Asianet Suvarna News Asianet Suvarna News

ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ: ನಿಕ್ಲೆಗ್ ನಮಸ್ಕಾರ, ಎಂಚ ಉಲ್ಲರ್ ಎಂದ ಸಿದ್ಧರಾಮಯ್ಯ

ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಬಂಟ ಸಮುದಾಯದ ಅಭಿವೃದ್ಧಿ ನಿಗಮ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. 

Establishment of Banta Development Corporation Says CM Siddaramaiah gvd
Author
First Published Oct 29, 2023, 11:30 PM IST

ಉಡುಪಿ (ಅ.29): ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಬಂಟ ಸಮುದಾಯದ ಅಭಿವೃದ್ಧಿ ನಿಗಮ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಅವರು ಇಲ್ಲಿನ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ, ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ನಡೆದ 4ನೇ ವಿಶ್ವ ಬಂಟರ ಸಮ್ಮೇಳನ - 2023ನ್ನು ದೀಪ ಬೆಳಗಿ, ತೆಂಗಿನ ಹೂವು ಅರಳಿಸಿ ಚಾಲನೆ ನೀಡಿ ಮಾತನಾಡಿದರು.

ಈ ಸಮಾವೇಶದಲ್ಲಿ ಅಭಿವೃದ್ಧಿ, ಸಂಘಟನೆ ಬಗ್ಗೆ ಚರ್ಚೆ ಮಾಡಿ, ನಿಮ್ಮ ಸಂಸ್ಕೃತಿಯನ್ನು ಬೇರೆಯವರು ಅಳವಡಿಸುವಂತಾಗಲಿ. ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಮುಂದಿನ ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡುತ್ತೇನೆ ಎಂದರು. ತುಳು ಭಾಷೆಯಲ್ಲಿ ‘ನಿಕ್ಲೆಗ್ ನಮಸ್ಕಾರ, ಎಂಚ ಉಲ್ಲರ್’ ಎಂದು ಮಾತು ಆರಂಭಿಸಿದ ಸಿಎಂ, ಬಂಟರು ಜಗತ್ತಿನ ಪ್ರತಿಯೊಂದು ಕಡೆಗೂ ವಲಸೆ ಹೋಗಿದ್ದಾರೆ. ರಾಜಕೀಯ, ಉದ್ಯಮ, ಕ್ರೀಡೆ, ಸಿನಿಮಾ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಬಂಟರು ಸಾಹಸಿಗಳು, ರಾಜ್ಯಕ್ಕೆ ಬಂಟರ ಕೊಡುಗೆ ಅಪಾರವಾದುದು ಎಂದು ಕೊಂಡಾಡಿದರು.

ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್‌.ಡಿ.ರೇವಣ್ಣ

ಬಂಟರು ಎಲ್ಲೇ ಇದ್ದರೂ ಕರಾವಳಿಯ ಮೂಲ ಸಂಸ್ಕೃತಿ ಮರೆತಿಲ್ಲ. ಇಬ್ಬರು ಕರಾವಳಿಗರು ಎದುರಾದರೆ ತುಳುವಿನಲ್ಲೇ ಮಾತನಾಡುತ್ತಾರೆ. ಮಾತೃಭಾಷೆಯ ಬಗ್ಗೆ ಅವರ ಪ್ರೇಮ ಅಪಾರವಾದುದು, ಜೊತೆಗೆ ಕನ್ನಡ ಸಂಸ್ಕೃತಿ, ಭಾಷೆ ಬೆಳೆಸುವ ಕೆಲಸವನ್ನೂ ಮಾಡುತ್ತಿದ್ದಾರೆ, ಬಂಟರು ಜಾತ್ಯತೀತರು, ತಾರತಮ್ಯ ಮಾಡದೆ ಎಲ್ಲರನ್ನೂ ಮನುಷ್ಯರಾಗಿ‌ ನೋಡುತ್ತಾರೆ ಎಂದರು.

ಬಂಟರ ಹೃದಯ ಶ್ರೀಮಂತಿಕೆ: ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ನಮ್ಮ ದೇಶದ ಸಂಸ್ಕೃತಿ, ಸಾಹಿತ್ಯ, ಕಲೆಗೆ ಬಂಟರು ಗುರುತರ ಕೊಡುಗೆ ನೀಡಿದ್ದಾರೆ. ದೇಶ ಹೊರದೇಶಗಳಲ್ಲಿಯೂ ಯಶಸ್ವಿ ಹೋಟೆಲ್ ಉದ್ದಿಮೆ ನಡೆಸುತ್ತಿದ್ದಾರೆ, ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದಾರೆ. ಇಲ್ಲದವರಿಗೆ ಸಹಾಯ ಮಾಡುವ ಹೃದಯ ಶ್ರೀಮಂತಿಕೆ ಇರುವ ಮನೋಭಾವ ಬಂಟ ಸಮುದಾಯಕ್ಕಿದೆ. ಈಗ ವಿಶ್ವದಾದ್ಯಂತ ಹರಡಿರುವ ಬಂಟರನ್ನು ಒಗ್ಗೂಡಿಸುವ ಕೆಲಸವನ್ನು ಉಡುಪಿ ಮತ್ತು ದ.ಕ ಜಿಲ್ಲೆಯ ಬಂಟ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಸಾನಿಧ್ಯ ವಹಿಸಿದ್ದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿಶ್ವಸಂತೋಷಭಾರತಿ ಆಶೀರ್ವಚನ ನೀಡಿದರು. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಅಭಯಚಂದ್ರ ಜೈನ್, ಐವನ್‌ ಡಿಸೋಜ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಪಾಲ್ಗೊಂಡರು.

ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್‌ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ

ಬಂಟ ಸಮುದಾಯದ ಉದ್ಯಮಿಗಳಾದ ಪ್ರವೀಣ್ ಭೋಜ ಶೆಟ್ಟಿ ಮತ್ತು ನೈನಿತಾ ಪ್ರವಿಣ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಎಂ.ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ, ಡಾ.ಎ.ಜೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಬಂಜಾರ ಪ್ರಕಾಶ್ ಶೆಟ್ಟಿ, ನಂದ್ಯಪ್ಪ ಶೆಟ್ಟಿ, ರಾಜೇಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿಕಟಪೂರ್ವ ಕಾರ್ಯದರ್ಶಿ ಡಾ.ಪಿ.ವಿ. ಶೆಟ್ಟಿ ಮತ್ತಿತರರಿದ್ದರು.

Follow Us:
Download App:
  • android
  • ios