ಹೊನ್ನಾವರದ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ, ಭಕ್ತರು ಅರ್ಪಿಸಿದ 'ತಟ್ಟೆ ಹಣ' ಹಂಚಿಕೆ ವಿಚಾರವಾಗಿ ಇಬ್ಬರು ಅರ್ಚಕರು ಭಕ್ತರ ಮುಂದೆಯೇ ನೂಕಾಟ-ತಳ್ಳಾಟ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ದಶಕಗಳ ಹಳೆಯ ಪೂಜಾ ಹಕ್ಕಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ಹೊನ್ನಾವರ (ಉತ್ತರಕನ್ನಡ) (ಜ.28): ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ದೇವರಿಗೆ ಭಕ್ತರು ಅರ್ಪಿಸಿದ 'ತಟ್ಟೆ ಹಣ'ದ ಹಂಚಿಕೆ ವಿಚಾರವಾಗಿ ಇಬ್ಬರು ಅರ್ಚಕರು ಭಕ್ತರ ಮುಂದೆಯೇ ನೂಕಾಟ-ತಳ್ಳಾಟ ನಡೆಸಿದ್ದಾರೆ. ದೈವ ಸನ್ನಿಧಿಯಲ್ಲಿ ನಡೆದ ಈ ಅಸಭ್ಯ ವರ್ತನೆಯನ್ನು ಕಂಡು ಬಂದಿದ್ದ ಭಕ್ತರು ಒಂದು ಕ್ಷಣ ದಂಗಾಗಿದ್ದಾರೆ.
ನರಸಿಂಹ ಭಟ್ vs ರಮಾನಂದ ಭಟ್: ವೈರಲ್ ಆಯ್ತು ವಿಡಿಯೋ
ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ ನಡುವೆ ಈ ಘರ್ಷಣೆ ನಡೆದಿದೆ. ಹಣಕ್ಕಾಗಿ ಒಬ್ಬರಿಗೊಬ್ಬರು ಜಗಳವಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭಕ್ತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಕ್ಕಿಗಾಗಿ ಹಳೇ ಜಗಳ: ಕೋರ್ಟ್ ಮೆಟ್ಟಿಲೇರಿರುವ ವಿವಾದ
ಇಡಗುಂಜಿ ದೇವಸ್ಥಾನದ ಪೂಜಾ ಹಕ್ಕು ಮತ್ತು ಆಡಳಿತಾತ್ಮಕ ಅಧಿಕಾರಕ್ಕಾಗಿ ಈ ಕುಟುಂಬದ ನಡುವೆ ದಶಕಗಳಿಂದ ಒಳಜಗಳ ನಡೆಯುತ್ತಿದೆ. ಈ ವಿವಾದ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಹೋರಾಟ ಮುಂದುವರಿದಿದೆ. ಆದರೆ, ಈಗ ಭಕ್ತಿಯ ದಾರಿಯಲ್ಲಿ ನಡೆಯಬೇಕಾದ ಅರ್ಚಕರು ಪೂಜೆ ಮತ್ತು ಹಣದ ವಿಚಾರವಾಗಿ ಬೀದಿ ರಂಪಾಟ ಮಾಡಿಕೊಂಡಿರುವುದು ದೇವಸ್ಥಾನದ ಘನತೆಗೆ ಧಕ್ಕೆ ತಂದಿದೆ.
ದೂರು-ಪ್ರತಿ ದೂರು
ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅರ್ಚಕರ ವಿರುದ್ಧ ಟ್ರೋಲ್‌ಗಳ ಸುರಿಮಳೆಯಾಗುತ್ತಿದೆ. ಬ್ರಾಹ್ಮಣ ಸಮುದಾಯ ಮತ್ತು ಅರ್ಚಕ ವೃತ್ತಿಯ ಬಗ್ಗೆ ಟೀಕೆ ಮಾಡುವವರಿಗೆ ಈ ಘಟನೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಸಾರ್ವಜನಿಕವಾಗಿ ಇಡೀ ಸಮುದಾಯ ಮುಜುಗರ ಅನುಭವಿಸುವಂತಾಗಿದೆ.


