ಕಾಡಾ​ನೆ​ಗಳ ಉಪ​ಟಳ ನಿಯಂತ್ರಿ​ಸುವ ನಿಟ್ಟಿ​ನಲ್ಲಿ ರಾಮ​ನ​ಗರ ಹಾಗೂ ಬನ್ನೇ​ರು​ಘ​ಟ್ಟ​ದಲ್ಲಿ ಪ್ರತ್ಯೇಕ ಆನೆ ಕಾರ್ಯಪಡೆ (ಎಲಿ​ಫಂಟ್‌ ಟಾಸ್ಕ್‌ ಫೋರ್ಸ್‌) ರಚನೆ ಮಾಡ​ಲಾ​ಗುವುದು ಎಂದು ಅರಣ್ಯ ಜೀವ​ಶಾಸ್ತ್ರ ಮತ್ತು ಪರಿ​ಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿ​ಸಿ​ದರು.

ರಾಮ​ನ​ಗ​ರ (ಜೂ.05): ಕಾಡಾ​ನೆ​ಗಳ ಉಪ​ಟಳ ನಿಯಂತ್ರಿ​ಸುವ ನಿಟ್ಟಿ​ನಲ್ಲಿ ರಾಮ​ನ​ಗರ ಹಾಗೂ ಬನ್ನೇ​ರು​ಘ​ಟ್ಟ​ದಲ್ಲಿ ಪ್ರತ್ಯೇಕ ಆನೆ ಕಾರ್ಯಪಡೆ (ಎಲಿ​ಫಂಟ್‌ ಟಾಸ್ಕ್‌ ಫೋರ್ಸ್‌) ರಚನೆ ಮಾಡ​ಲಾ​ಗುವುದು ಎಂದು ಅರಣ್ಯ ಜೀವ​ಶಾಸ್ತ್ರ ಮತ್ತು ಪರಿ​ಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿ​ಸಿ​ದರು. ನಗ​ರದ ಅರಣ್ಯಭವ​ನ​ದಲ್ಲಿ ಸುದ್ದಿ​ಗೋ​ಷ್ಠಿ​ ನಡೆ​ಸಿ, ಪ್ರಸ್ತುತ ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಆನೆ ಕಾರ್ಯಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಕಾಡಾ​ನೆ​ಗ​ಳ ಹಾವಳಿ ಹೆಚ್ಚಾ​ಗಿ​ರುವ ಕಾರಣ ರಾಮ​ನ​ಗರ ಮತ್ತು ಬನ್ನೇ​ರು​ಘ​ಟ್ಟ​ದ​ಲ್ಲಿಯೂ ಪ್ರತ್ಯೇಕವಾಗಿ ಎಲಿ​ಫಂಟ್‌ ಟಾಸ್ಕ್‌ ಫೋರ್ಸ್‌ ರಚನೆ ಮಾಡ​ಲಾ​ಗು​ವುದು. ಈ ಟಾಸ್ಕ್‌ ಪೋರ್ಸ್‌ನಲ್ಲಿ ಸ್ಥಳೀ​ಯರು ಸೇರಿ 40 ಮಂದಿ ಇರು​ತ್ತಾರೆ. ಪ್ರತಿ​ಯೊ​ಬ್ಬ​ರಿಗೆ ತಲಾ 20 ಸಾವಿರ ರು.ವೇತನ ನೀಡ​ಲಾ​ಗು​ತ್ತದೆ. ಇದಕ್ಕೆ ವಾಹನ ಸೇರಿ​ದಂತೆ ಅಗತ್ಯ ಪರಿ​ಕ​ರ​ಗ​ಳನ್ನು ಒದ​ಗಿ​ಸ​ಲಾ​ಗು​ವುದು. 

ಅವ​ರೊಂದಿಗೆ ಅಧಿ​ಕಾ​ರಿ​ಗಳು ಸಹ​ಕಾರ ನೀಡಿ ಸಮ​ನ್ವ​ಯತೆ ಸಾಧಿ​ಸು​ತ್ತಾರೆ. ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟಪ್ರದೇಶಗಳಲ್ಲಿ ಆನೆಗಳ ಕಾಟವಿದ್ದು, ಇಲ್ಲಿ ಜೀವಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. 2019-20 ಆರ್ಥಿಕ ಸಾಲಿನಲ್ಲಿ ರಾಜ್ಯ​ದಲ್ಲಿ ವನ್ಯಜೀವಿ​ಗ​ಳ ದಾಳಿ​ಯಿಂದ 50 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, 29 ಮಂದಿ ಕಾಡಾನೆ ತುಳಿ​ತಕ್ಕೆ ಒಳ​ಗಾಗಿ ಸಾವ​ನ್ನ​ಪ್ಪಿ​ದ್ದಾರೆ. 2020-21ರಲ್ಲಿ 41 ಮಂದಿ, 2021-22ರಲ್ಲಿ 29 ಮಂದಿ ಹಾಗೂ 2022-23ರಲ್ಲಿ 51 ಮಂದಿ ಮೃತ​ಪ​ಟ್ಟಿದ್ದು, ಈ ಪೈಕಿ, 29 ಮಂದಿ ಕಾಡಾ​ನೆ​ಗಳ ದಾಳಿ​ಗೆ ತುತ್ತಾ​ಗಿ​ದ್ದಾರೆ ಎಂದು ಈಶ್ವರ್‌ ಖಂಡ್ರೆ ತಿಳಿ​ಸಿ​ದರು.

ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ: ಸಂಸದ ಪ್ರತಾಪ್‌ ಸಿಂಹ

ಅರಣ್ಯ ಸಚಿವರ ವಿರುದ್ಧ ರೈತರ ಆಕ್ರೋಶ: ತಾಲೂಕಿನ ವಿರೂಪಸಂದ್ರದ ನರಿಕಲ್ಲು ಗುಡ್ಡ ಅರಣ್ಯದ ಬಳಿ ನಿರ್ಮಿಸಿರುವ ತಾತ್ಕಾಲಿಕ ಆನೆ ಶಿಬಿರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆಗಮಿಸಲಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ವಿರೂಪಸಂದ್ರದ ಮಾವಿನ ತೋಟದ ಕಾವಲುಗಾರ ಆನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಭಾನುವಾರ ವಿರೂಪಸಂದ್ರದ ಬಳಿಯ ಆನೆ ಶಿಬಿರಕ್ಕೆ ಅರಣ್ಯ ಈಶ್ವರ ಖಂಡ್ರೆಯವರ ಭೇಟಿ ನಿಗದಿಪಡಿಸಲಾಗಿತ್ತು. ಆದರೆ, ಕನಕಪುರದ ಮುತ್ತುರಾಯನದೊಡ್ಡಿಯಲ್ಲಿ ಆನೆ ದಾಳಿಗೆ ಬಳಿಯಾಗಿದ್ದ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಚೆಕ್‌ ವಿತರಿಸಿದ್ದಾರೆ. 

ಬಳಿಕ ಹೊಸಕಬ್ಬಾಳು ಗ್ರಾಮಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವರು, ವಿರೂಪಸಂದ್ರದ ಭೇಟಿಯನ್ನು ಕಡೆ ಕ್ಷಣದಲ್ಲಿ ರದ್ದುಗೊಳಿಸಿದರು. ಅರಣ್ಯ ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಲು ಕಾದು ಕುಳಿತ್ತಿದ್ದ ರೈತರು ಇದರಿಂದ ಆಕ್ರೋಶಗೊಂಡರು. ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಸಿ.ಪುಟ್ಟಸ್ವಾಮಿ, ಅರಣ್ಯ ಸಚಿವರಿಗೆ ನಮ್ಮ ಸಂಕಷ್ಟವನ್ನು ತಿಳಿಸುವ ಉದ್ದೇಶದಿಂದ ಬೆಳಗ್ಗೆಯಿಂದ ನಾವೆಲ್ಲ ಕಾದು ಕುಳಿತಿದ್ದೆವು. ಆದರೆ, ಕಡೆ ಕ್ಷಣದಲ್ಲಿ ಅವರ ಕಾರ್ಯಕ್ರಮ ಬದಲಾಗಿದ್ದು, ಸಚಿವರು ರಾಮನಗರಕ್ಕೆ ತೆರಳುತ್ತಿರುವುದು ಮಾಹಿತಿ ಲಭ್ಯವಾಗಿದೆ. ಸಚಿವರು ಬಾರದಿರುವುದು ರೈತರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಗೆ ಪರ್ಯಾಯ ನಾಯಕ ಸಿದ್ದರಾಮಯ್ಯ: ಪುಟ್ಟರಂಗಶೆಟ್ಟಿ

ನಮ್ಮ ಭಾಗದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಆನೆಗಳ ಹಾವಳಿ ಮಿತಿಮೀರಿದ್ದು, ರೈತರು ಸಾಕಷ್ಟುನಷ್ಟಅನುಭವಿಸಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಆನೆಗಳು ಕ್ಷಣಾರ್ಧದಲ್ಲಿ ಹಾಳು ಮಾಡುತ್ತಿವೆ. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೆಲ್ಲವನ್ನು ಅರಣ್ಯ ಸಚಿವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಮನವಿ ಪತ್ರ ಸಿದ್ಧಪಡಿಸಿಕೊಂಡು ಕಾದು ಕುಳಿತಿದ್ದೆವು. ಆದರೆ, ಅವರು ಇಲ್ಲಿಗೆ ಬಾರದಿರುವುದು ನಿರಾಸೆಯಾಗಿದೆ ಎಂದು ಹೇಳಿದರು.