HDK City Rounds: ಕುಮಾರಸ್ವಾಮಿ ಎರಡನೇ ದಿನದ ಸಿಟಿ ರೌಂಡ್ಸ್: ಮಾಜಿ ಸಿಎಂ ಬಳಿ ಸಂಕಷ್ಟ ತೋಡಿಕೊಂಡ ಜನ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಕೂಡಾ ಹಲವು ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬೆಂಗಳೂರಿನ ಬ್ಯಾಟರಾಯನಪುರ, ಹೆಬ್ಬಾಳ, ಹಾಗೂ ಯಲಹಂಕ ಕ್ಷೇತ್ರದ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಿದರು.
ವರದಿ: ಸುರೇಶ್ ಎ ಎಲ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಮೇ.22): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಶನಿವಾರ ಕೂಡಾ ಹಲವು ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು (City Rounds) ಪರಿಶೀಲನೆ ನಡೆಸಿದರು. ಬೆಂಗಳೂರಿನ ಬ್ಯಾಟರಾಯನಪುರ, ಹೆಬ್ಬಾಳ, ಹಾಗೂ ಯಲಹಂಕ ಕ್ಷೇತ್ರದ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಿದರು. ನಾಗವಾರ ಕ್ಷೇತ್ರದಲ್ಲಿ ಪ್ರಮುಖ ರಾಜಕಾರಣಿ ಯೊಬ್ಬರು ಕಾಂಪೌಂಡ್ ನಿರ್ಮಾಣ ಮಾಸಿಕೊಂಡಿದ್ದೇ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಲು ಕಾರಣ ಅಂತಾ ಅಲ್ಲಿನ ನಿವಾಸಿಗಳು ಎಚ್ಡಿಕೆ ಬಳಿ ಅಳಲು ತೋಡಿಕೊಂಡರು. ಸಾಲಸೋಲ ಮಾಡಿ ಫ್ಲಾಟ್ ಖರೀದಿ ಮಾಡಿರುವ ಜನ ಇದೀಗ ಹೋಟೆಲ್ ಗಳಲ್ಲಿ ವಾಸ ಮಾಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಲೂಟಿ ಮಾಡಿದ್ದಾರೆ.
1994 ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ ಏಳು ನಗರಸಭೆ, ಪಟ್ಟಣ ಪಂಚಾಯ್ತಿ ಆಯ್ತು, ಆಗ ಅಗತ್ಯ ಮೂಲಭೂತ ಸೌಲಭ್ಯಗಳು ಇರಲಿಲ್ಲ, ಆಗ ದೇವೇಗೌಡರು 97 ವಾರ್ಡ್ ಮಾಡಿ ಏಳು ನಗರಸಭೆ, ಒಂದು ಪಟ್ಟಣ ಪಂಚಾಯ್ತಿ ಮಾಡಿದರು. ಬೇರೆ ಹಳ್ಳಿಗಳಿಂದ ಬಂದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದರು. ನಾನು ಆಕಸ್ಮಿಕವಾಗಿ ಸಿಎಂ ಆದವನು,ಆ ಸಂಧರ್ಭದಲ್ಲಿ ಮೆಟ್ರೋ ಯೋಜನೆಗೆ ಗುತ್ತಿಗೆದಾರ ಯಾರೂ ಅಂತಲೂ ಯೋಚಿಸದೇ ಹಣ ಬಿಡುಗಡೆ ಮಾಡಿದ್ದೆ. ಈಗಿನವರ ತರಹಾ ಕಮಿಷನ್ ಆರೋಪಗಳು ಆಗ ಇರಲಿಲ್ಲ, ನಮ್ಮ ಮೇಲೆ ಇಂದಿನ ಸಚಿವರುಗಳು ಲಘುವಾಗಿ ಮಾತನಾಡುತ್ತಿದ್ದಾರೆ. ಮೊದಲು ಬೆಂಗಳೂರಿಗೆ ಅವರ ಕೊಡುಗೆ ಏನು ಅಂತಾ ಹೇಳಲಿ ಅಂತಾ ಕುಮಾರಸ್ವಾಮಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮೇಲೆ ಕಿಡಿ ಕಾರಿದರು.
HDK City Rounds: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಟಿ ರೌಂಡ್ಸ್: ನಗರದ 7 ಸಚಿವರ ಮೇಲೆ ವಾಗ್ದಾಳಿ
ಯಲಹಂಕ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಬಳಿಗೆ ಕುಮಾರಸ್ವಾಮಿ ಹೋದಾಗ ಅಲ್ಲಿಯೂ ಕೆಲ ನಿವಾಸಿಗಳು ಅಳಲು ತೋಡಿಕೊಂಡರು. ಅಲ್ಲದೇ ಹಿಂದಿನ ದಿನವೇ ಯಲಹಂಕ ಕ್ಷೇತ್ರದ ಶಾಸಕರು ಜನರನ್ನು ಕಳಿಸಿ ಕುಮಾರಸ್ವಾಮಿ ಬಂದರೆ ಯಾರೂ ಕೂಡಾ ಕುಮಾರಸ್ವಾಮಿ ಬಳಿ ಕಷ್ಟಗಳನ್ನು ಹೇಳಿಕೊಳ್ಳಬಾರದೆಂದು ಹೆದರಿಸಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂತು. ಈ ವಿಚಾರಕ್ಕೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು. ಯಲಹಂಕ ಕ್ಷೇತ್ರದ ಚಿಕ್ಕ ಬೆಟ್ಟ ಹಳ್ಳಿಯಲ್ಲಿ ಒಂದು ಸಮುದಾಯದ ಜನ ಹೆಚ್ಚಾಗಿದ್ದಾರೆ.ಅಲ್ಲಿ ಜನರು ಮತ ನೀಡಲ್ಲ ಎಂಬ ಕಾರಣಕ್ಕಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಇರುವುದೂ ಗಮನಕ್ಕೆ ಬಂತು. ಇದೇ ಪರಿಸ್ಥಿತಿ ಮುಂದುವರೆದರೆ ಜೆಡಿಎಸ್ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.
ಆರ್ ಅಶೋಕ್, ವಿ ಸೋಮಣ್ಣಗೆ ಎಚ್ಡಿಕೆ ತಿರುಗೇಟು: ಮಾಜಿ ಸಿಎಂ ಕುಮಾರಸ್ವಾಮಿ ಸಿಟಿ ರೌಂಡ್ಸ್ ಗೆ ವ್ಯಂಗ್ಯ ವಾಡಿದ್ದ ವಿ ಸೋಮಣ್ಣ ಅವರಿಗೆ ಕುಮಾರಸ್ವಾಮಿ ಸರಿಯಾಗೇ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ನಡೆದಾಡುತ್ತಿರುವುದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದ ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನಮ್ಮ ಆರೋಗ್ಯದ ಬಗ್ಗೆ ನೋಡಿಕೊಳ್ಳೋಕೆ ವೈದ್ಯರುಗಳು ಇದ್ದಾರೆ. ಮೊದಲು ಸಚಿವರುಗಳಾಗಿ ನೀವು ನಿಮ್ಮ ಜವಾಬ್ದಾರಿ ಅರಿಯಿರಿ.
ನಿಮ್ಮ ಹಾಗೇ ನೀರು, ಕರೆಂಟು ಕಟ್ ಮಾಡಿಸಿ ಸಿಟಿ ರೌಂಡ್ಸ್ ನಾಟಕವಾಡಿ, ಜನರ ಮುಂದೆ ಅಧಿಕಾರಿಗಳನ್ನು ಬೈಯುವಂತೆ ಮಾಡಿ, ಮತ್ತೆ ನೀರು, ಕರೆಂಟ್ ಕನೆಕ್ಷನ್ ಕೊಡಿಸುವ ನಾಟಕ ಮಾಡಲು ನಮಗೆ ಬರೋದಿಲ್ಲ, ನೀವು ಸಚಿವರುಗಳಾಗಿ ಏನು ಮಾಡ್ತಿದ್ದೀರಾ ಅಂತಾ ಗೊತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನು ಜೆಡಿಎಸ್ ಕುಡುಕ ರಾಜಕಾರಣದ ಬಗ್ಗೆ ಟೀಕೆ ಮಾಡಿರುವ ಸಚಿವ ಆರ್ ಅಶೋಕ್‌ಗೂ ತಿರುಗೇಟು ನೀಡಿರುವ ಕುಮಾರಸ್ವಾಮಿ ಮೋದಿ ಹೆಸರು ಹೇಳಿಕೊಂಡು ಮತ ಪಡೆದಿದ್ದು ಸಾಕು, ನಿಮ್ಮ ಪಕ್ಷದಲ್ಲಿ ಕೂಡ ಎಷ್ಟು ಕುಟುಂಬ ರಾಜಕಾರಣ ಇದೆ ಅಂತಾ ಈಗಾಗಲೇ ಸಾಕಷ್ಟು ಸಲ ಹೇಳಿದ್ದೇನೆ. ಪದೇ ಪದೇ ನನ್ನ ಕೆಣಕಬೇಡಿ ಎಂದು ಎಚ್ಚರಿಸಿದ್ದಾರೆ.
ಬೆಂಗ್ಳೂರು ಮಳೆ ಮುನ್ಸೂಚನೆ ಇದ್ದರೂ ಕ್ಯಾರೇ ಎನ್ನದ ಸರ್ಕಾರ: ಎಚ್‌ಡಿಕೆ
ಸಂತ್ರಸ್ತರಿಗೆ ನೆರವು ನೀಡಿದ ಎಚ್ಡಿಕೆ: ಮಳೆ ಹಾನಿ ವೀಕ್ಷಣೆ ಸಂಧರ್ಭದಲ್ಲಿ ಅನೇಕ ಜನರು ಕುಮಾರಸ್ವಾಮಿ ಬಳಿ ಅಳಲು ತೋಡಿಕೊಂಡರು. ನೀರು,ರಸ್ತೆ, ಬೀದಿದೀಪ ಗಳ ವ್ಯವಸ್ಥೆ ಸರಿಯಾಗಿಲ್ಲದೇ ಕಷ್ಟಪಡುತ್ತಿರುವುದನ್ನು ಮಾಜಿ ಸಿಎಂ ಬಳಿ ಹೇಳಿಕೊಂಡರು. ಇನ್ನೂ ಕೆಲವರು ತಮ್ಮ ಕುಟುಂಬ ಗಳಲ್ಲಿ ಇರುವ ಕಷ್ಟ ದ ಪರಿಸ್ಥಿತಿ ಗಳನ್ನು ಹೇಳಿಕೊಂಡರು.ವೀ ಸಂಧರ್ಭದಲ್ಲಿ ಕೆಲವರಿಗೆ ಕುಮಾರಸ್ವಾಮಿ ಹಣದ ಸಹಾಯವನ್ನೂ ಮಾಡಿದರು.