ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರ ಆಪ್ತ ಹಾಗೂ ಸಿಡಿಎ ಮಾಜಿ ಅಧ್ಯಕ್ಷ ಆನಂದ್, ವಿಧವೆ ಮಹಿಳೆಯೊಂದಿಗೆ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದಾರೆಂದು ಆರೋಪಿಸಿ ಗ್ರಾಮಸ್ಥರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ಈ ಘಟನೆ ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿರುವ ಹೋಂ ಸ್ಟೇನಲ್ಲಿ ನಡೆದಿದೆ.
ಚಿಕ್ಕಮಗಳೂರು(ಜ.28): ವಿಧವೆ ಮಹಿಳೆ ಜೊತೆ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದನೆಂದು ಆರೋಪಿಸಿ, ಮಾಜಿ ಸಚಿವ ಸಿ.ಟಿ. ರವಿ ಅವರ ಆಪ್ತ ಹಾಗೂ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಮಾಜಿ ಅಧ್ಯಕ್ಷ ಆನಂದ್ ಅವರ ಮೇಲೆ ಹತ್ತಾರು ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹೋಂ ಸ್ಟೇ ಮೇಲೆ ಗ್ರಾಮಸ್ಥರ ದಾಳಿ: ಕೊಠಡಿಗಳ ತಪಾಸಣೆ
ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದ ವಿಧವಾ ಮಹಿಳೆಯೊಬ್ಬರ ಜೊತೆ ಸಿಡಿಎ ಮಾಜಿ ಅಧ್ಯಕ್ಷ ಆನಂದ್ ಎಂಬುವವರು ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಗ್ರಾಮಸ್ಥರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ವಾಸವಿದ್ದ ಮತ್ತಾವರ ಗ್ರಾಮದ ಹತ್ತಾರು ಜನರು ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿರುವ ಖಾಸಗಿ ಹೋಂ ಸ್ಟೇ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಪ್ರತಿಯೊಂದು ಕೊಠಡಿಗಳನ್ನು ತಪಾಸಣೆ ನಡೆಸಿದ್ದಾರೆ.
ಹಲ್ಲೆ ನಡೆಸಿರುವ ವಿಡಿಯೋದಲ್ಲಿ ಸೆರೆ
ಮಹಿಳೆಯ ಜೊತೆ ಸಿಕ್ಕಿಬಿದ್ದ ಆನಂದ್ ಅವರ ಮೇಲೆ ಕೆಲವು ವ್ಯಕ್ತಿಗಳು ಆನಂದ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


