Asianet Suvarna News Asianet Suvarna News

HDK City Rounds: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಟಿ ರೌಂಡ್ಸ್: ನಗರದ 7 ಸಚಿವರ ಮೇಲೆ ವಾಗ್ದಾಳಿ

ಸತತ ಮಳೆಯಿಂದ ಹಾನಿಗೊಳಗಾಗಿರುವ ಬೆಂಗಳೂರಿನ ಪ್ರದೇಶಗಳಿಗೆ ಸಿಎಂ ಭೇಟಿ ಕೊಡ್ತಾ ಇರುವ ಬೆನ್ನಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡಾ ಸಿಟಿ ರೌಂಡ್ಸ್  ಶುರು ಮಾಡಿದ್ದಾರೆ. 

ex cm hd kumaraswamy city rounds on bengaluru rain gvd
Author
Bangalore, First Published May 20, 2022, 10:56 PM IST

ವರದಿ: ಸುರೇಶ್ ಎ ಎಲ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಮೇ.20): ಸತತ ಮಳೆಯಿಂದ (Rain) ಹಾನಿಗೊಳಗಾಗಿರುವ ಬೆಂಗಳೂರಿನ (Bengaluru) ಪ್ರದೇಶಗಳಿಗೆ ಸಿಎಂ ಭೇಟಿ ಕೊಡ್ತಾ ಇರುವ ಬೆನ್ನಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಕೂಡಾ ಸಿಟಿ ರೌಂಡ್ಸ್ (City Rounds)  ಶುರು ಮಾಡಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ನಗರ ಪ್ರದಕ್ಷಿಣೆ ಹಾಕಲಿರುವ ಎಚ್ಡಿಕೆ ಹಾನಿಗೊಳಗಾದ ಕುಟುಂಬಗಳಿಗೆ ಜೆಡಿಎಸ್‌ (JDS) ಪಕ್ಷದಿಂದ ತಕ್ಕಮಟ್ಟಿಗೆ ಪರಿಹಾರ ಕೂಡಾ ನೀಡಲು ಮುಂದಾಗಿದ್ದಾರೆ. ಇಂದು ದಾಸರಹಳ್ಳಿ ಕ್ಷೇತ್ರದ ಹಲವು ಪ್ರದೇಶಗಳಿಗೆ ಕುಮಾರಸ್ವಾಮಿ ಭೇಟಿ ಕೊಟ್ಟು ಜನರ ಯೋಗಕ್ಷೇಮ ವಿಚಾರಿಸಿದರು. ಕಳೆದ 15 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ, ಯಶವಂತಪುರ ಸೇರಿದಂತೆ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಹಿಟಾಚಿಯಲ್ಲಿ ಹಣವನ್ನು  ಬಗೆಯೋದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಭೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಲಸ ಮಾಡಲಿ ಕಿಡಿಕಾರಿದರು. ಈ ಸಚಿವರುಗಳ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ. ಅದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಬೆಳಗ್ಗೆ 8 ಗಂಟೆಯಿಂದ 12.30 ವರೆಗೂ ದಾಸರಹಳ್ಳಿ ಕ್ಷೇತ್ರದಲ್ಲಿ ಸಂಚಾರ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ಡಿಕೆ, 28 ಕ್ಷೇತ್ರಗಳಿಗೆ ಎಷ್ಟು ಹಣವನ್ನು 15 ವರ್ಷಗಳಲ್ಲಿ ಬಿಡುಗಡೆ ಮಾಡಿದ್ದಾರೆ ಮಾಹಿತಿ ಪಡೆಯುತ್ತೇನೆ. 

ಬೆಂಗ್ಳೂರು ಮಳೆ ಮುನ್ಸೂಚನೆ ಇದ್ದರೂ ಕ್ಯಾರೇ ಎನ್ನದ ಸರ್ಕಾರ: ಎಚ್‌ಡಿಕೆ

ಜನರ ಬದುಕಿನ ಪ್ರಶ್ನೆ. ಇದರಲ್ಲಿ ರಾಜಕಾರಣ ನಾನು ಮಾಡ್ತಿಲ್ಲ ಎಂದು ಹೇಳಿದರು. ಮಳೆಯಿಂದ ನಷ್ಟ ಆಗಿರುವ ಕುಟುಂಬಗಳಿಗೆ  ಸರ್ಕಾರ ಸರಿಯಾದ ಪರಿಹಾರ ಕೊಡಬೇಕು. ತೋರಿಕೆಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು.  ನಷ್ಟ ಆಗಿರುವ ಶೇ. 75 ದರಷ್ಟು ಪರಿಹಾರ ಕೊಡಬೇಕು. ಅದರಲ್ಲೂ ಅಧಿಕಾರಿಗಳು ಮತ್ತೆ ದುಡ್ಡು ಹೊಡೆಯಲು ನೋಡುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ನನ್ನ ಕಾಲದಲ್ಲಿ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ 750 ಕೋಟಿ ರೂ. ನೀಡಿದ್ದೆ. ಆಮೇಲೆ ರಾಜಕೀಯ ಮಾಡಿ ಹಣ ವಾಪಸ್ಸು ಪಡೆದರು. ನಾನು ಕೂಡ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭೇಟಿ ಮಾಡಿದ್ದೆ. ದಾಸರಹಳ್ಳಿ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿ ಅಂತ ಹತ್ತು ಸಾರಿ‌ ಮನವಿ ಮಾಡಿದೆ. ನಂತರ ಶಾಸಕರು‌ ಕೂಡ ಪ್ರತಿಭಟನೆ ‌ಮಾಡಿದರು. ಆದರೂ ಕೂಡ ಅನುಧಾನ ಬಿಡುಗಡೆ ಆಗಿಲ್ಲ ಎಂದು ಅವರು ದೂರಿದರು.

ಅದೇ ರಾಜರಾಜೇಶ್ವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಬೇರೆ ಬೇರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಹತ್ತು ವರ್ಷಗಳ ಕಾಲ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರ ಅಂತ ಗೊತ್ತು. ಅದರ ದಾಖಲೆ ತೆಗೆಸಿ ಮಾತನಾಡುತ್ತೇನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದಾಸರಹಳ್ಳಿಯಲ್ಲಿ ರಾಜಕೀಯ ಕಾರಣಕ್ಕೆ ಹಣ ಬಿಡುಗಡೆ ಮಾಡಿಲ್ಲ. ಇಲ್ಲಿ ಯಾದಗಿರಿ ಮತ್ತು‌ ಬೀದರ್ ಭಾಗದ ಜನರು ವಾಸ ಮಾಡುತ್ತಿದ್ದಾರೆ.  ಪಾಪ ಅವರು ಮುಗ್ಧ ಜನರು. ಅವರಿಗೆ ಸರಿಯಾಗಿ ರಸ್ತೆ, ಚರಂಡಿ ಇಲ್ಲ. ಈಗ ಮೂವತ್ತು ಕೋಟಿ‌ ಬಿಡುಗಡೆ ಮಾಡಿದ್ದಾರೆ. ಇಷ್ಟು ದೊಡ್ಡ ಕ್ಷೇತ್ರಕ್ಕೆ ಮೂವತ್ತು ಕೋಟಿ ಎಲ್ಲಿ ಸಾಲುತ್ತದೆ ಎಂದರು. ರಾಜಕಾಲುವೆಗೆ 1600 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೀರಾ. ಆದರೆ ಕಾಮಗಾರಿ ನಡೆಯುತ್ತಿಲ್ಲ. ವಿಳಂಬ ಆಗಲು ಕಾರಣ ಏನು ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಸಭೆ ಮಾಡಲು ಕಾಂಗ್ರೆಸ್ ‌ನಾಯಕರು ಬಿಡಲಿಲ್ಲ. 

ಕಾಂಗ್ರೆಸ್ ಸರ್ಕಾರ ಐದು ವರ್ಷ ಇತ್ತು. ಏನು ಅಭಿವೃದ್ಧಿ ಮಾಡಿದೆ. ಈಗ ಬಿಜೆಪಿ ಸರ್ಕಾರ ಇದೆ. ಮೂರು ವರ್ಷ ಆಗುತ್ತಾ ಬಂತು ಇವರು ಕೂಡ ಯಾವುದೇ ಅಭಿವೃದ್ಧಿ ‌ಮಾಡುತ್ತಿಲ್ಲ. ಅಲ್ಪ ಸ್ವಲ್ಪ ಮಾನ ಮರ್ಯಾದೆ ಇದ್ರೆ ಬೆಂಗಳೂರು ಅಭಿವೃದ್ಧಿ ಮಾಡಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಅವರೇ ಮಂತ್ರಿಗಳ ಕ್ಷೇತ್ರಕ್ಕೆ ಹೋಗಬೇಡಿ. ಜನರು ಸಮಸ್ಯೆ ಪಡುತ್ತಿರುವ  ಕ್ಷೇತ್ರಕ್ಕೆ ಹೋಗಿ. ಏಳು ಮಂದಿ ವಲಸೆ ಸಚಿವರು ಏನು ಮಾಡ್ತಿದ್ದಾರೆ. ಆ ಸಚಿವರ ಕ್ಷೇತ್ರಕ್ಕೆ ಯಾಕೆ ಹೋಗ್ತೀರಾ.1200 ಕೋಟಿ ಬಿಡುಗಡೆ ಮಾಡಿದ್ದೇನೆ ಅಂತ ಸಿಎಂ ಹೇಳ್ತಾರೆ. ಹಾಗಾದರೆ ಅ ಹಣ ಏನು ಆಯಿತು ಎಂದು ಪ್ರಶ್ನಿಸಿದರು. ನಗರ ಪ್ರದಕ್ಷಿಣೆ ಪೋಟೋ ಸೆಷನ್ ಆಗಬಾರದು. ನಗರ ಪ್ರದಕ್ಷಿಣೆ ಹಾಕಿದರೆ ಸಾಲದು. ಯಾವ ಕಡೆ ಸಮಸ್ಯೆ ಆಗಿದೆ ಪರಿಹಾರ ಮಾಡಿ. ಎಲ್ಲಿ ಹಣ ಪೋಲು ಆಗುತ್ತಿದೆ ಅದನ್ನು ಸರಿ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ ಹೆಚ್‌ಡಿಕೆ, ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಜನರ ಜೊತೆ ಚೆಲ್ಲಾಟ ಆಡಬೇಡಿ. 

ಹಣ ಮಾಡುವುದಕ್ಕೆ ಬೇರೆ ದಾರಿ ಇದೆ. ಹಣ ಲೂಟಿ ಮಾಡುವುದು ನಿಲ್ಲಿಸಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಆಗ್ರಹಿಸಿದರು. ಚಂಬಲ್ ಕಣಿವೆಗೆ ದರೋಡೆ ಮಾಡುವವರನ್ನು ನೋಡುವುದಕ್ಕೆ ಹೋಗುವುದು ಬೇಡ. ಇಲ್ಲೇ ಚಂಬಲ್ ಕಣಿಕೆ ದರೋಡೆಕೋರರು ಇದ್ದಾರೆ. ಜನರ ಹಣ ಲೂಟಿ ಮಾಡಬೇಡಿ. ಎರಡು ಹೊತ್ತು ಊಟಕ್ಕೆ ಯಾಕೆ ಇಷ್ಟು ಮಾಡ್ತೀರಾ ಎಂದು ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮುಖ್ಯಮಂತ್ರಿಗಳು ಹೇಳಿಕೆ ಕೊಡೋದು ಬೇಡ. ಕಾಮನ್ ಮ್ಯಾನ್ ಸಿಎಂ ಅಂತ ಆಗೋದು ಬೇಡ. ಸಮಸ್ಯೆ ಪರಿಹಾರ ಮಾಡಿ ಎಂದು ಒತ್ತಾಯಿಸಿದರು. ನಗರ ಪ್ರದಕ್ಷಿಣೆ ಸಮಯದಲ್ಲಿ ಮಳೆ ಹಾನಿ ಸಂತ್ರಸ್ತರಿಗೆ ಸಹಾಯ ಹಸ್ತ ಸಹ ನೀಡಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಜೊತೆಗೆ ದಾಸರ ಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸಾಥ್ ನೀಡಿದ್ದರು.

JDS Politics: ಇಬ್ರಾಹಿಂಗೆ ರಾಜಾಧ್ಯಕ್ಷ ಹುದ್ದೆಯನ್ನೇ ಕೊಟ್ಟಿದ್ದೇವೆ, ಪರಿಷತ್‌ ಟಿಕೆಟ್‌ ಇಲ್ಲ: ಎಚ್‌ಡಿಕೆ

ಹೆಚ್‌ಡಿಕೆ ಸಿಎಂ ಆಗಿದ್ದಿದ್ದರೆ ಇಂತಾ ಪರಿಸ್ಥಿತಿ  ಬರ್ತಾ ಇರಲಿಲ್ಲ: ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಮುಖ್ಯಮಂತ್ರಿ ಆಗಿದ್ದಿದ್ದರೆ ದಾಸರಹಳ್ಳಿ ಕ್ಷೇತ್ರಕ್ಕೆ ಇಂಥ ಕಷ್ಟದ ಸ್ಥಿತಿ ಬರುತ್ತಿರಲಿಲ್ಲ ಎಂದು ದಾಸರಹಳ್ಳಿ ಶಾಸಕ ಮಂಜುನಾಥ್ ಅವರು ನೋವು ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕ್ಷೇತ್ರದ ಪ್ರಗತಿಗೆ 700 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಅವರ ಸರಕಾರವನ್ನು ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಬಿಜೆಪಿ ಸರಕಾರವೂ ಆ ಅನುದಾನವನ್ನು ವಾಪಸ್ ಪಡುಕೊಂಡಿತು ಎಂದು ದೂರಿದರು. ಅಷ್ಟು ಅನುದಾನ ಕ್ಷೇತ್ರಕ್ಕೆ ಸಿಕ್ಕಿದ್ದರೆ ಇಂದು ಇಡೀ ದಾಸರಹಳ್ಳಿ ಕ್ಷೇತ್ರದ ರಾಜಕಾಲುವೆಗಳು, ಚರಂಡಿಗಳು ಉತ್ತಮವಾಗಿರುತ್ತಿದ್ದವು. ಆದರೆ ಅನುದಾನ ತಡೆ ಹಿಡಿದ ಕಾರಣ ದಾಸರಹಳ್ಳಿ ಕ್ಷೇತ್ರಕ್ಕೆ ಬಿಜೆಪಿ ದ್ರೋಹ ಮಾಡಿದೆ ಎಂದು ಮಂಜುನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios