ಹೊಸ ಕೊರೋನಾ ತಳಿ ಬಗ್ಗೆ ತಜ್ಞರು ಹೇಳಿದ್ದಿಷ್ಟು
* ‘ಎವೈ 4.2’ ಉಪತಳಿ 3 ತಿಂಗಳ ಹಿಂದೆಯೇ ರಾಜ್ಯದಲ್ಲಿ ಪತ್ತೆ
* ಕಳವಳ ಬೇಡ, ಆದರೆ 3ನೇ ಅಲೆ ಸಾಧ್ಯತೆ ಜೀವಂತ: ತಜ್ಞರು
* ಇದು ಡೆಲ್ಟಾತಳಿಯ ‘ಮೊಮ್ಮಗ’: ಡಾ. ವಿಶಾಲ್ ರಾವ್
ಬೆಂಗಳೂರು(ಅ.27): ರಾಜ್ಯದಲ್ಲಿ ಡೆಲ್ಟಾವೈರಸ್‌ನಿಂದಲೇ(Deltavirus) ಕೊರೋನಾ(Coronavirus) ಎರಡನೇ ಅಲೆ ಉಂಟಾಗಿದೆ. ಹೀಗಾಗಿ ಡೆಲ್ಟಾರೂಪಾಂತರಿಯ ಉಪ ತಳಿಯಾಗಿರುವ ‘ಎವೈ 4.2’ (AY 4.2)ರಾಜ್ಯದಲ್ಲಿ ಗಂಭೀರ ಪರಿಣಾಮ ಬೀರುವುದಿಲ್ಲ. ಸಾರ್ವಜನಿಕರು ಸಹ ಆತಂಕ ಪಡಬೇಕಾಗಿಲ್ಲ ಎಂದು ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹೇಳಿದ್ದಾರೆ.
ಆದರೆ, ಮೂರನೇ ಅಲೆ(Third Wave) ಬರುವ ಸಾಧ್ಯತೆ ಇನ್ನೂ ಜೀವಂತವಾಗಿದೆ. ಯಾವುದೇ ರೂಪಾಂತರಿ ರೂಪದಲ್ಲಾದರೂ ಕಾಡಬಹುದು. ಹೀಗಾಗಿ ಇನ್ನೂ 3-4 ತಿಂಗಳು ರಾಜ್ಯದಲ್ಲಿ(Karnataka) ಜನತೆ ಕಟ್ಟೆಚ್ಚರ ವಹಿಸಬೇಕು. ಕೊರೋನಾ ಮಾರ್ಗಸೂಚಿಯನ್ನು(Corona Guidelines) ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 3 ತಿಂಗಳ ಹಿಂದೆ ಪತ್ತೆಯಾಗಿರುವ ‘ಎವೈ 4.2’ ಪ್ರಕರಣಗಳು ಈಗ ವರದಿಯಾಗಿವೆ. ಒಂದು ವೇಳೆ ‘ಎವೈ 4.2’ ವೈರಾಣು ಗಂಭೀರವಾಗಿದ್ದರೆ ಈ ವೇಳೆಗೆ ಸೋಂಕು ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗಬೇಕಾಗಿತ್ತು. ಆದರೆ, ರಾಜ್ಯದ ಸರಾಸರಿ ಪಾಸಿಟಿವಿಟಿ ದರ(Positivity Rate) ಶೇ.0.50ಕ್ಕಿಂತ ಕಡಿಮೆ ಇದೆ. ಹೀಗಾಗಿ ‘ಎವೈ 4.2’ ಬಗ್ಗೆ ಆತಂಕ ಅಗತ್ಯವಿಲ್ಲ ಎಂದಿದ್ದಾರೆ.
Covid ಲಸಿಕೆ ಬಗ್ಗೆ ಅನುಮಾನ: ಕರ್ನಾಟಕ ವಕೀಲನ ಅರ್ಜಿ ವಜಾ!
ರೂಪಾಂತರಿ ಅಲ್ಲ, ಉಪತಳಿ- ಡಾ ಮಂಜುನಾಥ:
ರಾಜ್ಯದಲ್ಲಿ ‘ಎವೈ 4.2’ ರೂಪಾಂತರಿ ವೈರಾಣು ಪತ್ತೆಯಾಗಿರುವ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಟಿಎಸಿ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಈ ರೂಪಾಂತರಿ ವೈರಾಣು ಹೊಸದಲ್ಲ. ಎರಡನೇ ಅಲೆಗೆ ಕಾರಣವಾದ ಹಳೆಯ ಡೆಲ್ಟಾವೈರಸ್‌ನ ಉಪ ತಳಿ. ಸಣ್ಣ ಪುಟ್ಟಬದಲಾವಣೆಗಳೊಂದಿಗೆ ಈಗ ಕಾಣಿಸಿಕೊಂಡಿದೆ. ಜರ್ಮನಿ, ಬ್ರಿಟನ್‌ಗಳಲ್ಲಿ ಡೆಲ್ಟಾವೈರಸ್‌ನಿಂದ ಎರಡನೇ ಅಲೆ ಉಂಟಾಗಿರಲಿಲ್ಲ. ಹೀಗಾಗಿ ಅವರಿಗೆ ‘ಎವೈ 4.2’ ವೈರಾಣು ಕಾಡುತ್ತಿದೆ. ಆದರೆ, ನಮ್ಮಲ್ಲಿ ಎರಡನೇ ಅಲೆ ಉಂಟಾದ ಸೋಂಕು ಹಾಗೂ ಕೊರೋನಾ ಲಸಿಕೆಯಿಂದ ಪ್ರತಿಕಾಯಗಳು ಉತ್ಪತ್ತಿಯಾಗಿರುವುದರಿಂದ ಈ ವೈರಾಣು ಗಂಭೀರ ಪ್ರಮಾಣದಲ್ಲಿ ಹರಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
3ನೇ ಅಲೆ ಸಾಧ್ಯತೆ ಜೀವಂತ:
ಆದರೆ, ರಾಜ್ಯದಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಜೀವಂತವಾಗಿದೆ. ಯಾವಾಗ ಬರುತ್ತದೆ ಹಾಗೂ ಯಾವ ರೂಪದಲ್ಲಿ ಬರುತ್ತದೆ ಎಂಬುದು ಗೊತ್ತಿಲ್ಲ. ಹೆಚ್ಚೆಚ್ಚು ಗುಂಪು ಸೇರುವುದು, ಸಭೆ-ಸಮಾರಂಭ ನಡೆಸುವುದನ್ನು ಬಿಡಬೇಕು. ಪ್ರಸ್ತುತ ಲಸಿಕೆ ನೀಡುತ್ತಿರುವುದರಿಂದ ಮೂರನೇ ಅಲೆಯಿಂದ ಜೀವ ಹಾನಿ ಕಡಿಮೆ ಇರಬಹುದು. ಆದರೆ, ಮೂರನೇ ಅಲೆ ಬಗ್ಗೆ ನಿರ್ಲಕ್ಷ್ಯ ವಹಿಸುವ ಬದಲು ಎರಡನೇ ಅಲೆಯ ವೇಳೆ ಉಂಟಾದ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡೇ ಸಾರ್ವಜನಿಕರು ವರ್ತಿಸಬೇಕು ಎಂದು ಎಚ್ಚರಿಕೆ ನೀಡಿದರು.
ಹೊಸ ಡೇಂಜರಸ್ ವೈರಸ್ ಪತ್ತೆ - ತಜ್ಞರೊಂದಿಗೆ ಚರ್ಚೆ
ಆತಂಕಪಡುವ ಅಗತ್ಯವಿಲ್ಲ:
ಟಿಎಸಿಯ ಮತ್ತೊಬ್ಬ ಸದಸ್ಯ ಡಾ.ಗಿರಿಧರ್ ಬಾಬು ಪ್ರಕಾರ, ಎವೈ 4.2 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿ ಮೂರು ತಿಂಗಳು ಕಳೆದಿವೆ. ಇದು ಡೆಲ್ಟಾವೈರಸ್‌ನ ಉಪ ತಳಿಯಾಗಿದ್ದು, ಈವರೆಗೆ ನಡೆದಿರುವ ಸಂಶೋಧನೆ ಪ್ರಕಾರ ಹೆಚ್ಚು ಪ್ರಭಾವಶಾಲಿಯಲ್ಲ. ರಾಜ್ಯದಲ್ಲೂ ಈ ಸೋಂಕು ಹೆಚ್ಚು ಮಂದಿಗೆ ಹರಡಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅಗತ್ಯ ಎಂದು ಹೇಳಿದರು.
ಡೆಲ್ಟಾತಳಿಯ ಮೊಮ್ಮಗ:
ವೈರಾಣು ವಂಶವಾಹಿ ತಜ್ಞ ಹಾಗೂ ಎಚ್‌ಸಿಜಿ ಆಸ್ಪತ್ರೆ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಿಶಾಲ್ ರಾವ್ ಪ್ರಕಾರ, ಡೆಲ್ಟಾತಳಿಯು ‘ಎವೈ 1 ರಿಂದ ಎವೈ 12’ ವರೆಗೂ 12 ರೂಪಾಂತರಗಳನ್ನು ಹೊಂದಿದೆ. ಈ ಪೈಕಿ ಎವೈ 1 ಮೊದಲ ರೂಪಾಂತರವೇ ಡೆಲ್ಟಾಪ್ಲಸ್. ಸದ್ಯ ಎವೈ 4 ರೂಪಾಂತರದಿಂದ ಎರಡು ಉಪ ತಳಿಗಳು ಹುಟ್ಟಿಕೊಂಡಿವೆ. ಅದರಲ್ಲಿ ಒಂದೇ ಈ ಎವೈ 4.2. ಆಡು ಭಾಷೆಯಲ್ಲಿ ಹೇಳುವುದಾದರೆ ಇದನ್ನು ಡೆಲ್ಟಾತಳಿಯ ಮೊಮ್ಮಗ ಎನ್ನಬಹುದು. ಸದ್ಯ ಇದರ ಪ್ರಭಾವದ ಬಗ್ಗೆ ಯು.ಕೆಯಲ್ಲಿ(United Kingdom) ಸಂಶೋಧನೆ ನಡೆದಿದ್ದು, ಶೇ.10 ರಷ್ಟು ಗಂಭೀರ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ರೂಪಾಂತರಗಳು ಹೆಚ್ಚಳವಾಗಲಿದ್ದು, ವರ್ಷಾಂತ್ಯದವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಗಾಬರಿ ಬೇಡ, ಲಸಿಕೆಗೆ ಆದ್ಯತೆ ನೀಡಿ:
ಮಣಿಪಾಲ್ ಆಸ್ಪತ್ರೆ(Mainapal Hospital) ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ಈ ಹೊಸ ರೂಪಾಂತರ ಕಾಣಿಸಿಕೊಂಡು ಮೂರು ತಿಂಗಳಾಗಿದೆ. ವರದಿಯಾಗಿರುವುದು ಮಾತ್ರ ಈಗ. ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಪಡೆಯುವ ಬಗ್ಗೆ ಹಾಗೂ ಕೊರೋನಾ ಮಾರ್ಗಸೂಚಿ ಪಾಲನೆ ಬಗ್ಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮಣಿಪಾಲ್ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ, ವಿವಿಧ ವಿದೇಶಿ ಅಧ್ಯಯನಗಳ ಪ್ರಕಾರ ಕೊರೋನಾದ ಅಲ್ಫಾ ಮತ್ತು ಡೆಲ್ಟಾತಳಿಯಲ್ಲಿ ಸೋಂಕು ಹರಡುವಿಕೆ ಪ್ರಮಾಣ ಶೇ.60ರಷ್ಟಿತ್ತು. ಅವುಗಳಿಗೆ ಹೋಲಿಸಿದರೆ ಎವೈ 4.2 ತಳಿಯ ಸೋಂಕಿನ ಹರಡುವಿಕೆ ಪ್ರಮಾಣ ಶೇ.10 ರಷ್ಟು ಮಾತ್ರ ಇದೆ. ಹೀಗಾಗಿ, ಹೆದರುವ ಆತಂಕವಿಲ್ಲ. ಆದರೆ ಮುಂದಿನ ಮೂರು ತಿಂಗಳು ಎಚ್ಚರ ವಹಿಸಬೇಕು ಎಂದರು.