ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯ(ಎಸ್‌ಇಪಿ) ಅಂತಿಮ ವರದಿಯನ್ನು ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ಬೆಂಗಳೂರು (ಆ.07): ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯ (ಎಸ್‌ಇಪಿ) ಅಂತಿಮ ವರದಿಯನ್ನು ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಇಪಿ ಜಾರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರೊ.ಸುಖದೇವ್ ಥೋರಟ್ ನೇತೃತ್ವದ ಸಮಿತಿ ರಚಿಸಿರುವ ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿ ಸಿದ್ಧವಾಗಿದೆ.

ಈ ವರದಿ ಕುರಿತು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರು, ಅಧಿಕಾರಿಗಳ ಸಭೆಯಲ್ಲಿ ಆಂತರಿಕವಾಗಿ ಒಮ್ಮೆ ಚರ್ಚಿಸಲಾಗುತ್ತದೆ. ನಂತರ ಮುಖ್ಯಮಂತ್ರಿಗಳ ಸಮಯ ಕೇಳಿ ಒಂದೆರಡು ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದರು. ಕಳೆದ ಮೇ 25ರಂದು ಸಮಿತಿಯು ಅಂತಿಮ ಸಭೆ ನಡೆಸಿ ವರದಿಯನ್ನು ಇಲಾಖೆಗೆ ಒಪ್ಪಿಸಿದೆ. ಈಗ ವರದಿಯನ್ನು ಇಲಾಖೆ ಸಚಿವರು ಹಾಗೂ ಸಮಿತಿ ಸದಸ್ಯರು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಬಳಿಕ ಸರ್ಕಾರವು ವರದಿಯನ್ನು ಬಹಿರಂಗಗೊಳಿಸಲಿದೆ ಎಂದು ತಿಳಿಸಿದರು.

ಎನ್‌ಇಪಿಗೆ ವಿರೋಧ ಹಿನ್ನೆಲೆಯಲ್ಲಿ ಎಸ್‌ಇಪಿ: ಕೇಂದ್ರ ಸರ್ಕಾರ 2020ರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ರೂಪಿಸಿ ಜಾರಿಗೊಳಿಸಿತ್ತು. 2021ರಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಎನ್‌ಇಪಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿತ್ತು. ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಎನ್‌ಇಪಿಗೆ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳಿಂದ ವಿರೋಧವಿದ್ದರೂ ರಾಜ್ಯದಲ್ಲಿ ಯಾವುದೇ ಅಭಿಪ್ರಾಯ ಸಂಗ್ರಹಿಸದೆ ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಹಾಗಾಗಿ ನಾವು ಎನ್‌ಇಪಿ ಬದಲು ಎಸ್‌ಇಪಿ ಜಾರಿಗೊಳಿಸುವುದಾಗಿ ಘೋಷಿಸಿತ್ತು.

ನಂತರ ಎಸ್‌ಇಪಿ ಕರಡು ರಚನೆಗೆ ಯುಜಿಸಿ ಮಾಜಿ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ.ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಸಮಿತಿ ರಚಿಸಿತ್ತು. ಸಮಿತಿಯು 2024-25ರಲ್ಲಿ ನೀಡಿದ ಮಧ್ಯಂತರ ವರದಿ ಆಧರಿಸಿ ಪದವಿ ವ್ಯಾಸಂಗವನ್ನು 3 ವರ್ಷದಿಂದ 4 ವರ್ಷಕ್ಕೆ ಹೆಚ್ಚಳ ಸೇರಿ ಎನ್‌ಇಪಿಯಡಿ ಜಾರಿಗೆ ತಂದಿದ್ದ ಹಲವು ಶೈಕ್ಷಣಿಕ ಅಂಶಗಳನ್ನು ಹಿಂಪಡೆಯಲಾಗಿತ್ತು. ಇದೀಗ ಅಂತಿಮ ವರದಿ ಆಧರಿಸಿ ಮತ್ತಷ್ಟು ಬದಲಾವಣೆಗಳಾಗುವ ನಿರೀಕ್ಷೆ ಇದೆ.