ತುಮಕೂರು[ಫೆ.17]: ದೇವಸ್ಥಾನದ ಬಳಿ ಕಟ್ಟಿಹಾಕಿದ್ದ ಸಾಕಾನೆಯೊಂದು ತನಗೆ ಬಾಳೆಹಣ್ಣನ್ನು ತಿನ್ನಿಸಲು ಬಂದ ಯುವಕನ ತಲೆಯನ್ನೇ ಜಗಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕೋರಾ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಪ್ರತಾಪ್‌(20) ಆನೆದಾಳಿಗೊಳಗಾದ ಯುವಕ. ಗಂಭೀರ ಗಾಯಗೊಂಡಿರುವ ಪ್ರತಾಪನಿಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಗೆ ಬಾಳೆಹಣ್ಣು ತಿನ್ನಿಸಲು ಹೋದಾಗ ಅದು ತನ್ನ ಸೊಂಡಿಲಿನಲ್ಲಿ ಬಾಳೆಹಣ್ಣಿನೊಂದಿಗೆ ಯುವಕನ ತಲೆಯನ್ನೂ ಬಾಯಿಗಿಟ್ಟಿದೆ. ನೋಡ ನೋಡುತ್ತಿದ್ದಂತೆ ಆನೆ ಯುವಕನ ಕಿವಿ ಮತ್ತು ತಲೆಯ ಭಾಗವನ್ನು ಜಗಿದ ಬಳಿಕ ಆತನನ್ನು ದೂರಕ್ಕೆ ಎಸೆದಿದೆ.

ಮೂಲತಃ ಸರ್ಕಸ್‌ ಕಂಪನಿಯೊಂದರಲ್ಲಿದ್ದ ಈ ಆನೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ ಶೆಡ್‌ ನಿರ್ಮಿಸಿ ಇಡಲಾಗಿತ್ತು. ಅದರ ಜೊತೆಗೊಬ್ಬ ಮಾವುತನೂ ಇರುತ್ತಿದ್ದ. ಆದರೆ ಘಟನೆ ನಡೆದಾಗ ಮಾವುತ ಅಲ್ಲಿರಲಿಲ್ಲ ಎನ್ನಲಾಗಿದೆ.