- 1ರಿಂದ 10ನೇ ತರಗತಿ ಶಾಲೆಗಳು ಶುರು- ನಾಳೆಯೇ ಎಲ್ಲ ಶಾಲೆಗಳ ಸ್ವಚ್ಛತೆಗೆ ತಾಕೀತು- ತಳಿರು ತೋರಣದ ಸಿಂಗಾರದೊಂದಿಗೆ ಮಕ್ಕಳ ಸ್ವಾಗತಕ್ಕೆ ಸಿದ್ಧತೆ

ಬೆಂಗಳೂರು(ಮೇ.14): ಈಗಾಗಲೇ ನಿಗದಿಪಡಿಸಿರುವಂತೆ ಮೇ 16ರಿಂದ ರಾಜ್ಯದಲ್ಲಿ 1ರಿಂದ 10ನೇ ತರಗತಿ ವರೆಗಿನ ಎಲ್ಲಾ ಮಕ್ಕಳಿಗೂ ಶಾಲೆಗಳು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಆರಂಭದ ಮುನ್ನಾದಿನ ಮೇ 15ರಂದೇ ಸಂಪೂರ್ಣ ಶಾಲಾ ಸ್ವಚ್ಛತೆ, ತಳಿರು ತೋರಣದ ಸಿಂಗಾರದೊಂದಿಗೆ ಮಕ್ಕಳನ್ನು ಬರಮಾಡಿಕೊಳ್ಳಲು ಅಗತ್ಯಸಿದ್ಧತೆ ಮಾಡಿಕೊಳ್ಳಲು ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮೊದಲ ದಿನ ಮೇ 16ರಂದು ಶಾಲೆ ಪ್ರಾರಂಭೋತ್ಸವದ ದಿನವಾಗಿರುತ್ತದೆ. ಅಂದಿನಿಂದಲೇ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಆರಂಭಿಸಬೇಕು. ಹಾಗಾಗಿ ಶಿಕ್ಷಕರು, ಇತರೆ ಸಿಬ್ಬಂದಿ 15ರಂದು ಶಾಲಾ ಸ್ವಚ್ಛತೆ, ಸುರಕ್ಷತೆ ಪರಿಶೀಲನೆ, ಪೂರ್ಣಭಾವಿ ಸಭೆ, ತರಬೇತಿ, ಸಮಾಲೋಚನಾ ಸಭೆಗಳೊಂದಿಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಮೇ 16ಕ್ಕೆ ಶಾಲೆ ಪ್ರಾರಂಭೋತ್ಸವ ನಡೆಸಿ ಮಕ್ಕಳನ್ನು ಸ್ವಾಗತಿಸಬೇಕು ಎಂದು ಸೂಚಿಸಲಾಗಿದೆ.

ಬೇಸಿಗೆ ಕಾರಣ ಶಾಲಾ ಸಮವಸ್ತ್ರ ಕಡ್ಡಾಯ ಬೇಡ, ರಾಜ್ಯಗಳಿಗೆ ಕೇಂದ್ರ ಸೂಚನೆ!

ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನು ಆಹ್ವಾನಿಸಬೇಕು ಎಂದು ಸೂಚಿಸಿದೆ. ಪ್ರಾರಂಭೋತ್ಸವದ ದಿನ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಆಕರ್ಷಣೀಯಗೊಳಿಸಬೇಕು. ಆರಂಭದ ದಿನವೇ ಮೊದಲ ಎರಡು ತರಗತಿ ಮಕ್ಕಳನ್ನು ಆಹ್ವಾನಿಸುವ ಕಾರ್ಯಕ್ರಮ ನಂತರ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು. ಬಿಸಿಯೂಟದಲ್ಲಿ ಮೊದಲ ದಿನ ಸಿಹಿ ಊಟ ತಯಾರಿಸಿ ಬಡಿಸಬೇಕು. ಇದಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಇಲಾಖೆಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಕಲಿಕಾ ಚೇತರಿಕೆ:
ಕಳೆದ ಎರಡು ಕೋವಿಡ್‌ ವರ್ಷಗಳಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಿರುವುದನ್ನು ಸರಿದೂಗಿಸಲು ಪ್ರಸಕ್ತ ಸಾಲಿನ ಇಡೀ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಲಾಗಿದೆ. ಮೇ 16ರಿಂದ 30ರವರೆಗೆ ಮಕ್ಕಳಿಗೆ ಸಂಪೂರ್ಣ ಹಿಂದಿನ ವರ್ಷದ ಕಲಿಕೆಯಲ್ಲಿ ಆಗಿರುವ ಕೊರತೆ ಸರಿದೂಗಿಸಲು ಪೂರಕವಾಗಿ ತರಗತಿಗಳು ನಡೆಯಲಿವೆ. ನಂತರ ಜೂ.1ರಿಂದ ಕಲಿಕಾ ಚೇತರಿಕೆ ಜೊತೆ ಜೊತೆಗೇ ಪ್ರಸಕ್ತ ವರ್ಷದ ಪಠ್ಯ ಬೋಧನಾ ಚಟುವಟಿಕೆಯನ್ನು ನಡೆಸಬೇಕು ಎಂದು ಶಿಕ್ಷಕರಿಗೆ ಇಲಾಖೆ ನಿರ್ದೇಶನ ನೀಡಿದೆ.

ಮಿಂಚಿನ ಸಂಚಾರ ನಡೆಸಲು ಅಧಿಕಾರಿಗಳಿಗೆ ಸೂಚನೆ
‘ಮೇ 16ರಿಂದ 20ರ ವರೆಗೆ ಪ್ರತಿ ಶಾಲೆಯಲ್ಲೂ ದಾಖಲಾತಿ ಆಂದೋಲನ ನಡೆಸಬೇಕು. ಮೇ 30ರ ವರೆಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಶಾಲೆಗೂ ಮಿಂಚಿನ ಸಂಚಾರ ನಡೆಸಿ ಕುಡಿಯುವ ನೀರು, ಶೌಚಾಲಯ, ಪೀಠೋಪಕರಣ, ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಯಾವುದೇ ಸೌಕರ್ಯಗಳಲ್ಲಿ ಕೊರತೆ, ನ್ಯೂನತೆಗಳಿದ್ದರೆ ಸರಿಪಡಿಸಲು ಕ್ರಮ ವಹಿಸಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಇಂಗ್ಲಿಷ್‌ ವ್ಯಾಮೋಹದ ಜತೆ ಶಿಕ್ಷಕರ ಕೊರತೆ: 12 ವರ್ಷದಲ್ಲಿ 37 ಸರ್ಕಾರಿ ಶಾಲೆ ಬಂದ್‌..!

ಸಭಾಪತಿ ಬಸವರಾಜ ಹೊರಟ್ಟಿಸೇರಿದಂತೆ ವಿಧಾನ ಪರಿಷತ್‌ನ ವಿವಿಧ ಸದಸ್ಯರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಬೇಸಿಗೆ ಬಿಸಿಲ ತಾಪ ಹೆಚ್ಚಿರುವುದರಿಂದ ಹಾಗೂ ಶಿಕ್ಷಕರಿಗೆ ಹೆಚ್ಚಿನ ರಜೆ ನೀಡಬೇಕೆಂದು ಆಗ್ರಹಿಸಿ ಬೇಸಿಗೆ ರಜೆಯನ್ನು ಮೇ 30ರವರೆಗೆ ವಿಸ್ತಿರಿಸ ಜೂ 1ರಿಂದ ಶಾಲೆ ಆರಂಭಿಸುವಂತೆ ಪತ್ರ ಬರೆದು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಅವರ ಒತ್ತಾಯಕ್ಕೆ ಮಣಿಯದ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಗದಿಯಂತೆ ಪ್ರತೀ ವರ್ಷಕ್ಕಿಂತ ಈ ಬಾರಿ 15 ದಿನ ಮೊದಲೇ ಶಾಲೆ ಆರಂಭಿಸುವ ನಿರ್ಧಾರಕ್ಕೆ ಬದ್ಧತೆ ತೋರಿದೆ.