ಭಾರತ್‌ ಜೋಡೋ ಯಾತ್ರೆ: ಬಳ್ಳಾರಿಯಲ್ಲಿಂದು ರಾಹುಲ್‌ ಭರ್ಜರಿ ರ‍್ಯಾಲಿ

ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಮಾವೇಶ, ಸುತ್ತಲ 3 ಜಿಲ್ಲೆಗಳಿಂದ ಲಕ್ಷಾಂತರ ಜನರ ಆಗಮನ ನಿರೀಕ್ಷೆ

Rahul Gandhi's Grand Rally Will Be Held on October 15th in Ballari grg

ಬಳ್ಳಾರಿ(ಅ.15):  ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಮಾವೇಶಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಇಲ್ಲಿನ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ವೇದಿಕೆ ನಿರ್ಮಾಣಗೊಂಡಿದೆ. ಐಕ್ಯತಾ ಯಾತ್ರೆಯ ಸಮಾವೇಶದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಸೇರಿದಂತೆ 60ಜನರಿಗೆ ಮಾತ್ರ ಕುಳಿತುಕೊಳ್ಳಲು ಹಾಗೂ ವೇದಿಕೆಯ ಮುಂಭಾಗದಲ್ಲಿ 60 ಸಾವಿರ ಜನರು ಕುಳಿತುಕೊಳ್ಳುವಷ್ಟುಆಸನಗಳ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶ ಸೇರಿ ಐದು ಲಕ್ಷ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದು, ಸುಮಾರು ಮೂರು ಲಕ್ಷ ಜನರು ಪಾಲ್ಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಿಂದ ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಬಳ್ಳಾರಿ ಸಮಾವೇಶಕ್ಕೆ ಆಗಮಿಸಲಿದ್ದಾರೆ.

3 ಲಕ್ಷ ಜನರಿಗೆ ಊಟದ ವ್ಯವಸ್ಥೆ:

ನಗರದ ಅಲ್ಲಂ ಭವನದಲ್ಲಿ ಹತ್ತಾರು ಜನರ ಬಾಣಸಿಗರು ಅಡುಗೆ ಸಿದ್ಧತೆಯಲ್ಲಿದ್ದು, ಡಬ್ಬಿಯಲ್ಲಿ ಊಟವನ್ನು ತುಂಬಿಡಲು 100ಕ್ಕೂ ಹೆಚ್ಚು ಕಾರ್ಮಿಕರನ್ನು ನಿಯೋಜಿಸಲಾಗಿದೆ. ಕೇಸರಿಬಾತ್‌, ಚಿತ್ರಾನ್ನ, ಮೊಸರನ್ನ, ಪಲಾವ್‌, ಪುಳಿಯೊಗರೆ, ರೈಸ್‌ಬಾತ್‌ ತಯಾರಿಸಲಾಗುತ್ತಿದೆ. ಊಟದ ಡಬ್ಬಿಯ ಜತೆಗೆ ಅರ್ಧ ಲೀಟರ್‌ನ ನೀರಿನ ಬಾಟಲ್‌ಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ಮಾಜಿ ಸಚಿವ ಅನಿಲ್‌ ಲಾಡ್‌ ಅವರು ಊಟ ವ್ಯವಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ನಮ್ಮಪ್ಪನ ಮೇಲಾಣೆ, ಸಿದ್ದು ಸಿಎಂ ಆಗಲ್ಲ: ನಳಿನ್‌ ಕುಮಾರ್‌ ಕಟೀಲ್‌

ಬ್ಯಾನರ್‌, ಫ್ಲೆಕ್ಸ್‌, ಬಾವುಟಗಳ ಸ್ವಾಗತ:

ರಾಹುಲ್‌ ಗಾಂಧಿ ಅವರ ಆಗಮನದಿಂದ ಹುರುಪುಗೊಂಡಿರುವ ಇಲ್ಲಿನ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ನಗರದಲ್ಲೆಡೆ ಬ್ಯಾನರ್‌, ಫ್ಲೆಕ್ಸ್‌ ಹಾಗೂ ಪಕ್ಷದ ಬಾವುಟಗಳನ್ನು ಕಟ್ಟಿಸಂಭ್ರಮಿಸುತ್ತಿದ್ದಾರೆ.

ಬಿಗಿ ಪೊಲೀಸ್‌ ಭದ್ರತೆ:

ರಾಹುಲ್‌ ಗಾಂಧಿ ನೇತೃತ್ವದ ಐಕ್ಯತಾ ಪಾದಯಾತ್ರೆಗೆ 2 ಸಾವಿರಕ್ಕೂ ಹೆಚ್ಚು ಜನ ಪೊಲೀಸರನ್ನು ನಿಯೋಜಿಸಲಾಗಿದ್ದು, ಶುಕ್ರವಾರ ಬೆಳಗ್ಗೆಯೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಪೊಲೀಸರು ಬಳ್ಳಾರಿಗೆ ಬಂದಿದ್ದಾರೆ. ಪೊಲೀಸರಿಗೆ ವಾಸ್ತವ್ಯಕ್ಕೆ ನಗರದ ಕಲ್ಯಾಣ ಮಂಟಪಗಳು, ಲಾಡ್ಜ್‌ಗಳು, ವಸತಿ ನಿಲಯಗಳನ್ನು ನೀಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದ ವೇಳೆ ಡ್ರೋನ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
 

Latest Videos
Follow Us:
Download App:
  • android
  • ios