ರಾಹುಲ್ ಯಾತ್ರೆ ವೇಳೆ ವಿದ್ಯುತ್ ತಗುಲಿ ನಾಲ್ವರಿಗೆ ಗಾಯ: ಆಸ್ಪತ್ರೆಗೆ ದಾಖಲು
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಧ್ವಜವಿದ್ದ ಕಬ್ಬಿಣದ ರಾಡ್‌ಗೆ ವಿದ್ಯುತ್ ತಂತಿ ತಗುಲಿದ್ದರಿಂದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಬಳ್ಳಾರಿ (ಅ.17): ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಧ್ವಜವಿದ್ದ ಕಬ್ಬಿಣದ ರಾಡ್‌ಗೆ ವಿದ್ಯುತ್ ತಂತಿ ತಗುಲಿದ್ದರಿಂದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ರಾಹುಲ್, ಡಿ.ಕೆ.ಶಿವಕುಮಾರ ಸೇರಿದಂತೆ ಉಳಿದ ಮುಖಂಡರು ಪಾರಾಗಿದ್ದಾರೆ. ಈ ವೇಳೆ, ನಡೆದ ನೂಕು ನುಗ್ಗಾಟದಲ್ಲಿ ಶಾಸಕ ನಾಗೇಂದ್ರ ಸೇರಿದಂತೆ ಕೆಲವರು ಕೆಳಕ್ಕೆ ಬಿದ್ದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ರಾಹುಲ್, ಗಾಯಾಳುಗಳಿಗೆ 1 ಲಕ್ಷ ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ.
ಆಗಿದ್ದೇನು?: ಯುವಕನೊಬ್ಬ ಪಾದಯಾತ್ರೆಯಲ್ಲಿ ದೊಡ್ಡದಾದ ಕಾಂಗ್ರೆಸ್ ಧ್ವಜ ಹಿಡಿದು ತಿರುಗಿಸುತ್ತಿದ್ದ. ಅಕ್ಕಪಕ್ಕದ ಬಸ್ ಶೆಲ್ಟರ್ ಸೇರಿದಂತೆ ಎತ್ತರ ಪ್ರದೇಶಗಳಲ್ಲಿ ನಿಂತು ಧ್ವಜ ಬೀಸುತ್ತಿದ್ದ. ಯಾತ್ರೆ ಮೋಕಾ ಗ್ರಾಮದ ಸಮೀಪ ಬರುತ್ತಿದ್ದಾಗ ಯುವಕನ ಕೈಯಲ್ಲಿದ್ದ ಧ್ವಜದ ಕಬ್ಬಿಣದ ಹಿಡಿಕೆ ಮೇಲಿದ್ದ ವಿದ್ಯುತ್ ತಂತಿಗೆ ತಗುಲಿತು. ವಿದ್ಯುತ್ ಸ್ಪರ್ಶವಾಗಿ, ಧ್ವಜವನ್ನು ಕೆಳಕ್ಕೆ ಬಿಟ್ಟ. ಧ್ವಜ ಬೀಳುತ್ತಿರುವುದನ್ನು ಗಮನಿಸಿದ ಇತರ ಮೂವರು ಕಾರ್ಯಕರ್ತರು ಅದನ್ನು ಹಿಡಿದಾಗ, ಅವರಿಗೂ ವಿದ್ಯುತ್ ಸ್ಪರ್ಶವಾಯಿತು. ಬಳಿಕ, ಧ್ವಜ ತಂತಿಯಿಂದ ಬೇರ್ಪಟ್ಟು, ನೆಲಕ್ಕೆ ಬಿತ್ತು.
ಕರ್ನಾಟಕದಲ್ಲಿ ದುಡ್ಡಿದ್ದವರಿಗೆ ಮಾತ್ರ ನೌಕರಿ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಅವಘಡ ಸಂಭವಿಸಿದ ಸ್ಥಳದ ಸಮೀಪದಲ್ಲೇ ರಾಹುಲ್ ಹಾಗೂ ಇತರ ಮುಖಂಡರು ಹೆಜ್ಜೆ ಹಾಕುತ್ತಿದ್ದರು. ಅವಘಡ ಸಂಭವಿಸಿ, ಗದ್ದಲ ಶುರುವಾಗುತ್ತಿದ್ದಂತೆ ರಾಹುಲ್ ಸೇರಿದಂತೆ ಮುಖಂಡರೆಲ್ಲರನ್ನು ಎಸ್‌ಪಿಜಿ ಹಾಗೂ ಪೊಲೀಸರು ಸುತ್ತುವರಿದು, ಮುಂದಕ್ಕೆ ಕರೆದೊಯ್ದರು. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ, ಪಾದಯಾತ್ರೆ ಮುಂದುವರಿಯಿತು.
ರಾಹುಲ್ ಜತೆ ರಾಯಚೂರಲ್ಲಿ 21, 22ಕ್ಕೆ ಪ್ರಿಯಾಂಕಾ ನಡಿಗೆ?: ರಾಯಚೂರಿನಲ್ಲಿ ಈ ತಿಂಗಳ 21 ಹಾಗೂ 22ರಂದು ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಮೊದಲು ಅ.9ರಂದು ರಾಜ್ಯಕ್ಕೆ ಆಗಮಿಸಿ ತಿಪಟೂರಿನ ಕೆ.ಬಿ.ಕ್ರಾಸ್‌ನಿಂದ ಆರಂಭವಾಗಲಿರುವ ಪಾದಯಾತ್ರೆಯಲ್ಲಿ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಪ್ರಿಯಾಂಕಾ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಬಂದಿರಲಿಲ್ಲ.
ಭಾರತ್ ಜೋಡೋ ಯಾತ್ರೆ: ಬಳ್ಳಾರಿಯಲ್ಲಿಂದು ರಾಹುಲ್ ಭರ್ಜರಿ ರ‍್ಯಾಲಿ
ಇದರ ನಡುವೆ ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು. ಆದರೆ, ಇದೀಗ ಮತ್ತೆ ಅ.21 ಹಾಗೂ 22ರಂದು ರಾಯಚೂರಿನಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಪ್ರಿಯಾಂಕಾ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಪ್ರಸ್ತುತ ಯಾತ್ರೆಯು ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದು, ರಾಜ್ಯಕ್ಕೆ ವಾಪಸಾದ ಬಳಿಕ ಯಾತ್ರೆಯೊಂದಿಗೆ ಜತೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.