ ಪೈಕಿ ಅತೀ ಹೆಚ್ಚು ಅಫಜಲ್ಪುರದಲ್ಲಿ ನಾಲ್ವರು, ಚಿತ್ತಾಪುರ ತಾಲೂಕಿನಲ್ಲಿ ಮೂವರು ಶಿಕ್ಷಕರು ಸಾವನ್ನಪ್ಪಿದ್ದಾರೆ.

ಶಿಕ್ಷಕ ಶಿವಕುಮಾರ್‌ ಪತ್ನಿಗೆ ಬುದ್ದಿಮಾಂದ್ಯ ಮಗನ ಆರೈಕೆಯೇ ಒಂದು ಸವಾಲು

ತುಮಕೂರು: ಕೊರೋನಾ ಸೋಂಕೊಗೆ ಸೆ.23ರಂದು ಶಿಕ್ಷಕ ಶಿವಕುಮಾರ್‌(56) ಮೃತಪಟ್ಟಿದ್ದರು. ಈಗ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈಗ ಕುಟುಂಬ ನಿಭಾಯಿಸುವುದು ಹೇಗೆ, ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಆಕೆಯ ಪತ್ನಿ ನಿರ್ಮಲಾ ಅಳಲು ತೋಡಿಕೊಂಡಿದ್ದಾರೆ.

ನನ್ನ 22 ವರ್ಷದ ಮಗ ಬುದ್ದಿಮಾಂದ್ಯನಾಗಿದ್ದು, ಆತನಿಗೆ ಚಿಕಿತ್ಸೆಗೆ ಸಾಕಷ್ಟುಹಣ ಬೇಕಾಗಿದೆ. ಫಾರ್ಮಸಿ ಓದುತ್ತಿರುವ ನನ್ನ ಮಗಳಿಗೆ ಶಿಕ್ಷಣ ಹೇಗೆ ಕೊಡಿಸಬೇಕೆಂಬ ಚಿಂತೆಯಾಗಿದೆ. ವಿದ್ಯಾಗಮಕ್ಕೆ ಇನ್ನೆಷ್ಟುಶಿಕ್ಷಕರು ಬಲಿಯಾಗುತ್ತಾರೆಂಬ ಆತಂಕವನ್ನು ಈ ಹಿಂದೆಯೇ ನನ್ನ ಪತಿ ಶಿವಕುಮಾರ್‌ ತೋಡಿಕೊಂಡಿದ್ದರು. ವಿದ್ಯಾಗಮ ಹಾಗೂ ಶಾಲೆ ಆರಂಭಿಸುವುದನ್ನು ನಿಲ್ಲಿಸಿ ಶಿಕ್ಷಕರ ಸಂಸಾರಗಳನ್ನು ಉಳಿಸುವಂತೆ ನಿರ್ಮಲಾ ಮನವಿ ಮಾಡಿದ್ದಾರೆ.

ಬೆಳಗಾವಿಯೊಂದರಲ್ಲಿಯೇ ಕೋವಿಡ್‌ನಿಂದ 110 ಶಿಕ್ಷಕರು ಸಾವು

ಸೋಂಕಿನಿಂದ ಮೃತಪಟ್ಟಶಿಕ್ಷಕಿ ಮಗನಿಗೆ ಸಚಿವ ಗೋಪಾಲಯ್ಯ ಸಾಂತ್ವಾನ 

ಹಾಸನ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಹಾಸನ ನಗರದಲ್ಲಿ ಶನಿವಾರ ಕೋವಿಡ್‌-19 ನಿಂದ ಇತ್ತೀಚೆಗೆ ತಂದೆ ಹಾಗೂ ಶಿಕ್ಷಕಿ ವೃತ್ತಿ ಮಾಡುತ್ತಿದ್ದ ತಾಯಿಯನ್ನ ಕಳೆದುಕೊಂಡು ಏಕಾಂಗಿಯಾಗಿರುವ ಯುವಕನ ಮನೆಗೆ ಶನಿವಾರ ಭೇಟಿ ನೀಡಿ ಸಾಂತ್ವಾನ ಹೇಳಿದರು. ಅಧಿಕಾರಿಗಳೊಂದಿಗೆ ಮೃತರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ಏಕೈಕ ಪುತ್ರ ಧೀಮಂತ ಅವರಿಗೆ ಸಾಂತ್ವಾನ ಹೇಳಿದರು. ಸರ್ಕಾರದಿಂದ ಬರಬೇಕಾಗಿರುವ ಎಲ್ಲ ರೀತಿಯ ಪರಿಹಾರ ಹಣವನ್ನು ಒದಗಿಸಲಾಗುವುದು. ಅಲ್ಲದೆ ಅನುಕಂಪದ ಆಧಾರದ ಮೇಲೆ ಮಗನಿಗೆ ಉದ್ಯೋಗ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

ಪರಿಹಾರ ಹಾಗೂ ಇತರ ಬರಬೇಕಿರುವ ಹಣವನ್ನು ಶೀಘ್ರವೇ ಒದಗಿಸುವ ಜೊತೆಗೆ ಅನುಕಂಪದ ಅಧಾರದ ಮೇಲೆ ಉದ್ಯೋಗ ಕ್ಕೆ ಯುವಕನನ್ನು ಅಲೆದಾಡಿಸದೆ ಶೀಘ್ರವೇ ಕಡತ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್‌ ಹಾಗೂ ಮತ್ತಿತರರು ಹಾಜರಿದ್ದರು.

ಶಿಕ್ಷಕಿಯ ಕುಟುಂಬಕ್ಕೆ ಸಾಂತ್ವನ ಹೇಳಲೂ ಯಾವ ಅಧಿಕಾರಿ ಮನೆಯತ್ತ ಸುಳಿದಿಲ್ಲ

ವಿಜಯಪುರ: ಆ.1ರಂದು ಮಹಾಮಾರಿ ಕೊರೋನಾಗೆ ಬಲಿಯಾದ ವಿಜಯಪುರದ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆ ನಂ.37ರ ಮುಖ್ಯ ಗುರುಮಾತೆ ಶಾಂತಲಾ ದೇಸಾಯಿ ಸಾವು ಅವರ ಕುಟುಂಬದಲ್ಲಿ ಇನ್ನೂ ಕಾಡುತ್ತಿದೆ.
ಶಾಂತಲಾ ಅವರು ಅಸುನೀಗಿ ಬರೋಬ್ಬರಿ 2 ತಿಂಗಳು 10 ದಿನ ಗತಿಸಿದವು. ಇವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಆ ನೋವಿನಿಂದ ಇನ್ನೂ ಹೊರಬಂದಿಲ್ಲ. ಹೀಗಾಗಿ ದೇಸಾಯಿ ಕುಟುಂಬದಲ್ಲಿ ಇನ್ನೂ ಅವರ ಪುತ್ರರು, ಪತಿ ಕಣ್ಣೀರು ಹಾಕುತ್ತಿದ್ದಾರೆ. ಅಕ್ಕಪಕ್ಕದ ಮನೆಯವರು ಸಾಂತ್ವನ ಹೇಳುತ್ತಿದ್ದಾರೆ. ಆದರೆ, ಕೊರೋನಾ ವೇಳೆಯೇ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಈ ಶಿಕ್ಷಕಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಇದುವರೆಗೆ ಯಾವೊಬ್ಬ ಅಧಿಕಾರಿಯೂ ಮನೆಯತ್ತ ಸುಳಿದಿಲ್ಲ. ಮಾತ್ರವಲ್ಲ, ಸೌಜನ್ಯಕ್ಕಾದರೂ ಫೋನ್‌ ಮಾಡಿ ಸಾಂತ್ವನವಾಗಲಿ ಅಥವಾ ಸಮಾಧಾನದ ಮಾತನ್ನಾಗಲಿ ಹೇಳಿಲ್ಲ ಎಂಬ ಕೊರಗು ಇವರ ಕುಟುಂಬವನ್ನು ಬಾಧಿಸುತ್ತಿದೆ.

ಶಿಕ್ಷಕರನ್ನು ಬಲಿಪಡೆಯುತ್ತಿರುವ ಕೊರೋನಾ: ಬೆಚ್ಚಿ ಬೀಳಿಸುತ್ತಿದೆ ಜಿಲ್ಲಾವಾರು ಈ ಅಂಕಿ- ಅಂಶಗಳು

ಕೋವಿಡ್‌ಗೆ ಶಿಕ್ಷಕ ಬಲಿ: ಪರಿಹಾರಕ್ಕೆ ಆಗ್ರಹ

ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿದ್ಯಾಗಮ ಪಾಠ ಮಾಡುವಾಗಲೇ ಕೊರೋನಾ ತಗುಲಿ ಶಿಕ್ಷಕ ಈಶಪ್ಪ ಗುಳದಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೀಗಾಗಿ, ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಗ್ರಾಮದಲ್ಲಿಯೇ ಇರುವ ಅನ್ನದಾನೀಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನುದಾನಿತ ಶಾಲೆಗೆ ನೇಮಕವಾಗಲು ಇದ್ದ ಹತ್ತು ಎಕರೆ ಭೂಮಿ ಮಾರಾಟ ಮಾಡಿ ಸೇರಿದ್ದಾರೆ. ಈಗ ಸಾವನ್ನಪ್ಪಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಪೆನ್ಶನ್‌ ಸಹ ಬರುವುದಿಲ್ಲವಾದ್ದರಿಂದ ಕುಟುಂಬ ಮುಂದಿನ ಜೀವನ ನಡೆಸುವುದಾದರೂ ಹೇಗೆ? ಪತ್ನಿ ಲಕ್ಷ್ಮೇದೇವಿಗೆ ಸರ್ಕಾರಿ ನೌಕರಿ ನೀಡಬೇಕು ಮತ್ತು ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.