ಬೆಂಗಳೂರು(ಫೆ.17): ಬೆಂಗಳೂರಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಂದ ಕೋವಿಡ್‌ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆ ಒಳಗಿನ ಆರ್‌ಟಿ-ಪಿಸಿಆರ್‌ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸುವ ಜೊತೆಗೆ ಹಲವು ಮಾರ್ಗಸೂಚಿಗಳನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.

ಕೇರಳದಿಂದ ಬಂದವರಲ್ಲಿ ಕೋವಿಡ್‌ ಪಾಸಿಟಿವ್‌ ಕಂಡುಬಂದರೆ ಅವರ ಸ್ಯಾಂಪಲ್‌ ಅನ್ನು ಜೀನೋಮ… ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುವುದು. ಕೇರಳದಿಂದ ದಿನನಿತ್ಯ ಬಂದು ಹೋಗುವ ವಿದ್ಯಾರ್ಥಿಗಳಿದ್ದರೆ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಬೇಕು. ಹಾಸ್ಟೆಲ್‌ನಲ್ಲಿ ಇರುವ ಕೇರಳದ ವಿದ್ಯಾರ್ಥಿಗಳು ಬಲವಾದ ಕಾರಣಗಳಿಲ್ಲದಿದ್ದರೆ ಆಗಾಗ ತಮ್ಮ ಮನೆಗೆ ಹೋಗಿ ಬರುವುದು ಸಲ್ಲದು ಎಂದು ಸ್ಪಷ್ಟಪಡಿಸಲಾಗಿದೆ.

2 ವಾರದ ಹಿಂದಷ್ಟೇ ದತ್ತು ಸ್ವೀಕರಿಸಿದ್ದ ತಾಯಿಯನ್ನೇ ಕಳೆದುಕೊಂಡ 6ರ ಕಂದ!

ಹಾಗೆಯೇ ಕೇರಳದಿಂದ ಬಂದು ಹೋಟೆಲ್‌, ರೆಸಾರ್ಟ್‌, ಹಾಸ್ಟೆಲ್‌, ಹೋಮ್‌ ಸ್ಟೇ ಮುಂತಾದ ಕಡೆ ಉಳಿದುಕೊಳ್ಳುವವರು 72 ಗಂಟೆಯೊಳಗಿನ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ. ಕಳೆದ ಎರಡು ವಾರಗಳಲ್ಲಿ ರಾಜ್ಯಕ್ಕೆ ಕೇರಳದಿಂದ ಬಂದಿರುವವರನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು. ಬೆಂಗಳೂರಿನÜ ಅಪಾರ್ಟ್‌ಮೆಂಟ್‌, ವಸತಿ ಸಂಕೀರ್ಣಗಳಲ್ಲಿ ಕೇರಳದಿಂದ ಆಗಮಿಸಿರುವ ವ್ಯಕ್ತಿಯ 72 ಗಂಟೆಯ ಒಳಗಿನ ಹಾಗೂ ಏಳು ದಿನಗಳ ಸಿಂಧುತ್ವ ಇರುವ ನೆಗೆಟಿವ್‌ ಆರ್‌ಟಿಪಿಸಿಆರ್‌ ವರದಿ ಇರುವುದನ್ನು ಸಂಬಂಧಪಟ್ಟವರು ಖಾತ್ರಿಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಐದಕ್ಕಿಂತ ಹೆಚ್ಚು ಪ್ರಕರಣಗಳಿದ್ದಲ್ಲಿ ಕಂಟೈನ್ಮೆಂಟ್‌ ವಲಯ:

ಶೈಕ್ಷಣಿಕ ಸಂಸ್ಥೆಗಳು, ವಸತಿ ನಿಲಯಗಳಲ್ಲಿ ಐದಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಲಾಗುವುದು, ಕಂಟೈನ್ಮೆಂಟ್‌ ವಲಯ ಘೋಷಣೆ ಮಾಡಿದ ಏಳು ದಿನಗಳ ಬಳಿಕ ಎಲ್ಲರೂ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಶಿಕ್ಷಣ ಸಂಸ್ಥೆ, ಹಾಸ್ಟೆಲ್‌ಗಳಲ್ಲಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ, ಸೋಂಕಿನ ಲಕ್ಷಣಗಳಿದ್ದವರ ಮೇಲೆ ನಿಗಾ ವಹಿಸುವುದು ಆಯಾ ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿ. ಹಾಸ್ಟೆಲ್‌ ಮತ್ತು ತರಗತಿಗಳಲ್ಲಿ ನೋಡಲ್‌ ವ್ಯಕ್ತಿಯೊಬ್ಬರು ಇರಲೇಬೇಕು. ಅವರು ವಿದ್ಯಾರ್ಥಿಗಳ ಆರೋಗ್ಯ ಮತ್ತು ಕೋವಿಡ್‌-19ರ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯ ಮೇಲೆ ನಿಗಾ ಇಡಬೇಕು ಎಂದು ಸರ್ಕಾರ ಸೂಚಿಸಿದೆ.

ಕೊರೋನಾ : ಬೆಂಗಳೂರಿಗೆ ಬಂದವರಿಗೆ ಕ್ವಾರಂಟೈನ್‌!

ಕೋವಿಡ್‌ ನೋಡಲ್‌ ಅಧಿಕಾರಿಯ ಅನುಮತಿಯಿಲ್ಲದೆ ಹಾಸ್ಟೆಲ್‌ನೊಳಗೆ ಬಂದು ವಿದ್ಯಾರ್ಥಿಗಳನ್ನು ಹೊರಗಿನವರು ಭೇಟಿಯಾಗಲು ಅವಕಾಶವಿಲ್ಲ. ಕೇರಳದಿಂದ ಮತ್ತು ಕೇರಳದ ಮೂಲಕ ಪ್ರಯಾಣಿಸುವ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಸಕ್ಷಮ ಪ್ರಾಧಿಕಾರದ ಬಳಿ ಇರಬೇಕು. ಸಾಮಾಜಿಕ ಅಂತರ ಕಾಪಾಡಲು ಅನುಕೂಲವಾಗುವಂತೆ ಹಾಸ್ಟೆಲ…ನಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳು ಇರಬೇಕು. ವಿದ್ಯಾರ್ಥಿಗಳು ಗುಂಪುಗೂಡುವ ಕಾರ್ಯಕ್ರಮ, ಗುಂಪಾಗಿ ಊಟ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಸಂಸ್ಥೆಯ ಮುಖ್ಯಸ್ಥರೇ ಹೊಣೆ

ಶಿಕ್ಷಣ ಸಂಸ್ಥೆಗಳು, ವಸತಿ ಶಾಲೆಗಳು ಹಾಸ್ಟೆಲ್‌ಗಳಲ್ಲಿ ಐದಕ್ಕಿಂತ ಹೆಚ್ಚು ಕೋವಿಡ್‌-19 ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ‘ಕಂಟೈನ್‌ಮೆಂಟ್‌ ಜೋನ್‌’ ಎಂದು ಘೋಷಿಸಲಾಗುವುದು. ಆದ್ದರಿಂದ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆ ಮತ್ತು ಸಾಂಕ್ರಾಮಿಕತೆ ತಡೆಯುವ ಕ್ರಮಗಳನ್ನು ಕೈಗೊಳ್ಳುವುದು ಸಂಸ್ಥೆಗಳ ಮುಖ್ಯಸ್ಥರ ಜವಾಬ್ದಾರಿ. ಒಂದು ವೇಳೆ ನಿಯಮ ಮುರಿದರೆ ಅಂತಹ ಸಂಸ್ಥೆಯ ಮುಖ್ಯಸ್ಥರನ್ನು ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿಯಲ್ಲಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.