Asianet Suvarna News Asianet Suvarna News

Karnataka Election 2023: ಪ್ರಶ್ನೆ ಮಾಡಬೇಕು, ಸರಿಯಾದ ಅಭ್ಯರ್ಥಿ ಆರಿಸಬೇಕು: ರಿಷಬ್‌ ಶೆಟ್ಟಿ

ಅತಿ ಹೆಚ್ಚು ಜನ ಮತ ಹಾಕಿದಾಗ ಚಿತ್ರಣ ಬದಲಾಗುತ್ತದೆ. ಹೆಚ್ಚು ಜನ ಮತ ಹಾಕಿದ ಅಭ್ಯರ್ಥಿ ಗೆಲ್ಲುತ್ತಾನೆ. ಅದರಿಂದ ಪ್ರತಿಯೊಬ್ಬರೂ ಮತ ಹಾಕಬೇಕು. ಬೂತ್‌ ಮಟ್ಟದಲ್ಲಿ ಸರಿಯಾದ ವ್ಯಕ್ತಿಯನ್ನು ಆರಿಸಬೇಕು. ನಾನೊಬ್ಬ ಮತ ಹಾಕದಿದ್ದರೆ ಏನಾಗುತ್ತದೆ ಎಂದು ನಿರ್ಲಕ್ಷ್ಯಮಾಡಬಾರದು: ರಿಷಬ್‌ ಶೆಟ್ಟಿ 

Everyone Should Vote in Karnataka Assembly Election 2023 Says Actor Rishab Shetty grg
Author
First Published May 10, 2023, 8:02 AM IST

ಬೆಂಗಳೂರು(ಮೇ.10): ನಮಗೆ ಹೇಗೆ ಕೆಲಸ ಮಾಡಬೇಕು, ಯಾವ ರೀತಿ ಜವಾಬ್ದಾರಿ ನಿಭಾಯಿಸಬೇಕು ಅನ್ನುವುದರ ಮೇಲೆ ಆಸಕ್ತಿ ಕಡಿಮೆ. ಆ ಕುರಿತು ಯೋಚಿಸುವ ಮನಸ್ಥಿತಿ ಬಹಳ ಕಡಿಮೆ ಮಂದಿಯಲ್ಲಿ ಇದೆ. ಆದರೆ ಯಾರೋ ಮಾಡಿದ ಕೆಲಸವನ್ನು ಸರಿ ಮಾಡಿಲ್ಲ ಎಂದು ಹೇಳುವುದರಲ್ಲಿ ಮಾತ್ರ ನಾವು ಮುಂದೆ ಇರುತ್ತೇವೆ. ಈ ಮನಸ್ಥಿತಿ ಮೊದಲು ಬದಲಾಗಬೇಕು.

ನಾವು ಬಹುತೇಕರು ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಯನ್ನು ಆತ ಶಾಸಕ ಆಗಿರಬಹುದು ಅಥವಾ ಸಂಸದರಾಗಿರಬಹುದು ಅವರನ್ನು ಪ್ರಶ್ನೆ ಮಾಡಲು ಹೋಗುವುದೇ ಇಲ್ಲ. ಯಾಕೆ ಕೆಲಸ ಮಾಡಲಿಲ್ಲ ಎಂದು ಕೇಳುವುದಿಲ್ಲ. ಅದರ ಬದಲಿಗೆ ಬೈಯುತ್ತಾ ಕುಳಿತಿರುತ್ತೇವೆ. ಹಾಗೆ ಮಾಡಲಿಲ್ಲ, ಹೀಗೆ ಮಾಡಲಿಲ್ಲ ಎನ್ನುತ್ತಿರುತ್ತೇವೆ.

ಮನೆಯಿಂದಲೇ ಮತಕ್ಕೆ ನೋಂದಣಿ ಮಾಡಿದ್ದ 33 ಮಂದಿ ಸಾವು: 2,282 ವೃದ್ಧರು, ವಿಶೇಷ ಚೇತನರಿಂದ ಮತ ಚಲಾವಣೆ

ನಮ್ಮ ದೇಶದ ರಾಜಕಾರಣವೂ ಹಾಗೇ ಇದೆ. ಇಲ್ಲಿನ ಅಭ್ಯರ್ಥಿಗಳ ಗೆಲುವು ಮೆಜಾರಿಟಿ ಆಧಾರದಲ್ಲಿ ಆಗಿರುವಂತಹ ಇತಿಹಾಸವೇ ಇಲ್ಲ. ಮೆಜಾರಿಟಿಯಲ್ಲಿ ಗೆದ್ದಿದ್ದರೂ ಅದರ ಪ್ರಮಾಣ ತುಂಬಾ ಕಡಿಮೆ. ನಮ್ಮ ಮತದಾನ ನಡೆಯುವುದು ಬೂತ್‌ ಆಧರಿತವಾಗಿ. ಒಂದು ಬೂತಲ್ಲಿ 900 ಆಸುಪಾಸು ಮತಗಳು ಇರುತ್ತವೆ ಎಂದಿಟ್ಟುಕೊಳ್ಳೋಣ. ಆ ಬೂತ್‌ನಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಿಂತಿದ್ದರೆ ಒಬ್ಬೊಬ್ಬ ಅಭ್ಯರ್ಥಿ 200 ಆಸುಪಾಸು ಮತಗಳನ್ನು ಪಡೆಯುತ್ತಾನೆ. ಅಲ್ಲಿ 300 ಮತ ಪಡೆದವನಿಗೆ ಗೆಲುವು.

ಅದನ್ನೇ ಒಂದು ಮತ ಕ್ಷೇತ್ರದ ಆಧಾರದಲ್ಲಿ ನೋಡುವುದಾದರೆ ಒಂದು ಕ್ಷೇತ್ರದಲ್ಲಿ 2 ಲಕ್ಷ ಮತ ಇದೆ ಎಂದುಕೊಳ್ಳೋಣ. ನಮ್ಮಲ್ಲಿ ಮತದಾನ ನಡೆಯುವುದು ಹೆಚ್ಚು ಕಡಿಮೆ ಶೇ.60 ಮಾತ್ರ. ಆ ಲೆಕ್ಕಾಚಾರದಲ್ಲಿ ನೋಡಿದರೆ 2 ಲಕ್ಷ ಮತ ಇರುವ ಒಂದು ಕ್ಷೇತ್ರದಲ್ಲಿ ಮತ ಚಲಾವಣೆ ಮಾಡುವುದು 1 ಲಕ್ಷ 20 ಸಾವಿರ ಮಂದಿ ಮಾತ್ರ ಎಂದುಕೊಳ್ಳೋಣ. ಆ ಕ್ಷೇತ್ರದಲ್ಲಿ ಗೆದ್ದವನಿಗೆ 50 ಸಾವಿರ ಮತ ಬೀಳುತ್ತವೆ. ಎರಡನೇ ಸ್ಥಾನದ ಅಭ್ಯರ್ಥಿಗೆ 40 ಸಾವಿರ ಮತ. ಮೂರನೇ ಸ್ಥಾನಕ್ಕೆ 20 ಅಥವಾ 30 ಸಾವಿರ ಮತ. ಅಂದರೆ ಶೇ.25 ಮಂದಿ ಮಾತ್ರ ಆ ಕ್ಷೇತ್ರದ ಶಾಸಕನನ್ನು ಆರಿಸಿದಂತೆ ಆಯಿತು. ಕಡಿಮೆ ಸಂಖ್ಯೆಯ ಜನ ಆರಿಸಿದ ಒಬ್ಬ ವ್ಯಕ್ತಿ ಶಾಸಕನಾಗುತ್ತಾನೆ. ಇದು ಯಾಕಾಗುತ್ತದೆ ಎಂದರೆ ಜಾಸ್ತಿ ಜನ ಓಟ್‌ ಮಾಡದೇ ಇರುವುದರಿಂದ. ಮತ ಹಾಕುವ ಅವಕಾಶವನ್ನು ತಿರಸ್ಕರಿಸುವುದರಿಂದ. ಅತಿ ಹೆಚ್ಚು ಜನ ಮತ ಹಾಕಿದಾಗ ಚಿತ್ರಣ ಬದಲಾಗುತ್ತದೆ. ಹೆಚ್ಚು ಜನ ಮತ ಹಾಕಿದ ಅಭ್ಯರ್ಥಿ ಗೆಲ್ಲುತ್ತಾನೆ. ಅದರಿಂದ ಪ್ರತಿಯೊಬ್ಬರೂ ಮತ ಹಾಕಬೇಕು. ಬೂತ್‌ ಮಟ್ಟದಲ್ಲಿ ಸರಿಯಾದ ವ್ಯಕ್ತಿಯನ್ನು ಆರಿಸಬೇಕು. ನಾನೊಬ್ಬ ಮತ ಹಾಕದಿದ್ದರೆ ಏನಾಗುತ್ತದೆ ಎಂದು ನಿರ್ಲಕ್ಷ್ಯಮಾಡಬಾರದು.

ಒಬ್ಬ ಶಾಸಕ ಆರಿಸಿ ಬಂದ ಮೇಲೆ ಸಾಮಾನ್ಯವಾಗಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದವರು ಪ್ರಶ್ನೆ ಮಾಡಲು ಹಿಂಜರಿಯುತ್ತಾರೆ. ಆದರೆ ನಿಮ್ಮ ಕ್ಷೇತ್ರದ ಶಾಸಕ ಎಲ್ಲರಿಗೂ ಶಾಸಕ. ಅವರಿಗೆ ಮತ ಹಾಕಿದ್ದರೂ ಹಾಕದಿದ್ದರೂ ಆತ ನಿಮ್ಮ ಶಾಸಕ. ಕ್ಷೇತ್ರದ ಎಲ್ಲರ ಜವಾಬ್ದಾರಿ ಆತ. ಹಾಗಾಗಿ ಹೆಚ್ಚು ಜನ ಮತ ಹಾಕಬೇಕು. ಎಲ್ಲರೂ ಪ್ರಶ್ನೆ ಮಾಡುವಂತವರಾಗಬೇಕು.

ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಬಂಧುಗಳಿಗೆ ಪತ್ರ ಬರೆದ ಚಿಕ್ಕಮಗಳೂರು ವಿಚಾರಣಾಧೀನ ಖೈದಿಗಳು!

ಸಾಮಾನ್ಯವಾಗಿ ಮತದಾನ ಬಂದಾಗ ಒಬ್ಬ ಮತ್ತೊಬ್ಬನಿಗೆ ಬೈಯುವುದು, ಮತ್ತೊಬ್ಬ ಮಗದೊಬ್ಬನನ್ನು ದೂಷಿಸುವುದು ಸಾಮಾನ್ಯ. ಸೋಷಿಯಲ್‌ ಮೀಡಿಯಾದಲ್ಲೊಂದು ಬರಹ ಬಂದರೆ ಆ ಲೇಖನವನ್ನು ಓದದೆ ಕೇವಲ ಅದರ ತಲೆಬರಹ ನೋಡಿ ಕಮೆಂಟ್‌ ಮಾಡುವ ಮನಸ್ಥಿತಿ ಬದಲಾಗಬೇಕು. ಆಯಾ ಕ್ಷೇತ್ರದ ಅಭ್ಯರ್ಥಿಯ ಪೂರ್ವಾಪರ ನೋಡಿಕೊಂಡು, ಆತ ಹೇಗೆ ಕೆಲಸ ಮಾಡಬಲ್ಲ ಎಂದು ಆಲೋಚಿಸಿಕೊಂಡು ಮತ ಹಾಕಬೇಕು. ಎಲ್ಲರನ್ನೂ ಸಮಾನವಾಗಿ ನೋಡಬಲ್ಲ, ಎಲ್ಲರಿಗೂ ಸಮಾನ ಹಕ್ಕು ದೊರಕುವಂತೆ ಮಾಡಬಲ್ಲ, ಪ್ರತಿಯೊಂದು ಕೆಲಸದ ಕುರಿತು ಕಾಳಜಿ ವಹಿಸಬಲ್ಲ ಅಭ್ಯರ್ಥಿ ಯಾರು ಎನ್ನುವುದನ್ನು ನೋಡಿ ಮತ ಹಾಕಿ ಆರಿಸಬೇಕು. ಈ ಎಲ್ಲಾ ಕಾರಣಗಳಿಂದ ಎಲ್ಲರೂ ಮತ ಹಾಕಬೇಕು.

ಅತಿ ಹೆಚ್ಚು ಜನ ಮತ ಹಾಕಿದಾಗ ಚಿತ್ರಣ ಬದಲಾಗುತ್ತದೆ. ಹೆಚ್ಚು ಜನ ಮತ ಹಾಕಿದ ಅಭ್ಯರ್ಥಿ ಗೆಲ್ಲುತ್ತಾನೆ. ಅದರಿಂದ ಪ್ರತಿಯೊಬ್ಬರೂ ಮತ ಹಾಕಬೇಕು ಅಂತ ನಟ-ನಿರ್ದೇಶಕ ರಿಷಬ್‌ ಶೆಟ್ಟಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios