ಬೆಂಗಳೂರಿನಲ್ಲಿ ನಡೆದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ  ED 17ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ಶಾಸಕ ನಲಪಾಡ್ ಹ್ಯಾರಿಸ್, ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಸಂಬಂಧಿಕರು ಹಾಗೂ ಹಲವು ಕ್ರಿಪ್ಟೋ ಕಂಪನಿಗಳ ಮೇಲೆ ಶೋಧ ನಡೆಸಲಾಗಿದ್ದು, ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. 2020ರ ವಂಚನೆ ಪ್ರಕರಣದಿಂದ ಆರಂಭವಾದ ಈ ತನಿಖೆಯು ಇದೀಗ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತೀವ್ರಗೊಂಡಿದೆ.

ಬೆಂಗಳೂರು ನಗರದಲ್ಲಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರದೇಶಗಳಲ್ಲಿ ಒಟ್ಟು 17 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ದಾಳಿಗಳು ಪ್ರಮುಖ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಮತ್ತು ಕ್ರಿಪ್ಟೋ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಸ್ಥಳಗಳನ್ನು ಒಳಗೊಂಡಿವೆ.

ದಾಳಿ ನಡೆದ ಪ್ರಮುಖ ಸ್ಥಳಗಳು

ಇಡಿ ಅಧಿಕಾರಿಗಳು ಕೆಳಗಿನ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ:

  • ಶಾಸಕ ನಲಪಾಡ್ ಹ್ಯಾರಿಸ್ ನಿವಾಸ
  • ಮಹಮ್ಮದ್ ನಲಪಾಡ್ ನಿವಾಸ
  • ಫಾರೂಕ್ ನಲಪಾಡ್ ಕಚೇರಿ
  • ನಲಪಾಡ್ ಕುಟುಂಬಕ್ಕೆ ಸೇರಿದ ನಾಲ್ಕು ಕಚೇರಿಗಳು
  • ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ನಿವಾಸ
  • ವೈಟ್‌ಫೀಲ್ಡ್‌ನಲ್ಲಿರುವ ಚಿಪ್ಸನ್ ಏವಿಯೇಷನ್ ಕಂಪನಿ
  • ಎಲೆಕ್ಟ್ರಾನಿಕ್ ಸಿಟಿಯ ಇನ್ ಪೀಜಿ ಐಟಿ ಸೆಲ್ಯುಲೋಸ್
  • ಹೋರೋಸ್ ಕ್ರಿಪ್ಟೋ ಕಂಪನಿ

ಈ ಎಲ್ಲಾ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಖಲೆಗಳು ಹಾಗೂ ಡಿಜಿಟಲ್ ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ.

ಜಯನಗರದಲ್ಲಿ ಹಕೀಬ್ ಖಾನ್ ಮನೆ ಮೇಲೆ ದಾಳಿ

ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಸಮೀಪದಲ್ಲಿರುವ ಮಾಜಿ ಕೇಂದ್ರ ಸಚಿವ ಕೆ ರಹಮಾನ್ ಖಾನ್ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸದ ಮೇಲೆ ಬೆಳಗ್ಗೆ ಸುಮಾರು 6:30ಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಮೂವರು ಅಧಿಕಾರಿಗಳ ತಂಡ ಮನೆಗೆ ಪ್ರವೇಶಿಸಿ ತಲಾಶಿ ನಡೆಸಿದ್ದು, ಬ್ಯಾಂಕ್ ಖಾತೆಗಳ ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಕೀಬ್ ಖಾನ್ ದೆಹಲಿ ಪಬ್ಲಿಕ್ ಸ್ಕೂಲ್‌ನ ಮಾಲೀಕರಾಗಿರುವುದಾಗಿ ತಿಳಿದುಬಂದಿದೆ. ಶ್ರೀಕಿ ಮತ್ತು ಹಕೀಬ್ ಖಾನ್ ನಡುವೆ ಹಣಕಾಸು ವ್ಯವಹಾರ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಇದೇ ಪ್ರಕರಣದ ಸಂಬಂಧವಾಗಿ ಕೆ. ರೆಹಮಾನ್ ಖಾನ್ ಅವರ ನಿವಾಸದಲ್ಲಿಯೂ ಶೋಧ ನಡೆದಿದೆ.

ಕ್ರಿಪ್ಟೋ ಕಂಪನಿಗಳ ಮೇಲೂ ದಾಳಿ

ಈ ಕಾರ್ಯಾಚರಣೆಯಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಕಂಪನಿಗಳ ಮೇಲೂ ದಾಳಿ ನಡೆದಿದೆ. ಹೋರೋಸ್ ಕ್ರಿಪ್ಟೋ ಕಂಪನಿ, ಇನ್ ಪೀಜಿ ಐಟಿ ಸೆಲ್ಯುಲೋಸ್ ಹಾಗೂ ಚಿಪ್ಸನ್ ಏವಿಯೇಷನ್ ಸಂಸ್ಥೆಗಳ ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣದಲ್ಲಿ 

ಪ್ರಕರಣದ ಹಿನ್ನಲೆ: 2020ರ ಎಫ್‌ಐಆರ್

ಈ ಪ್ರಕರಣದ ಮೂಲ 2020ರಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸೇರಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಯಶೋಧಾ ದೇವಿ ಎಂಬುವವರು ದೂರು ನೀಡಿದ್ದರು. ಶ್ರೀ ಶ್ರೀಕೃಷ್ಣ (ಶ್ರೀಕಿ), ರಾಬಿನ್ ಖಂಡೇಲ್ವಾಲ ಮತ್ತು ಅಜೀತ್ ಖಂಡೇಲ್ವಾಲ ಅವರು ₹28 ಲಕ್ಷ ಹೂಡಿಕೆ ಮಾಡಿದರೆ ₹45 ಲಕ್ಷ ಲಾಭ ದೊರೆಯುತ್ತದೆ ಎಂದು ನಂಬಿಸಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ದೂರುದಾರರು ಆರೋಪಿಗಳ ಮಾತು ನಂಬಿ ₹28 ಲಕ್ಷವನ್ನು ಅಜೀತ್ ಖಾತೆಗೆ ವರ್ಗಾಯಿಸಿದ್ದರೂ, ನಂತರ ಹಣವೂ ಲಾಭವೂ ದೊರೆಯದೆ ವಂಚನೆಗೊಳಗಾದರು.

ತನಿಖೆಯಲ್ಲಿ ನಲಪಾಡ್ ಹೆಸರು ಪತ್ತೆ

ಈ ಪ್ರಕರಣದ ತನಿಖೆ ವೇಳೆ ನಲಪಾಡ್ ಕುಟುಂಬದ ಹೆಸರು ಕೂಡ ಹೊರಬಂದಿತ್ತು. ಶ್ರೀಕಿ ಮತ್ತು ನಲಪಾಡ್ ಸಹೋದರ ಓಮರ್ ನಲಪಾಡ್ ನಡುವಿನ ಪರಿಚಯದ ಹಿನ್ನೆಲೆಯಲ್ಲಿ, ಶ್ರೀಕಿ ನಲಪಾಡ್ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಶ್ರೀಕಿ ಹ್ಯಾಕ್ ಮಾಡಿದ ಬಿಟ್‌ಕಾಯಿನ್ ಅನ್ನು ಮುಂಬೈ ಮೂಲದ ವ್ಯಕ್ತಿಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆ ವ್ಯಕ್ತಿಯಿಂದ ಸುಮಾರು ₹10 ಲಕ್ಷ ಮೊತ್ತ ನಲಪಾಡ್ ಖಾತೆಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿಯನ್ನು ಎಸ್‌ಐಟಿ ಪರಿಶೀಲಿಸಿತ್ತು.

ಎಸ್‌ಐಟಿ ತನಿಖೆ ಮತ್ತು ಅನುಮಾನಗಳು

ಹಣ ವರ್ಗಾವಣೆ ಕುರಿತು ಎಸ್‌ಐಟಿ ತನಿಖೆ ನಡೆಸಿದರೂ, ಇನ್ನೂ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ. ತನಿಖೆ ವೇಳೆ ಹಣವನ್ನು ಮರುಪಡೆಯಲು ಸಹಕರಿಸುವುದಾಗಿ ನಲಪಾಡ್ ಹೇಳಿದ್ದರೂ, ಇದುವರೆಗೆ ಹಣ ವಸೂಲಿಯಾಗಿಲ್ಲ ಎಂಬ ಮಾಹಿತಿ ಇದೆ.

ನಲಪಾಡ್ ಖಾತೆಗೆ ಹಣ ವರ್ಗಾವಣೆ ನಡೆದಿದ್ದರೂ, ಅವರನ್ನು ಅಧಿಕೃತ ಆರೋಪಿಯಾಗಿ ಘೋಷಿಸಲು ವಿಳಂಬವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳ ಒತ್ತಡದಿಂದ ಎಸ್‌ಐಟಿ ಮೃದುವಾಗಿ ವರ್ತಿಸಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಇಡಿ ತನಿಖೆ ತೀವ್ರ

ಈ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ಹಣ ಶುದ್ಧೀಕರಣ ನಿರೋಧಕ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅದರ ಭಾಗವಾಗಿಯೇ ಇಂದು ನಡೆದ ದಾಳಿಗಳು ಮಹತ್ವ ಪಡೆದುಕೊಂಡಿವೆ.

ಒಟ್ಟಾರೆ, ಇಡಿ ನಡೆಸಿದ ಈ ವ್ಯಾಪಕ ದಾಳಿಗಳಿಂದ ಬಿಟ್‌ಕಾಯಿನ್ ಹಗರಣದ ಆರ್ಥಿಕ ವ್ಯವಹಾರಗಳು, ಸಂಪರ್ಕಗಳು ಹಾಗೂ ಹಣದ ಹಾದಿ ಕುರಿತು ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.