ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ
ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಗುರುವಾರ ಮಹತ್ವದ ಘಟ್ಟತಲುಪಲಿದ್ದು, ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಹೀಗಾಗಿ ಎಲ್ಲರೂ ಬನ್ನಿ, ಮಹತ್ವದ ಘಟ್ಟದಲ್ಲಿ ಒಂದಾಗಿ ಹೆಜ್ಜೆ ಹಾಕೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಬೆಂಗಳೂರು (ಅ.06): ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಗುರುವಾರ ಮಹತ್ವದ ಘಟ್ಟತಲುಪಲಿದ್ದು, ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಹೀಗಾಗಿ ಎಲ್ಲರೂ ಬನ್ನಿ, ಮಹತ್ವದ ಘಟ್ಟದಲ್ಲಿ ಒಂದಾಗಿ ಹೆಜ್ಜೆ ಹಾಕೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಎರಡು ದಿನಗಳ ವಿಶ್ರಾಂತಿ ಬಳಿಕ ಗುರುವಾರ ಪಾಂಡವಪುರದಿಂದ ಶುರುವಾಗಲಿರುವ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೋನಿಯಾ ಗಾಂಧಿ ನಡೆಯಲಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಅ.3ರಂದು ರಾಜ್ಯಕ್ಕೆ ಆಗಮಿಸಿದ್ದು, ಗುರುವಾರ ಪಾಂಡವಪುರದಿಂದ ಪುನರ್ ಆರಂಭವಾಗಲಿರುವ ಪಾದಯಾತ್ರೆಯಲ್ಲಿ ನಡೆಯಲಿದ್ದಾರೆ. ಕಾಂಗ್ರೆಸ್ಸಿಗರು ಹಾಗೂ ಯಾತ್ರಿಗಳಿಗೆ ಇದೊಂದು ಮಹತ್ವದ ಕ್ಷಣವಾಗಿದ್ದು, ಹೆಚ್ಚೆಚ್ಚು ಸಂಖ್ಯೆಯಲ್ಲಿ ಬನ್ನಿ, ಒಟ್ಟಾಗಿ ಹೆಜ್ಜೆ ಹಾಕೋಣ ಎಂದು ಕರೆ ಕೊಟ್ಟಿದ್ದಾರೆ.
ನಾನು ಸಿದ್ದು ಒಂದಾಗಿದ್ದೇವೆ, ಬಿಜೆಪಿ ಆಟ 6 ತಿಂಗಳಷ್ಟೇ: ಡಿಕೆಶಿ
ಸ್ಥಳ ಪರಿಶೀಲನೆ: ತಾಲೂಕಿನಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ಭೇಟಿ ನೀಡಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಡಿಕೆಶಿಯೊಂದಿಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಭೇಟಿಕೊಟ್ಟು ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು.
ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಯನ್ನು ಸ್ವಾಗತಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಪಾದಯಾತ್ರೆ ಸಂಚರಿಸುವ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಆರಂಭಿಕ ಗಡಿ ಗ್ರಾಮ ಖರಡ್ಯದಿಂದ ನಿರ್ಗಮಿತ ಗಡಿ ಗ್ರಾಮ ಚುಂಚನಹಳ್ಳಿ ಪಾಳ್ಳದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಬೃಹತ್ ಗಾತ್ರದ ಸಾವಿರಾರು ಫ್ಲೆಕ್ಸ್‌ಗಳು, ನಾಯಕರ ಕಟೌಟ್‌ಗಳು ಹಾಗೂ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ.
ಅ.6, 7ರಂದು ತಾಲೂಕಿನಲ್ಲಿ ಪಾದಯಾತ್ರೆ ಸಂಚರಿಸಲಿದೆ. ಖರಡ್ಯ ಗ್ರಾಮದಲ್ಲಿ ಸ್ವಾಗತ ಕೋರಿದ ನಂತರ ಚೌಡಗೋನಹಳ್ಳಿ ಗೇಚ್ ಬಳಿ ಮಧ್ಯಾಹ್ನದ ಭೋಜನ ಮುಗಿಸಿಕೊಂಡು ಯಾತ್ರೆ ಮುಂದುವರಿಯಲಿದೆ. ಬಳಿಕ ಚಿಣ್ಯ, ಹೊಣಕೆರೆ, ಸಾಮಕಹಳ್ಳಿ ಮಾರ್ಗವಾಗಿ ಸಂಜೆ 7ಗಂಟೆ ವೇಳೆಗೆ ಬ್ರಹ್ಮದೇವರಹಳ್ಳಿಯಲ್ಲಿ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ನಂತರ ಎಂ.ಹೊಸೂರು ಗೇಟ್‌ನಲ್ಲಿ ರಾಹುಲ್ ಗಾಂಧಿ ಕ್ಯಾರಿವಾನ್‌ನ ಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸೋನಿಯಾ ಭಾಗಿ: ಅ.6ರಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕೈ ಅಧಿನಾಯಕಿ ಸೋನಿಯಾ ಗಾಂಧಿ ಹೆಲಿಕಾಪ್ಟರ್ ಮೂಲಕ ನಾಗಮಂಗಲ ಪಟ್ಟಣಕ್ಕೆ ಬಂದಿಳಿಯಲಿದ್ದಾರೆ. ಇದಕ್ಕಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಪಟ್ಟಣದಿಂದ ರಸ್ತೆ ಮೂಲಕ ಬ್ರಹ್ಮದೇವರಹಳ್ಳಿಗೆ ಆಗಮಿಸುವ ಸೋನಿಯಾ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿ ತೆರಳುವರೆಂದು ತಿಳಿದುಬಂದಿದೆ. ಅ.7ರಂದು ಎರಡನೇ ದಿನ ಪಾದಯಾತ್ರೆ ಬೆಳಗ್ಗೆ 7 ಗಂಟೆಗೆ ತಾಲೂಕಿನ ಎಂ.ಹೊಸೂರು ಗೇಟ್ ಬಳಿಯ ವಿಸ್ಡಂ ಶಾಲೆ ಮುಂಭಾಗದಿಂದ ಆರಂಭಗೊಂಡು ಎ.ಶ್ರೀರಾಮನಹಳ್ಳಿ, ಕೆ.ಮಲ್ಲೇನಹಳ್ಳಿ ಮೂಲಕ ಪಟ್ಟಣವನ್ನು ಪ್ರವೇಶಿಸಲಿದೆ.
ರಾಹುಲ್ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!
ಮುಂದುವರಿದು ಉಪ್ಪಾರಹಳ್ಳಿ ಗೇಚ್, ಕಾಚೇನಹಳ್ಳಿ, ತೊಳಲಿ, ಅಂಚೆಚಿಟ್ಟನಹಳ್ಳಿ ಮಾರ್ಗವಾಗಿ ಮಧ್ಯಾಹ್ನ 12ರ ವೇಳೆಗೆ ಅಂಚೆಭೂವನಹಳ್ಳಿಗೆ ಆಗಮಿಸಿ ಭೋಜನದ ನಂತರ ಮುಂದುವರಿದು ಬೆಳ್ಳೂರು ಕ್ರಾಸ್ ಮೂಲಕ ಬೆಳ್ಳೂರು ಪಟ್ಟಣದಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ನಂತರ ಆದಿಚುಂಚನಗಿರಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕರು ವಾಸ್ತವ್ಯ ಹೂಡುವರು. ಅ.8ರ ಬೆಳಗ್ಗೆ ಕ್ಷೇತ್ರದ ಹೆಬ್ಬಾಗಿಲಿನಿಂದ ಆರಂಭಗೊಳ್ಳುವ ಪಾದಯಾತ್ರೆ ತಾಲೂಕಿನ ಗಡಿ ಗ್ರಾಮದ ಚುಂಚನಹಳ್ಳಿಪಾಳ್ಯದಲ್ಲಿ ನಿರ್ಗಮಿಸಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿಗೆ ತೆರಳಲಿದೆ. ಪಾದಯಾತ್ರೆ ವೇಳೆ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಈಗಾಗಲೇ ಬಿಗಿ ಪೊಲೀಸ್ ಬಂದೋಸ್ತ್ ನಿಯೋಜಿಸಲಾಗಿದೆ.