ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮನ್ರೇಗಾ ತಿದ್ದುಪಡಿ ಹೇಳಿಕೆಗೆ ಶಾಸಕ ಎ.ಎಸ್. ಪೊನ್ನಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿಯು ಉದ್ಯೋಗ ಖಾತ್ರಿಗೆ ಮಾರಕವಾಗಿದ್ದು, ಚರ್ಚೆ ನಡೆಸದೇ ಜಾರಿಗೊಳಿಸಿರುವುದು ಗಾಂಧೀಜಿಯವರ ಕೊಡುಗೆ ಮುಚ್ಚಿಹಾಕುವ ಪ್ರಯತ್ನ ಎಂದು ಅವರು ಆರೋಪಿಸಿದರು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜ.11) : ಮನ್ರೇಗಾದಲ್ಲಿ ದೊಡ್ಡ ಅವ್ಯವಹಾರವಾಗಿದೆ, ಹೀಗಾಗಿಯೇ ಅದನ್ನು ಇನ್ನಷ್ಟು ಸಶಕ್ತಗೊಳಿಸುವುದಕ್ಕಾಗಿ ವಿಬಿ ಜಿರಾಮ್ ಜಿ ಎಂದು ತಿದ್ದುಪಡಿ ಮಾಡಲಾಗುತ್ತಿದೆ ಬೇಕಾದರೆ ಅದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಡಿಕೇರಿಯಲ್ಲಿ ತಿರುಗೇಟು ನೀಡಿದ್ದಾರೆ.
ಚರ್ಚೆ ಈಗ ಮಾಡುವುದಲ್ಲ, ತಿದ್ದುಪಡಿಗೂ ಮುನ್ನ ಚರ್ಚೆ ಆಗಬೇಕಾಗಿತ್ತು. ಮಹಾತ್ಮಗಾಂಧಿಜೀ ಅವರ ಇತಿಹಾಸದ ಕೊಡುಗೆಯನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಅದರ ಮತ್ತೊಂದು ಹೆಜ್ಜೆ ಇದು ಅಷ್ಟೇ. ಅದಕ್ಕೆ ಕುಮಾರಸ್ವಾಮಿಯವರು, ಅವರ ಸರ್ಕಾರ ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ. ಈಗ ಆಗಿರುವ ತಿದ್ದುಪಡಿ ಉದ್ಯೋಗ ಗ್ಯಾರಂಟಿಗೆ ಮಾರಕವಾಗಿದೆ. ಫಂಡಿಂಗ್ ನಲ್ಲೂ 90-10 ಇತ್ತು, ಅದು 60-40 ಆಗಿದೆ. ಜೊತೆಗೆ ಈಗ ಅಗತ್ಯ ಇದ್ದವರಿಗೆ ಉದ್ಯೋಗ ಅಂತ ಮಾಡಿದ್ದಾರೆ. ಆದ್ದರಿಂದ ಉದ್ಯೋಗ ಖಾತ್ರಿ ಗ್ಯಾರಂಟಿ ಇಲ್ಲದಂತೆ ಆಗಿದೆ. 125 ದಿನ ಉದ್ಯೋಗ ಕೊಟ್ಟಿದ್ದೇವೆ ಅಂತ ಹೇಳುತ್ತಿದ್ದಾರೆ. ಆದರೆ ಇದರಲ್ಲಿ 50 ದಿನವೂ ಕೆಲಸ ಇಲ್ಲದಂತೆ ಮಾಡಿದ್ದಾರೆ. ವ್ಯವಸಾಯದ ಸಮಯದಲ್ಲಿ ಬ್ಲಾಕ್ ಪಿರೇಡ್ ಅಂತ ಮಾಡಿದ್ದಾರೆ. ಅಂದರೆ ವ್ಯವಸಾಯದ ಸಮಯದಲ್ಲಿ ಯಾರು ಕೆಲಸ ಮಾಡುವಂತಿಲ್ಲ. ಹಾಗಾದರೆ ಎಲ್ಲರೂ ಭೂಮಿ ಹೊಂದಿ ವ್ಯವಸಾಯ ಮಾಡುತ್ತಿದ್ದಾರೆಯೇ. ಹೀಗಾಗಿ ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಚರ್ಚೆಗೆ ಕೇಂದ್ರ ಸಚಿವರು ರೆಡಿ ಇದ್ದರೆ ಸ್ವಾಗತಾರ್ಹ ಎಂದಿದ್ದಾರೆ. ಆದರೆ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್ ಟಿ ಭಾಗದ ಹಣ ಬರಲಿಲ್ಲ, ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಅನುದಾನ ಬರಲಿಲ್ಲ. ರಾಜ್ಯಕ್ಕೆ ಬರಬೇಕಾಗಿರುವ ಅನುದಾನದ ಬಗ್ಗೆ ಸಂಸದರುಗಳು ಮಾತೇ ಆಡಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಯಾವ ಕೈಗಾರಿಕೆ ತಂದಿದ್ದಾರೆ. ಮಂಡ್ಯದ ಶಾಸಕರು ಮಂಡ್ಯಕ್ಕೆ ಒಂದೇ ಒಂದು ಇಂಡಸ್ಟ್ರಿ ತಂದಿಲ್ಲ ಎಂದರು, ಕುಮಾರಸ್ವಾಮಿಯವರು ಮೊದಲು ಅದಕ್ಕೆ ಉತ್ತರ ಕೊಡಲಿ ಎಂದು ಪೊನ್ನಣ್ಣ ಆಗ್ರಹಿಸಿದ್ದಾರೆ.
ಇನ್ನು ಜೆಡಿಎಸ್ ಪಕ್ಷದ ಚಿನ್ಹೆ ಬದಲಾವಣೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೊನ್ನಣ್ಣ ಮೊದಲು ಆ ಪಕ್ಷದ ಚಿನ್ಹೆ ರೈತರ ಪರ ಎನ್ನುವುದನ್ನು ಸೂಚಿಸುತಿತ್ತು. ಆದರೆ ಈಗ ರೈತರಿಂದ ಆ ಪಕ್ಷ ದೂರ ಆಗುತ್ತಿದೆ. ಅದಕ್ಕೆ ಪಕ್ಷವು ತನ್ನ ಚಿನ್ಹೆ ಬದಲಾಯಿಸಿಕೊಳ್ಳುತಿದೆ ಎನಿಸುತ್ತದೆ ಎಂದಿದ್ದಾರೆ. ಈಗ ಪಕ್ಷದ ಚಿಹ್ನೆ ಮಧ್ಯದಲ್ಲಿ ಅಶೋಕ ಚಕ್ರ ಇರಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಗಾಂಧೀಜಿಯವರ ತತ್ವಗಳನ್ನು ಈ ದೇಶದಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರು ಜಪಾನ್ ದೇಶಕ್ಕೆ ಹೋಗಿದ್ದರು. ಆಗ ಅವರಿಗೆ ದೇಶದಲ್ಲೆಲ್ಲಾ ಸಿಕ್ಕಿದ್ದೇನು, ಮಹಾತ್ಮ ಗಾಂಧಿಯವರ ಪ್ರತಿಮೆಗಳು ಸಿಕ್ಕಿವೆ. ನಮ್ಮ ದೇಶದಲ್ಲಿ ಎಂದೆಂದಿಗೂ ಗಾಂಧಿಯವರ ತತ್ವಗಳೇ ಶಾಶ್ವತ ಮಡಿಕೇರಿಯಲ್ಲಿ ಶಾಸಕ ಪೊನ್ನಣ್ಣ ಹೇಳಿದ್ದಾರೆ.


