ಬೆಂಗಳೂರಿನ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) 17 ಕಡೆ ದಾಳಿ ನಡೆಸಿದೆ. ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆದಿದೆ. ಇವರಿಬ್ಬರ ನಡುವಿನ ಹಣಕಾಸು ವ್ಯವಹಾರದ ಶಂಕೆಯ ಮೇಲೆ ಈ ದಾಳಿಗಳು ನಡೆದಿವೆ.
ಬೆಂಗಳೂರು: ನಗರದಲ್ಲಿ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, 17 ಕಡೆ ಏಕಕಾಲಕ್ಕೆ ದಾಳಿ ನಡೆಸಿದೆ. ಬಿಟ್‌ಕಾಯಿನ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ನಿವಾಸದ ಮೇಲೂ ದಾಳಿ ನಡೆಸಿದೆ. ಜಯನಗರದಲ್ಲಿರುವ ಶ್ರೀಕಿ ನಿವಾಸದ ಮೇಲೆ ಇಂದು ಬೆಳಗ್ಗೆ ಸುಮಾರು 5 ಗಂಟೆಯ ಸುಮಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಸಿಆರ್‌ಪಿಎಫ್ ಯೋಧರ ಭದ್ರತೆಯಲ್ಲಿ ಅಧಿಕಾರಿಗಳು ಮನೆಗೆ ಪ್ರವೇಶಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ಶ್ರೀಕಿ ಮನೆಯಲ್ಲಿ ಇದ್ದನೆಂದು ವರದಿ ತಿಳಿಸಿದೆ.
ಮಾಜಿ ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನ ನಿವಾಸಕ್ಕೂ ಇಡಿ ರೈಡ್
ಇದರೊಂದಿಗೆ, ಜಯನಗರದಲ್ಲೇ ಮತ್ತೊಂದು ಸ್ಥಳದಲ್ಲಿಯೂ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಸಮೀಪದಲ್ಲಿರುವ ಈ ಮನೆಗೆ ಬೆಳಗ್ಗೆ ಸುಮಾರು 6:30ಕ್ಕೆ ಇಡಿ ಅಧಿಕಾರಿಗಳು ಪ್ರವೇಶಿಸಿದ್ದು, ಮೂವರು ಅಧಿಕಾರಿಗಳ ತಂಡದಿಂದ ತಲಾಶಿ ನಡೆಸಲಾಗಿದೆ.
ತನಿಖೆಯ ಪ್ರಕಾರ, ಮಹಮ್ಮದ್ ಹಕೀಬ್ ಖಾನ್ ಅವರ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆದಿರುವ ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ಅವರ ಮೇಲೂ ಇಡಿ ದಾಳಿ ನಡೆಸಿದೆ. ಹಕೀಬ್ ಖಾನ್ ಮತ್ತು ಶ್ರೀಕಿ ನಡುವೆ ಹಣಕಾಸು ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಪರ್ಕದ ಹಿನ್ನೆಲೆಯಲ್ಲಿಯೇ ದಾಳಿ ನಡೆದಿದೆ.
ಹಣಕಾಸು ವ್ಯವಹಾರಗಳು ತನಿಖೆಯ ಭಾಗ
ಮತ್ತಷ್ಟು ಮಾಹಿತಿ ಪ್ರಕಾರ, ಮಹಮ್ಮದ್ ಹಕೀಬ್ ಖಾನ್ ದೆಹಲಿ ಪಬ್ಲಿಕ್ ಸ್ಕೂಲ್‌ನ ಮಾಲೀಕರಾಗಿದ್ದು, ಅವರ ಹಣಕಾಸು ವ್ಯವಹಾರಗಳು ತನಿಖೆಯ ಭಾಗವಾಗಿವೆ. ಜೊತೆಗೆ, ಈ ಪ್ರಕರಣದ ಸಂಬಂಧವಾಗಿ ಕೆ. ರೆಹಮಾನ್ ಖಾನ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳು ಶೋಧ ನಡೆಸಿರುವುದು ತಿಳಿದುಬಂದಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಹಾಗೂ ಅವರ ಸಂಪರ್ಕ ಹೊಂದಿರುವವರ ಮನೆಗಳ ಮೇಲೆ ಇಡಿ ದಾಳಿಗಳು ಮುಂದುವರಿದಿದ್ದು, ಹಣಕಾಸು ವ್ಯವಹಾರಗಳ ಪತ್ತೆ ಹಾಗೂ ಸಂಬಂಧಗಳ ಪರಿಶೀಲನೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಿದ್ದಾರೆ. ಈ ದಾಳಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ನಿರೀಕ್ಷೆಯಿದೆ.


