Asianet Suvarna News Asianet Suvarna News

ಆರ್‌ಟಿಒ ಕಚೇರಿ, ಹೈವೇಲಿ ಇ.ವಿ.ಚಾರ್ಜಿಂಗ್ ಕೇಂದ್ರ: ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಿಸಲು ಸಾರಿಗೆ ಇಲಾಖೆ ಕ್ರಮ

ಪರಿಸರ ಸಂರಕ್ಷಣೆ ದೃಷ್ಟಿಯಿಂದಾಗಿ ದೇಶದೆಲ್ಲೆಡೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ, ಮೂಲಸೌಕರ್ಯ ಕೊರತೆಯಿಂದಾಗಿ ಮಹಾನಗರಗಳನ್ನು ಹೊರತುಪಡಿಸಿ ಉಳಿದೆಡೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಯಲ್ಲಿ ಅಷ್ಟಾಗಿ ಆಗುತ್ತಿಲ್ಲ. 
 

EV Charging Station on RTO Office and National Highways gvd
Author
First Published Mar 27, 2024, 7:29 AM IST

ಗಿರೀಶ್‌ ಗರಗ

ಬೆಂಗಳೂರು (ಮಾ.27): ಪರಿಸರ ಸಂರಕ್ಷಣೆ ದೃಷ್ಟಿಯಿಂದಾಗಿ ದೇಶದೆಲ್ಲೆಡೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ, ಮೂಲಸೌಕರ್ಯ ಕೊರತೆಯಿಂದಾಗಿ ಮಹಾನಗರಗಳನ್ನು ಹೊರತುಪಡಿಸಿ ಉಳಿದೆಡೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಯಲ್ಲಿ ಅಷ್ಟಾಗಿ ಆಗುತ್ತಿಲ್ಲ. ಹೀಗಾಗಿಯೇ ಸಾರಿಗೆ ಇಲಾಖೆ ಸ್ಥಳೀಯ ಹೆಸ್ಕಾಂಗಳ ಜತೆಗೂಡಿ ಆರ್‌ಟಿಒ ಕಚೇರಿ ಆವರಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಯೋಜನೆ ರೂಪಿಸುತ್ತಿದೆ.

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಹೆಚ್ಚುತ್ತಿದೆ. 2017-18ರಲ್ಲಿ ಎಲೆಕ್ಟ್ರಿಕ್‌ ವಾಹನಗಳ ನೋಂದಣಿ ಸಂಖ್ಯೆ 1,922ರಷ್ಟಿತ್ತು. ಅದೇ 2023-24ರ ಮಾ.25ರವರೆಗೆ ಆ ಸಂಖ್ಯೆ 3.39 ಲಕ್ಷಕ್ಕೆ ಹೆಚ್ಚಳವಾಗಿದೆ. ಪ್ರತಿ ವರ್ಷ ಶೇ.50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಹೆಚ್ಚುತ್ತಿದೆ. ಆದರೆ, ಹೀಗೆ ಖರೀದಿ ಮತ್ತು ನೋಂದಣಿಯಾಗುತ್ತಿರುವ ಎಲೆಕ್ಟ್ರಿಕ್‌ ವಾಹನಗಳು ಬೆಂಗಳೂರಿನಲ್ಲಿಯೇ ಶೇ.90ರಷ್ಟಿದೆ. ಹೀಗಾಗಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಎಲೆಕ್ಟ್ರಿಕ್‌ ವಾಹನಗಳ ಖರೀದಿ ಮತ್ತು ನೋಂದಣಿ ಹೆಚ್ಚಿಸಲು ಚಾರ್ಜಿಂಗ್‌ ಕೇಂದ್ರ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲು ಸಾರಿಗೆ ಇಲಾಖೆ ಯೋಜಿಸುತ್ತಿದ್ದಾರೆ. 

ಜೈಲಿಂದಲೇ ಕೇಜ್ರಿ 2ನೇ ಆದೇಶ: ದಿಲ್ಲಿಯ ಸರ್ಕಾರಿ ಆಸ್ಪತ್ರೆ, ಮೊಹಲ್ಲಾ ಕ್ಲಿನಿಕ್‌ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ

ಅದಕ್ಕೆ ಬೆಸ್ಕಾಂ ಸೇರಿದಂತೆ ಇನ್ನಿತರ ಹೆಸ್ಕಾಂಗಳ ಜತೆಗೂಡಿ ವಾಹನ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಿದೆ. ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ಚಾರ್ಜಿಂಗ್‌ ಕೇಂದ್ರ: ಎಲೆಕ್ಟ್ರಿಕ್‌ ವಾಹನಗಳ ಅನುಕೂಲಕ್ಕಾಗಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ರಾಜ್ಯದ ಎಲ್ಲ ಆರ್‌ಟಿಒ ಕಚೇರಿಯಲ್ಲಿ ಜಾಗ ನೀಡುವ ಬಗ್ಗೆ ಚರ್ಚಿಸಲಾಗಿದೆ. ಆ ಕುರಿತು ಬೆಸ್ಕಾಂನೊಂದಿಗೆ ಈಗಾಗಲೆ ಸಭೆ ನಡೆಸಲಾಗಿದ್ದು, ಅದಕ್ಕೆ ಅಗತ್ಯವಿರುವ ಅನುದಾನ ಸೇರಿದಂತೆ ಇನ್ನಿತರ ನೆರವನ್ನು ಸಾರಿಗೆ ಇಲಾಖೆ ನೀಡಲಿದೆ.

ಅದೇ ರೀತಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲೂ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಬೆಸ್ಕಾಂ ಸೇರಿದಂತೆ ಇನ್ನಿತರ ಹೆಸ್ಕಾಂಗಳ ಜತೆಗೂಡಿ ಸ್ಥಳ ಗುರುತಿಸುವ ಕೆಲಸವನ್ನೂ ಸಾರಿಗೆ ಇಲಾಖೆ ಮಾಡಲಿದೆ. ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸುವ ಬಗ್ಗೆಯೂ ನಿರ್ಧರಿಸಿದ್ದು, ಅದನ್ನು ಶೀಘ್ರದಲ್ಲಿ ಕಾರ್ಯಗತಗೊಳಿಸಲು ಸಾರಿಗೆ ಇಲಾಖೆಗಳು ನಿರ್ಧರಿಸಿದ್ದಾರೆ.

25 ಲಕ್ಷ ಮೌಲ್ಯದ ವಾಹನಗಳ ಖರೀದಿ ಇಳಿಕೆ: ಒಂದೆಡೆ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿ ಮೋಟಾರು ವಾಹನ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ. ಅದೇ 25 ಲಕ್ಷ ರು.ಗೂ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್‌ ವಾಹನ ಖರೀದಿಗೆ ತೆರಿಗೆ ವಿಧಿಸಲಾಗುತ್ತಿದೆ. ಸರ್ಕಾರದ ಆದೇಶದಂತೆ 25 ಲಕ್ಷ ರು.ಗೂ ಹೆಚ್ಚಿನ ಮೊತ್ತದ ಎಲೆಕ್ಟ್ರಿಕ್‌ ವಾಹನಗಳ ಮೌಲ್ಯದ ಶೇ. 10ರಷ್ಟು ಜೀವಿತಾವಧಿ ತೆರಿಗೆಯನ್ನಾಗಿ ವಸೂಲಿ ಮಾಡಲಾಗುತ್ತದೆ. ಆ ಆದೇಶದಿಂದಾಗಿ 25 ಲಕ್ಷ ರು.ಗೂ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್‌ ವಾಹನಗಳ ಖರೀದಿಯಲ್ಲಿ ಇಳಿಕೆಯಾಗಿದೆ.

ದ್ವಿಚಕ್ರ ಭಾರೀ ಹೆಚ್ಚಳ: ಎಲೆಕ್ಟ್ರಿಕ್‌ ವಾಹನಗಳ ಖರೀದಿಯಲ್ಲಿ ದ್ವಿಚಕ್ರ ವಾಹನಗಳ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2017-18ರಲ್ಲಿ ಕೇವಲ 97 ದ್ವಿಚಕ್ರ ಎಲೆಕ್ಟ್ರಿಕ್ ವಾಹನವಿತ್ತು, ಅದೇ 2023-24ರಲ್ಲಿ ಆ ಸಂಖ್ಯೆ 2.98 ಲಕ್ಷಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಕಾರು, 3 ಚಕ್ರದ ವಾಹನಗಳ ಖರೀದಿಯಲ್ಲಿ ಭಾರೀ ಇಳಿಕೆಯಾಗಿದರೂ, ದ್ವಿಚಕ್ರ ವಾಹನ ಖರೀದಿ ಮಾತ್ರ ಏರಿಕೆಯಲ್ಲಿತ್ತು.

ಎಲೆಕ್ಟ್ರಿಕ್‌ ವಾಹನಗಳ ವಿವರ
ವರ್ಷ ದ್ವಿಚಕ್ರ 3 ಚಕ್ರ ಕಾರುಗಳು
2017-18 97 1,589 236
2018-19 2,271 2,753 518
2019-20 6,276 49 449
2020-21 10,388 403 802
2021-22 39,382 2,887 1,948
2022-23 99,465 5,131 5,896
2023-24 1,40,327 5,434 13,667
ಒಟ್ಟು 2,98,206 18,246 23,516
ಒಟ್ಟು ಎಲೆಕ್ಟ್ರಿಕ್‌ ವಾಹನಗಳು: 3,39,968

ದಾವಣಗೆರೆ ಬಂಡಾಯ ಬಗೆಹರಿಸಿದ ಬಿಎಸ್‌ವೈ: ರವೀಂದ್ರನಾಥ್‌ ನೇತೃತ್ವದಲ್ಲಿ ಚುನಾವಣೆಗೆ ಸರ್ವಸಮ್ಮತಿ

ಎಲೆಕ್ಟ್ರಿಕ್‌ ವಾಹನಗಳ ಖರೀದಿ ಮತ್ತು ನೋಂದಣಿ ಹೆಚ್ಚಿಸಲು ರಾಜ್ಯದ ಇತರ ಜಿಲ್ಲೆಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಹೆಸ್ಕಾಂಗಳ ಜತೆಗೂಡಿ ಆರ್‌ಟಿಒ ಕಚೇರಿ ಆವರಣ, ಹೆದ್ದಾರಿಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅದಕ್ಕೆ ಇಲಾಖೆಯಿಂದ ಅನುದಾನ ನೀಡಲಾಗುವುದು.
-ಜ್ಞಾನೇಂದ್ರ ಕುಮಾರ್‌, ಅಪರ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ)

Follow Us:
Download App:
  • android
  • ios