ಕರ್ನಾಟಕದಲ್ಲಿ ದುಡ್ಡಿದ್ದವರಿಗೆ ಮಾತ್ರ ನೌಕರಿ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಪಿಎಸ್‌ಐ, ಉಪನ್ಯಾಸಕ ಹುದ್ದೆಗಳು ಮಾರಾಟಕ್ಕೆ, ನಿರುದ್ಯೋಗ, ಬೆಲೆ ಏರಿಕೆಯಿಂದ ಜನ ತತ್ತರ: ಬಳ್ಳಾರಿಯಲ್ಲಿ ವಾಗ್ದಾಳಿ
ಶಿವಾನಂದ ಗೊಂಬಿ
ಬಳ್ಳಾರಿ(ಅ.16): ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಸರ್ಕಾರವಿದೆ. ಯಾವುದೇ ಕೆಲಸಕ್ಕಾದರೂ ಕಮಿಷನ್ ಮಾಮೂಲಾಗಿದೆ. ಪಿಎಸ್‌ಐ, ಉಪನ್ಯಾಸಕ ಹುದ್ದೆಗಳು ಬಿಕರಿಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿನ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಭಾರತ್ ಐಕ್ಯತಾ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಬರೋಬ್ಬರಿ 40 ನಿಮಿಷ ಅಬ್ಬರದ ಭಾಷಣ ಮಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಶೇ.40 ಕಮಿಷನ್ ಸರ್ಕಾರವಿದೆ. ರಾಜ್ಯದಲ್ಲಿ ಯಾವುದೇ ಕೆಲಸವಾಗಬೇಕೆಂದರೂ ಸರ್ಕಾರದ ಪ್ರತಿನಿಧಿಗಳಿಗೆ ಕಮಿಷನ್ ಕೊಡಬೇಕಿದೆ. ಇನ್ನು ಪಿಎಸ್‌ಐ ಆಗಬೇಕೆಂದರೆ .80 ಲಕ್ಷ ಲಂಚ ನೀಡಬೇಕು. ಉಪನ್ಯಾಸಕ ಹುದ್ದೆಗಳ ನೇಮಕಾತಿಯಲ್ಲೂ ಅವ್ಯವಹಾರ ತಾಂಡವಾಡುತ್ತಿದೆ. ಕರ್ನಾಟಕದಲ್ಲಿ ದುಡ್ಡಿದ್ದವರಿಗೆ ಮಾತ್ರ ನೌಕರಿ ಎಂಬಂತಾಗಿದೆ ಎಂದರು.
ಮೋದಿ ಅಧಿಕಾರಕ್ಕೆ ಬರುವ ಮುನ್ನ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ, ನಿರುದ್ಯೋಗ ಪ್ರಮಾಣ ಜಾಸ್ತಿಯಾಗಿದೆ. ನೋಟು ಬ್ಯಾನ್, ಜಿಎಸ್ಟಿಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ರೈತರಿಗೂ ತೆರಿಗೆ ಹಾಕಲಾಗುತ್ತಿದೆ. ಗೊಬ್ಬರದ ಮೇಲೆ 5%ರಷ್ಟು, ಟ್ರ್ಯಾಕ್ಟರ್ ಮೇಲೆ 12% ರಷ್ಟು ಜಿಎಸ್ಟಿ ಹಾಕಲಾಗುತ್ತಿದೆ. ಈ ಮೂಲಕ ರೈತರನ್ನು ಸುಲಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಬಳ್ಳಾರೀಲಿ ಕಾಂಗ್ರೆಸ್ ಅಬ್ಬರ: 'ಕೈ' ಪಾಳೆಯಕ್ಕೆ ಹುಮ್ಮಸ್ಸು
ದೇಶದಲ್ಲಿ ಬರೀ ಹಿಂಸೆ, ದ್ವೇಷ, ಜಾತಿಯ ವಿಷ ಬೀಜ ಬಿತ್ತಲಾಗುತ್ತಿದೆ. ಆರ್‌ಎಸ್‌ಎಸ್ ವಿಚಾರಧಾರೆ ದೇಶವನ್ನು ಒಡೆಯುತ್ತಿದೆ. ಹಿಂದೂಸ್ತಾನದ ಮೇಲೆ ದಾಳಿ ನಡೆಯುತ್ತಿದೆ. ಅಲ್ಲಿ ದೇಶ ಭಕ್ತಿಗೆ ಜಾಗವಿಲ್ಲದಂತಾಗಿದೆ. ಮುಗ್ದ ಮನಸುಗಳನ್ನು ಕೆಡಿಸುವ ಮೂಲಕ ದೇಶದ ಐಕ್ಯತೆಗೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದೆ ಎಂದು ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಕಿಡಿಕಾರಿದರು.
ದೇಶವನ್ನು ಒಗ್ಗೂಡಿಸಲು ದ್ವೇಷ, ಹಿಂಸೆಯ ವಿರುದ್ಧ, ದೇಶದಲ್ಲಿ ಐಕ್ಯತೆ ತರುವುದಕ್ಕಾಗಿ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ. ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಸಹ ಈ ರೀತಿಯ ಐಕ್ಯತೆಯನ್ನೇ ಜಗತ್ತಿಗೆ ಸಾರಿದ್ದು ಎಂದ ಅವರು, ಈ ಗುಣ ಕರ್ನಾಟಕದ ಜನತೆಯ ರಕ್ತದಲ್ಲೇ ಇದೆ. ಎಷ್ಟೇ ವಿಷ ಬೀಜ ಬಿತ್ತಿದರೂ ಅದನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಕರ್ನಾಟಕದ ಬಗ್ಗೆ ನಮಗೆ ಹೆಚ್ಚಿನ ಪ್ರೀತಿ,ವಿಶ್ವಾಸ, ಗೌರವವಿದೆ. ನಮ್ಮಜ್ಜಿ ಹಾಗೂ ನಮ್ಮ ತಾಯಿಯನ್ನು ಅತ್ಯಂತ ಹೆಚ್ಚಿನ ಮತಗಳಿಂದ ರಾಜ್ಯದ ಜನತೆ ಆರಿಸಿ ಕಳುಹಿಸಿತ್ತು. ಇದಕ್ಕಾಗಿ ಕರ್ನಾಟಕದ ಜನತೆಗೆ ವಿಶೇಷ ಧನ್ಯವಾದಗಳು ಎಂದರು.