ಮುಡಾ ಕೇಸಿಗೆ ಎಂಟ್ರಿಕೊಟ್ಟ ಇಡಿ; ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿದೆ.
ಬೆಂಗಳೂರು (ಸೆ.30): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ಮಾಡಿದ್ದಾರೆಂಬ ಆರೋಪದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮೈಸೂರು ಲೋಕಾಯುಕ್ತ ಪೊಲೀಸರಿಂದ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲಿಯೇ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶನಾಲಯಕ್ಕೂ (ಇಡಿ) ದೂರು ನೀಡಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಎಫ್‌ಐಆರ್ ಆಧರಿಸಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇಡಿ ಸಂಸ್ಥೆಯಿಂದಲೂ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ದಾಖಲಿಸಿಕೊಂಡಿದೆ.
ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದ (ಇಡಿ) ಕೇಸಿನಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1 (ಎ1 ಆರೋಪಿ) ಆಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್‌ನಲ್ಲಿ ಆರೋಪಿಗಳೆಂದು ಉಲ್ಲೇಖ ಮಾಡಲಾಗಿದೆ. ಇನ್ನು ಜಾರಿ ನಿರ್ದೇಶನಾಲಯದ ಕೇಸಿನಲ್ಲಿ ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಮುಡಾ ಉರುಳು ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಭೇಟಿಯಾದ ಡಿ.ಕೆ. ಶಿವಕುಮಾರ್!
ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ಸ್ನೇಹಮಯಿ ಕೃಷ್ಣ ಅವರು ಸೇರಿದಂತೆ ಇಟ್ಟು ಮೂವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಸಾರ್ವಜನಿಕರ ದೂರನ್ನು ಆಧರಿಸಿ ಸಿಎಂಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಎದುರಿಸಲು ನೋಟೀಸ್ ಜಾರಿ ಮಾಡುತ್ತಾರೆ. ಇದನ್ನು ವಿರೋಧಿಸಿ ರಾಜ್ಯಪಾಲರ ಪ್ರಾಸಿಕ್ಯೂಷನ್ ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗುತ್ತಾರೆ. ಆದರೆ, ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳಿಸಿ, ತನಿಖೆ ಎದುರಿಸುವಂತೆ ಆದೇಶಿಸುತ್ತದೆ. ಆಗ ಕೆಳ ಹಂತದ ನ್ಯಾಯಾಲಯದ ಲೋಕಾಯುಕ್ತ ಇಲಾಖೆಯಿಂದ ತನಿಖೆ ನಡೆಸಿ ವರದಿ ನೀಡುವಂತೆ 3 ತಿಂಗಳು ಗಡುವು ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಹಿಂದಿ ಗೊತ್ತಿಲ್ಲಾಂದ್ರೆ ಎಜುಕೇಟೆಡ್ ಅಲ್ವಂತೆ: ಕನ್ನಡಿಗರ ಮೇಲೆ ದರ್ಪ ತೋರಿದ ರೈಲ್ವೆ ಟಿಕೆಟ್ ಕಲೆಕ್ಟರ್!
ಇದರ ಬೆನ್ನಲ್ಲಿಯೇ ಮೈಸೂರು ಜಿಲ್ಲೆ ಲೋಕಾಯುಕ್ತ ಎಸ್‌ಪಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸುತ್ತಾರೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಎ1, ಪಾರ್ವತಿ ಸಿದ್ದರಾಮಯ್ಯ ಎ2, ಮಲ್ಲಿಕಾರ್ಜುನ ಸ್ವಾಮಿ ಎ3 ಹಾಗೂ ದೇವರಾಜು ಎ4 ಆರೋಪಿಗಳು ಆಗಿದ್ದಾರೆ. ಅಕ್ರಮವಾಗಿ ಮುಡಾದಿಂದ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಪ್ರಕರಣದಲ್ಲಿ ತನಿಖೆ ಎದುರಿಸಲಿದ್ದಾರೆ. ಇನ್ನು ಈ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರಿಗೆ ಕೂಡ ನೊಟೀಸ್ ಜಾರಿಯಾಗುವ ಸಾಧ್ಯತೆಯಿದೆ. ಮುಂದುವರೆದು ಬಂಧನದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.