ನಗರದಲ್ಲಿ ಇಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮೂರನೇ ದಿನದ ನಗರ ಪ್ರದಕ್ಷಿಣೆ ಮಾಡಿದರು. ಈ ವೇಳೆ ಅನೇಕ ಸಮಸ್ಯೆಗಳು ಕಣ್ಣಿಗೆ ಬಿದ್ದವು. ಅನೇಕರು ತಮ್ಮ ಸಮಸ್ಯೆಗಳನ್ನು ಕುಮಾರಸ್ವಾಮಿ ಬಳಿ ತೋಡಿಕೊಂಡರು.
ವರದಿ: ಸುರೇಶ್ ಎ ಎಲ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಮೇ.23): ನಗರದಲ್ಲಿ ಇಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮೂರನೇ ದಿನದ ನಗರ ಪ್ರದಕ್ಷಿಣೆ ಮಾಡಿದರು. ಈ ವೇಳೆ ಅನೇಕ ಸಮಸ್ಯೆಗಳು ಕಣ್ಣಿಗೆ ಬಿದ್ದವು. ಅನೇಕರು ತಮ್ಮ ಸಮಸ್ಯೆಗಳನ್ನು ಕುಮಾರಸ್ವಾಮಿ ಬಳಿ ತೋಡಿಕೊಂಡರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಇನ್ನೂ ಎರಡು ದಿನ ನಗರದಲ್ಲಿ ಪ್ರವಾಸ ಮಾಡುತ್ತೇನೆ.
ಎಲ್ಲಾ ಮಾಹಿತಿ ಸಂಗ್ರಹಿಸಿದ ನಂತರ ನಗರ ಪ್ರದಕ್ಷಿಣೆ ವೇಳೆ ಕಂಡ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಒಂದು ತಿಂಗಳು ನೋಡುತ್ತೇನೆ. ಸ್ಪಂದಿಸದಿದ್ದಲ್ಲಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್, ಗೋವಿಂದರಾಜ ನಗರ, ಹೊರಮಾವು ಮತ್ತಿತರ ಕಡೆ ಮಳೆ ಹಾನಿ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಎಚ್ಡಿಕೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಕೆರೆ ನುಂಗಿರುವುದೇ ಸಮಸ್ಯೆಗೆ ಕಾರಣ: ಬೆಂಗಳೂರು ನಗರಕ್ಕೆ ಭವಿಷ್ಯದ ಯೋಜನೆ ರೂಪಿಸಲಿಲ್ಲ. ಅದರ ಪರಿಣಾಮವೇ ಮಳೆಯಾದಾಗ ಸಂಭವಿಸುತ್ತಿರುವ ಸಮಸ್ಯೆಗಳು. ಕೆರೆ ನುಂಗಿರುವುದು ದೊಡ್ಡ ತಪ್ಪು. ರಾಜಕಾಲುವೆ ಸರಿಯಾದ ನಿರ್ವಹಣೆ ಸರಿಯಾಗಿ ಆಗಿಲ್ಲ. ಒಳಚರಂಡಿಗಳು ಒತ್ತಿಸಿದ್ದಾರೆ. ಡಬ್ಬರೀಸ್ ತುಂಬಿ ಕೆರೆ ಮುಚ್ಚಿಸುತ್ತಿದ್ದಾರೆ. ಕೆರೆಗಳಲ್ಲಿ ಶುದ್ದ ನೀರು ಮಳೆಗಾಲದ ನೀರು ಹೋಗಲು ದಾರಿ ಮಾಡಿದರೆ ಸರಿಯಾಗುತ್ತದೆ. ಬೋರ್‌ವೆಲ್ ನೀರು ಸರಿಯಾಗಿ ಕೊಡುತ್ತಿಲ್ಲ ಎಂದು ಅವರು ದೂರಿದರು. ನಾನು ಎರಡು ಬಾರಿ ಸಿಎಂ ಆದಾಗ ನಗರಕ್ಕೆ ಒಂದಿಷ್ಟು ಕಾರ್ಯಕ್ರಮ ಹಾಕಿದ್ದೆ. ಆದರೆ, ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದಾಗ ಅವರು ಯಾವುದಕ್ಕೂ ಬಿಡಲಿಲ್ಲ.
HDK City Rounds: ಕುಮಾರಸ್ವಾಮಿ ಎರಡನೇ ದಿನದ ಸಿಟಿ ರೌಂಡ್ಸ್: ಮಾಜಿ ಸಿಎಂ ಬಳಿ ಸಂಕಷ್ಟ ತೋಡಿಕೊಂಡ ಜನ
ಅಷ್ಟೆ ಅಲ್ಲ ನಾನು ಸಭೆ ಕೂಡ ಮಾಡುವಂತಿರಲಿಲ್ಲ ಎಂದು ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರು ಹೊರ ವಲಯದಲ್ಲೇ ಸಮಸ್ಯೆ ಹೆಚ್ಚಿದೆ. ನಾನು ಸಿಎಂ ಆದಾಗ ಸ್ಯಾಟಲೈಟ್ ಟೌನ್ ಮಾಡೋದಿಕ್ಕೆ ಹೊರಟಿದ್ದೆ ಎಂದ ಹೆಚ್‌ಡಿಕೆ, ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು. ಇದು ಕರೆಕ್ಟ್ ಬಿಬಿಎಂಪಿ ಅಲ್ಲ. ಇದು ಕರಪ್ಟ್ ಬಿಜೆಪಿ ಆಗಿದೆ ಎಂದು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ದಾವೋಸ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಬರಲು ಇನ್ನೂ ಐದು ದಿನಗಳು ಬೇಕಿದೆ. ಅಷ್ಟರೊಳಗೆ ಬೆಂಗಳೂರು ಪ್ರದಕ್ಷಿಣೆ ಹಾಕಿ ಸಮಗ್ರವಾಗಿ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಪೂರ್ಣ ಪ್ರಮಾಣದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಮಗ್ರ ಅಭಿವೃದ್ಧಿ: ನನ್ನ ಅವಧಿಯಲ್ಲಿ ಹೊರ ವಲಯದ ಪೆರಿಪೆರಲ್ ರಿಂಗ್ ರಸ್ತೆಗೆ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದೆ. ಇದುವರೆಗೂ ಒಂದು ಕಿಮೀ ಮುಂದಕ್ಕೆ ರಸ್ತೆ ಕೆಲಸ ಆಗಿಲ್ಲ. ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮಾದರಿ ನಗರವನ್ನಾಗಿ ಮಾಡುತ್ತೇನೆ. ಬೆಂಗಳೂರು ನಗರದ ಜನತೆಗೆ ವಾಗ್ದಾನ ಕೊಡುತ್ತೇನೆ. ಬೆಂಗಳೂರಿಗೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ. ಯಾರು ಏನೇ ಟೀಕೆ ಮಾಡಲಿ ನನ್ನ ಕೆಲಸ ನಾನು ಮಾಡುವೆ ಎಂದು ಹೇಳಿದರು.
ತಾತ್ಕಾಲಿಕ ಪರಿಹಾರದಿಂದ ಸಮಸ್ಯೆ ಬಗೆಹರಿಯುವುದಿಲ್ಲ: ನಾನು ಸಿಎಂ ಆಗಿದ್ದಾಗ ಐದು ಟೌನ್‌ಷಿಪ್ ಮಾಡಲು ತೀರ್ಮಾನಿಸಿದ್ದೆ. ಬಿಡದಿ ಬಳಿ ಒಂಬತ್ತು ಸಾವಿರ ಎಕರೆ ಪ್ರದೇಶದಲ್ಲಿ ಟೌನ್‌ಷಿಪ್ ಗೆ ತೀರ್ಮಾನಿಸಿದ್ದೆ. ಸುಮಾರು 60 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಬೇಕಿದ್ದ ಟೌನ್‌ಷಿಪ್ ಆಗಿತ್ತು. ನಮ್ಮ ಸರ್ಕಾರ ಹೋದ ಬಳಿಕ ಆ ಯೋಜನೆಯನ್ನು ಕಸದ ಬುಟ್ಟಿಗೆ ಹಾಕಿದರು. ಕೆರೆಗಳನ್ನು ನುಂಗಿಹಾಕಿದ್ದಾರೆ. ಕಾಲುವೆಗಳ ಮೇಲೆ ಕಟ್ಟಡ ಕಟ್ಟಲು ಅವಕಾಶ ಕೊಟ್ಟಿದ್ದಾರೆ. ಇದರಿಂದಾಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದರು.
HDK City Rounds: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಟಿ ರೌಂಡ್ಸ್: ನಗರದ 7 ಸಚಿವರ ಮೇಲೆ ವಾಗ್ದಾಳಿ
ರಿಪಬ್ಲಿಕ್ ಆಫ್ ಯಲಹಂಕ ಎಂಬ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಶನಿವಾರ ಯಲಹಂಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿ ವಿದ್ಯುತ್, ನೀರು, ರಸ್ತೆ ಮೂಲಭೂತ ಸೌಕರ್ಯಗಳೇ ಇಲ್ಲ. ನನ್ನ ಮುಂದೆ ಅಹವಾಲು ಹೇಳಲು ಮುಂದಾದವರಿಗೆ ಬೆದರಿಕೆ ಹಾಕಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಕಥೆಯೂ ಅದೇ ಆಗಿದೆ ಎಂದರು. ಯಲಹಂಕದಲ್ಲಿ ನಮ್ಮ ಪಕ್ಷದ ಮತಗಳು ಗಟ್ಟಿಯಾಗಿದೆ. ಕಳೆದ ಭಾರೀ ಎರಡನೇ ಸ್ಥಾನದಲ್ಲಿ ಇದ್ದೆವು. ಯಲಹಂಕ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪೈಪೋಟಿ ಕೊಡುತ್ತೇವೆ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ ಎ ಶರವಣ, ಹೆಚ್.ಎಂ.ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
