ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಶಾಸಕನಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖಾ ಸಂಕಷ್ಟ ಎದುರಾಗಿದೆ.
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಶಾಸಕನಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖಾ ಸಂಕಷ್ಟ ಎದುರಾಗಿದೆ.
ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಅವರಿಗೆ ಇ.ಡಿ ತನಿಖೆ ಬಿಸಿ ತಟ್ಟಿದೆ. ಪ್ರಕರಣ ಸಂಬಂಧ ಶಾಸಕರಿಗೆ ಸಂಬಂಧಿಸಿದ ಬೆಂಗಳೂರಿನ ಮಾರತ್ತಹಳ್ಳಿಯ ಮನೆ, ಗೃಹ ಕಚೇರಿ, ಬಾಗೇಪಲ್ಲಿಯ ಮನೆ ಹಾಗೂ ಮುಂಬೈ, ದೆಹಲಿ ಸೇರಿ 37 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮದಲ್ಲಿ ಸುಬ್ಬಾರೆಡ್ಡಿ ತೊಡಗಿದ್ದಾರೆ. ಬೆಂಗಳೂರು ಸೇರಿ ಇತರೆ ನಗರಗಳಲ್ಲಿ ಅವರ ಒಡೆತನದ ಹೋಟೆಲ್‌ಗಳಿವೆ ಎನ್ನಲಾಗಿದೆ. ರಾಜಕೀಯವಾಗಿ ಸಕ್ರಿಯವಾಗಿರುವ ಅವರು ಮೊದಲು ಪಕ್ಷೇತರ ಶಾಸಕರಾಗಿ ಬಾಗೇಪಲ್ಲಿ ಕ್ಷೇತ್ರದಿಂದ ಚುನಾಯಿತರಾಗಿದ್ದರು. ನಂತರ ಕಾಂಗ್ರೆಸ್ ಸೇರಿದರು. ಬಾಗೇಪಲ್ಲಿ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಅವರು ಆಯ್ಕೆಯಾಗಿದ್ದಾರೆ.
ಮಲೇಷ್ಯಾ, ಹಾಂಗ್‌ಕಾಂಗ್ ಹಾಗೂ ಜರ್ಮನಿ ದೇಶಗಳಲ್ಲೂ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ವೇಳೆ ಅಕ್ರಮ ಹಣಕಾಸು ವಹಿವಾಟು ನಡೆದಿದೆ. ಅಲ್ಲದೆ, ವಿದೇಶಿ ವಿನಿಮಿಯ ನಿಯಂತ್ರಣ ಕಾಯ್ದೆ (ಫೆರಾ) ಉಲ್ಲಂಘನೆಯಾಗಿದೆ ಎಂದು ಇ.ಡಿ ಶಂಕೆ ವ್ಯಕ್ತಪಡಿಸಿದೆ.
- ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇ.ಡಿ. ದಾಳಿ
- - ಮಲೇಷ್ಯಾ, ಜರ್ಮನಿ, ಹಾಂಕಾಂಗಲ್ಲಿ ಹೂಡಿಕೆ
- - ಬೆಂಗಳೂರು, ದಿಲ್ಲಿ, ಮುಂಬೈನ 37 ಕಡೆ ರೇಡ್
- - ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸುಬ್ಬಾರೆಡ್ಡಿ
- - ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಹೋಟೆಲ್ ಹೊಂದಿರುವ ಬಾಗೇಪಲ್ಲಿ ಶಾಸಕ
- - ವಿದೇಶದಲ್ಲಿ ಹೂಡಿಕೆ ವೇಳೆ ಅಕ್ರಮ ಹಣದ ವಹಿವಾಟು ಆರೋಪ ಸಂಬಂಧ ಇ.ಡಿ. ಶಾಕ್
- - ಬೆಂಗಳೂರು, ಬಾಗೇಪಲ್ಲಿಯ ಮನೆ, ಕಚೇರಿಗಳಲ್ಲಿ ಶೋಧ. ದೇಶದ ವಿವಿಧೆಡೆಯೂ ದಾಳಿ
