Asianet Suvarna News Asianet Suvarna News

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಪ್ರಶಸ್ತಿ ಪ್ರದಾನ: 25 ಸಾಧಕರಿಗೆ ಎಮಿನೆಂಟ್‌ ಇಂಜಿನಿಯರ್‌ ಅವಾರ್ಡ್‌

ಅಭಿವೃದ್ಧಿಯ ಕೇಂದ್ರ ಬಿಂದುಗಳಾದ ಎಂಜಿನಿಯರ್‌ಗಳನ್ನು ಗುರುತಿಸಿ ಗೌರವಿಸುವ, ಆ ಮೂಲಕ ಪ್ರೋತ್ಸಾಹಿಸುವ ಸದುದ್ದೇಶದಿಂದ ರಾಜ್ಯದ ವಿವಿಧೆಡೆಯ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿತ್ತು. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚಿಕ್ಕಮಗಳೂರು ಉತ್ತರ ಕರ್ನಾಟಕದ ಬೆಳಗಾವಿ ಸೇರಿದಂತೆ ಬಾಗಲಕೋಟೆ, ಉತ್ತರಕನ್ನಡ, ವಿಜಯಪುರ, ಬಳ್ಳಾರಿ, ಹಾವೇರಿ ಹೀಗೆ ರಾಜ್ಯದ ನಾನಾ ಭಾಗಗಳ ಎಂಜಿನಿಯರ್‌ಗಳು ಪ್ರಶಸ್ತಿ ಸ್ವೀಕರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

Eminent Engineer Award for 25 Achievers in Karnataka From Kannada Prabha Suvarna News grg
Author
First Published Oct 29, 2023, 7:26 AM IST

ಬೆಂಗಳೂರು(ಅ.29): ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತ ಕ್ರಿಯಾಶೀಲ ಯೋಚನೆ, ಯೋಜನೆಗಳ ಮೂಲಕ ಸಮಸ್ಯೆಗೆ ಪರಿಹಾರದ ದಿಕ್ಕು ತೋರಿಸುವ ಮೂಲಕ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ, ಜನಪರ ಕೊಡುಗೆಯಲ್ಲಿ ನಿತ್ಯ ನಿರತರಾಗಿರುವ ರಾಜ್ಯದ 25 ಎಂಜಿನಿಯರ್‌ಗಳಿಗೆ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ‘ಎಮಿನೆಂಟ್‌ ಎಂಜಿನಿಯರ್‌-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್‌ ಜಾರಕಿಹೊಳಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ವಿದ್ಯಾಶಂಕರ್‌, ಚಿತ್ರನಟ ಸತೀಶ್‌ ನೀನಾಸಂ ಮುಖ್ಯ ಅತಿಥಿಯಾಗಿ ಆಗಮಿಸಿ ಮೆರಗು ತಂದರು. ಅವರೊಂದಿಗೆ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಂಪಾದಕ ಅಜಿತ್‌ ಹನಮಕ್ಕನವರ್‌ ಅವರು ಸಾಧಕ ಎಂಜಿನಿಯರ್‌ಗಳಿಗೆ ಪ್ರಶಸ್ತಿ ಫಲಕ, ಸ್ಮರಣಿಕೆ ನೀಡುವ ಮೂಲಕ ‘ಎಮಿನೆಂಟ್‌ ಎಂಜಿನಿಯರ್‌-2023’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. ಈ ಮೂಲಕ ಇಡೀ ಎಂಜಿನಿಯರ್‌ ಸಮೂಹವನ್ನು ಗೌರವಿಸಲಾಯಿತು.

ನಾನು ಸಾಧನವಷ್ಟೇ ನಿಜವಾದ ಸಾಧಕ ಅವರೆಂದ ಬನ್ನಿ: ನಟ ಅಲ್ಲು ಅರ್ಜುನ್‌ ಹೀಗೆ ಹೇಳಿದ್ದೇಕೆ ?

ಅಭಿವೃದ್ಧಿಯ ಕೇಂದ್ರ ಬಿಂದುಗಳಾದ ಎಂಜಿನಿಯರ್‌ಗಳನ್ನು ಗುರುತಿಸಿ ಗೌರವಿಸುವ, ಆ ಮೂಲಕ ಪ್ರೋತ್ಸಾಹಿಸುವ ಸದುದ್ದೇಶದಿಂದ ರಾಜ್ಯದ ವಿವಿಧೆಡೆಯ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಲಾಗಿತ್ತು. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚಿಕ್ಕಮಗಳೂರು ಉತ್ತರ ಕರ್ನಾಟಕದ ಬೆಳಗಾವಿ ಸೇರಿದಂತೆ ಬಾಗಲಕೋಟೆ, ಉತ್ತರಕನ್ನಡ, ವಿಜಯಪುರ, ಬಳ್ಳಾರಿ, ಹಾವೇರಿ ಹೀಗೆ ರಾಜ್ಯದ ನಾನಾ ಭಾಗಗಳ ಎಂಜಿನಿಯರ್‌ಗಳು ಪ್ರಶಸ್ತಿ ಸ್ವೀಕರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣನ್ಯೂಸ್‌ ಸಿಬ್ಬಂದಿ ಆತ್ಮೀಯವಾಗಿ ಪ್ರಶಸ್ತಿ ಪುರಸ್ಕೃತರನ್ನು ಬರಮಾಡಿಕೊಂಡರು. ಕಿರುಚಿತ್ರ ಪ್ರದರ್ಶನದ ಮೂಲಕ ಸಾಧಕ ಎಂಜಿನಿಯರ್‌ಗಳು ಸಾಗಿಬಂದ ಹಾದಿಯನ್ನು ಮೆಲುಕು ಹಾಕುವ ಪ್ರಯತ್ನವಾಯಿತು. ಸರ್ಕಾರಿ ನೌಕರರಾಗಿ, ರಸ್ತೆ, ಸೇತುವೆ, ಸಾವಿರಾರು ಶಾಲೆಗಳ ನಿರ್ಮಾಣದಲ್ಲಿ ತೊಡಗಿ ಮೂಲಸೌಕರ್ಯ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿರುವ ಅಧೀಕ್ಷಕ ಅಭಿಯಂತರರು, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ನಗರಸಭೆಗಳಲ್ಲಿ ಸೇವೆಯಲ್ಲಿದ್ದು ತಮ್ಮದೆ ಕೊಡುಗೆ ನೀಡುತ್ತಿರುವವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು.

ಅದಲ್ಲದೆ, ತಮ್ಮ ಕ್ರಿಯಾಶೀಲತೆ ಮೂಲಕ ಕೃಷಿ ಉಪಕರಣಗಳನ್ನು ಆವಿಷ್ಕರಿಸಿ ಅದರಿಂದಾಗಿ ಕೃಷಿ ಕಾರ್ಮಿಕರ ಕೊರತೆ ನೀಗಿಸುವ ಪ್ರಯತ್ನ, ಗ್ರಾಮೀಣದಲ್ಲಿ ಉದ್ಯಮ ಸ್ಥಾಪನೆಯ ಮೂಲಕ ಉದ್ಯೋಗ ಸೃಷ್ಟಿಸಿ ನೂರಾರು ಜನ ಜೀವನ ಕಟ್ಟಿಕೊಳ್ಳಲು ಕಾರಣರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದ್ಧೂರಿ ವೇದಿಕೆಯಲ್ಲಿ ನಡೆದ ಅಚ್ಚುಕಟ್ಟು ಕಾರ್ಯಕ್ರಮವನ್ನು ಸಾಧಕ ಎಂಜಿನಿಯರ್‌ಗಳು, ಕುಟುಂಬಸ್ಥರು ತಮ್ಮ ಮನೆಯ ಕಾರ್ಯಕ್ರಮದಂತೆ ಸಂಭ್ರಮಿಸಿದರು. ಪ್ರಶಸ್ತಿ ಪುರಸ್ಕಾರವಾಗುತ್ತಿದ್ದಂತೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಸಚಿವ ಸತೀಶ್‌ ಜಾರಕಿಹೊಳಿ, ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜವಾಬ್ದಾರಿಯುತ ಮಾಧ್ಯಮವಾಗಿ ಗ್ರಾಮೀಣ ಪ್ರತಿಭೆಗಳನ್ನು ಕರೆತಂದು ಸನ್ಮಾನಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಂಜಿನಿಯರ್‌ಗಳಿಲ್ಲದೆ ಜೀವನ ಕಲ್ಪಿಸಿಕೊಳ್ಳುವುದು ಅಸಾಧ್ಯ ಎನ್ನುವುದರ ಮೂಲಕ ನಟ ಸತೀಶ್‌ ನೀನಾಸಂ ಕಾರ್ಯಕ್ರಮದ ಮಹತ್ವದ ಬಗ್ಗೆ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ವಿದ್ಯಾಶಂಕರ್‌ ಪ್ರಪಂಚವೇ ಗುರುತಿಸುತ್ತಿರುವ ಎಂಜಿನಿಯರ್‌ಗಳನ್ನು ಕರ್ನಾಟಕ ನೀಡುತ್ತಿದೆ ಎಂದರು.

ಪ್ರಧಾನ ಸಂಪಾದಕ ರವಿ ಹೆಗಡೆ, ಮಾಧ್ಯಮ ಲೋಕದಲ್ಲಿ ಕನ್ನಡಪ್ರಭ- ಸುವರ್ಣ ನ್ಯೂಸ್‌ ಟ್ರೆಂಡ್‌ ಸೆಟ್ಟರ್‌. ದೇಶದ ಪ್ರಗತಿಯ ತೆರೆಮರೆಯಲ್ಲಿದ್ದು ಕೊಡುಗೆ ನೀಡುವ ಎಂಜಿನಿಯರ್‌ಗಳಿಗೆ ಪ್ರೋತ್ಸಾಹಿಸಬೇಕು. ಅವರ ಕೌಶಲ್ಯ ಇನ್ನಷ್ಟುಹೆಚ್ಚಬೇಕು ಎಂಬ ಕಾರಣಕ್ಕೆ ಎಮಿನೆಂಟ್‌ ಎಂಜಿನಿಯರ್‌ ಪ್ರಶಸ್ತಿ ನೀಡುತ್ತಿರುವುದಾಗಿ ತಿಳಿಸಿದರು. ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನಮಕ್ಕನವರ್‌ ವಂದಿಸಿದರು. ಭಾವನಾ ನಾಗಯ್ಯ ನಿರೂಪಿಸಿದರು. ಶಾಸಕರಾದ ರಾಜು ಕಾಗೆ ಮತ್ತಿತರರು ಪಾಲ್ಗೊಂಡಿದ್ದರು.

National Award ಗೆದ್ದ ಸ್ಟಾರ್ ನಟ, ನಟಿಯರು ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ ಗೊತ್ತಾ?

ವರ್ಣರಂಜಿತ ಸುಂದರ ಸಂಜೆ, ಅದ್ಧೂರಿ ಕಾರ್ಯಕ್ರಮ

ಸುಂದರ ಸಂಜೆಯಲ್ಲಿ, ಝಗಮಗಿಸುವ ದೀಪಗಳ ಬೆಳಕಿನಲ್ಲಿ ಸರಳವಾಗಿ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ಎಮಿನೆಂಟ್ ಎಂಜಿನಿಯರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಹಿನ್ನೆಲೆ ಗಾಯಕರಾದ ಡೇವಿಡ್ ಮತ್ತು ಶ್ವೇತ ಪ್ರಭು ಅವರು ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರಶಸ್ತಿ ಪುರಸ್ಕೃತ ಎಂಜಿನಿಯರ್‌ಗಳು ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಮನಸೂರೆಗೊಳಿಸಿದರು. ಬೆಂಗಳೂರಿನ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರದವರು ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಬಳಿಕ ಪಲ್ಲವಿ, ಅರ್ನವ್ ಅಮೇಜ್‌ ತಂಡದವರು ಅದ್ಭುತ ನೃತ್ಯ ಪ್ರದರ್ಶನ ನೀಡಿದರು.

ಕುಟುಂಬದವರ ಫೋಟೋ ಸಂಭ್ರಮ:

ಸಾಧಕರು ವೇದಿಕೆ ಮೇಲೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟರು. ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಹಿಡಿದು ಮತ್ತು ಸಾಧಕರೊಂದಿಗೆ ಬೇರೆ ಬೇರೆ ಊರುಗಳಿಂದ ಬಂದಿದ್ದವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

Follow Us:
Download App:
  • android
  • ios