ಬೆಂಗಳೂರು(ಫೆ.18): ದೇಶದಲ್ಲಿ ಪತ್ತೆಯಾಗುತ್ತಿರುವ ಶೇ.75ರಷ್ಟುಕೊರೋನಾ ಸೋಂಕು ಪ್ರಕರಣಗಳು ಮಹಾರಾಷ್ಟ್ರ ಹಾಗೂ ಕೇರಳ ಎರಡೇ ರಾಜ್ಯಗಳಿಂದ ವರದಿಯಾಗುತ್ತಿವೆ. ಅಲ್ಲದೆ, ದೇಶದ ಶೇ.70ರಷ್ಟುಸಕ್ರಿಯ ಪ್ರಕರಣಗಳು ಕರ್ನಾಟಕಕ್ಕೆ ಅಂಟಿಕೊಂಡಿರುವ ಈ ಎರಡು ರಾಜ್ಯಗಳಲ್ಲಿವೆ. ಹೀಗಿದ್ದರೂ ರಾಜ್ಯ ಸರ್ಕಾರ ಕೇರಳದಿಂದ ಬರುವವರಿಗೆ ಮಾತ್ರ ಕೊರೋನಾ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಿದ್ದು, ಮಹಾರಾಷ್ಟ್ರದಿಂದ ಆಗಮಿಸುವ ಸೋಂಕಿತರನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ಧೋರಣೆಗೆ ತಜ್ಞರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಬೇಕೆಂದು ಪೇಚಿಗೀಡಾದ ರಾಹುಲ್ ಗಾಂಧಿ!

ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿರುವ ಪ್ರಕರಣಗಳು ಮಹಾರಾಷ್ಟ್ರ ಸರ್ಕಾರ ಹಾಗೂ ಅಲ್ಲಿನ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೇ ಲಾಕ್‌ಡೌನ್‌ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಮಹಾರಾಷ್ಟ್ರದಿಂದ ಉಂಟಾಗಬಹುದಾದ ಅಪಾಯವನ್ನು ತಡೆಯಲು ರಾಜ್ಯ ಸರ್ಕಾರ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂದು ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡೇ ರಾಜ್ಯದಲ್ಲಿ ದೇಶದ ಶೇ.75 ಪ್ರಕರಣ:

ಮಂಗಳವಾರ ದೇಶದಲ್ಲಿ ವರದಿಯಾಗಿದ್ದ ಒಟ್ಟು ಪ್ರಕರಣಗಳಲ್ಲಿನ ಶೇ.75ರಷ್ಟುಮಹಾರಾಷ್ಟ್ರ ಹಾಗೂ ಕೇರಳ ಎರಡೇ ರಾಜ್ಯಗಳಿಂದ ವರದಿಯಾಗಿವೆ. ದೇಶದಲ್ಲಿ ಒಟ್ಟು 11,574 ಪ್ರಕರಣಗಳು ವರದಿಯಾಗಿದ್ದರೆ ಮಹಾರಾಷ್ಟ್ರದಲ್ಲಿ 3,663 ಪ್ರಕರಣ ಹಾಗೂ ಕೇರಳದಲ್ಲಿ 4,937 ಪ್ರಕರಣ ವರದಿಯಾಗುವ ಮೂಲಕ ದೇಶದ ಒಟ್ಟು ಸೋಂಕಿನಲ್ಲಿ ಮುಕ್ಕಾಲು ಪಾಲು ಆ ರಾಜ್ಯದಲ್ಲೇ ಇವೆ. ಅಲ್ಲದೆ, ದೇಶದಲ್ಲಿ ಈ ದಿನ ಒಟ್ಟು 100 ಸಾವು ಸಂಭವಿಸಿದ್ದರೆ, ಮಹಾರಾಷ್ಟ್ರದಲ್ಲಿ 39, ಕೇರಳದಲ್ಲಿ 18 ಸೇರಿ ಶೇ.50ರಷ್ಟುಸಾವು ಎರಡೂ ರಾಜ್ಯಗಳಿಂದಲೇ ವರದಿಯಾಗಿದೆ. ಜೊತೆಗೆ ದೇಶದ ಒಟ್ಟು ಸೋಂಕಿತರ ಪೈಕಿ ಶೇ.70ರಷ್ಟುಸಕ್ರಿಯ ಪ್ರಕರಣಗಳು ಸಹ ಎರಡೂ ರಾಜ್ಯಗಳಲ್ಲೇ ಇವೆ.

ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ರಾಜ್ಯ ಸರ್ಕಾರವು ಮಂಗಳವಾರ ರಾತ್ರಿ ಕೇರಳದಿಂದ ರಾಜ್ಯಕ್ಕೆ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ತರಬೇಕು. ಇದನ್ನು ಪರಿಶೀಲಿಸಿಯೇ ರಾಜ್ಯಕ್ಕೆ ಆಗಮಿಸಲು ಅನುಮತಿಸಬೇಕು ಎಂಬ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೇರಳ ಕಟ್ಟೆಚ್ಚರ: ಕಠಿಣ ಮಾರ್ಗಸೂಚಿ ಜಾರಿ!

ಆದರೆ, ಕೇರಳದಂತೆಯೇ ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದಿಂದ ಬರುವವರನ್ನು ನಿಯಂತ್ರಿಸಲು ಅಥವಾ ಪರೀಕ್ಷಿಸಿ ಒಳಗೆ ಬಿಟ್ಟುಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುರಕ್ಷಿತವಾಗಿರುವ ರಾಜ್ಯದಲ್ಲಿ ನಿರ್ಲಕ್ಷ್ಯ:

ಪ್ರಸ್ತುತ ರಾಜ್ಯದಲ್ಲಿ ಮಂಗಳವಾರ 438, ಬುಧವಾರ 378 ಪ್ರಕರಣ ಮಾತ್ರ ವರದಿಯಾಗಿದೆ. ಸರಾಸರಿ ಪಾಸಿಟಿವಿಟಿ ದರ ಶೇ.0.60ರಷ್ಟುಮಾತ್ರವಿದೆ. ಹೀಗಾಗಿ ರಾಜ್ಯ ಸದ್ಯಕ್ಕೆ ಸುರಕ್ಷಿತವಾಗಿದೆ.

ಇನ್ನು ಫೆಬ್ರವರಿ ಎರಡನೇ ವಾರದ ಮೊದಲ ದಿನದಿಂದಲೂ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಬೈ, ಪುಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಹೀಗಾಗಿ ಮದುವೆ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ 50 ಮಂದಿಗೆ ಮಾತ್ರ ಅವಕಾಶ ಸೀಮಿತಗೊಳಿಸಿ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ರಾರ‍ಯಲಿ, ಪ್ರತಿಭಟನೆ, ಮತ್ತಿತ್ತರ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ. ಕೊರೋನಾ ಮಾರ್ಗಸೂಚಿ ಪಾಲಿಸದ ಸಾರ್ವಜನಿಕರ ಮೇಲೆ ದಂಡಾಸ್ತ್ರ ಪ್ರಯೋಗಕ್ಕೆ ಆದೇಶಿಸಿದೆ. ಇನ್ನು ಮುಂದೆಯೂ ಇದೇ ರೀತಿ ಪ್ರಕರಣಗಳು ವರದಿಯಾದರೆ ಲಾಕ್‌ಡೌನ್‌ ಘೋಷಿಸಬೇಕಾಗುತ್ತದೆ ಎಂದು ಖುದ್ದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಮುಂಬೈ ಮೇಯರ್‌ ಕಿಶೋರ್‌ ಪೆಡ್ನೇಕರ್‌ ಲಾಕ್‌ಡೌನ್‌ ಮಾಡುವ ಮುನ್ನೆಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಅಲ್ಲಿಂದ ಬರುವವರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.