ದಾವಣಗೆರೆಯಲ್ಲಿನ ಡ್ರಗ್ಸ್ ಮತ್ತು ಪಡಿತರ ಅಕ್ಕಿ ಅಕ್ರಮ ಪ್ರಕರಣಗಳಲ್ಲಿ ತಮ್ಮ ಆಪ್ತರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮೌನ ಮುರಿದಿದ್ದಾರೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.
ದಾವಣಗೆರೆ(ಜ.21): ದಾವಣಗೆರೆಯಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್ ದಂಧೆ ಹಾಗೂ ಪಡಿತರ ಅಕ್ಕಿ ಅಕ್ರಮ ಸಾಗಾಟದ ಪ್ರಕರಣಗಳಲ್ಲಿ ತಮ್ಮ ಆಪ್ತರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರವಾಗಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಕೊನೆಗೂ ಮೌನ ಮುರಿದಿದ್ದಾರೆ. ತಪ್ಪು ಮಾಡಿದವರು ಯಾರೇ ಇರಲಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಫೋಟೋ ತೆಗೆಸಿಕೊಂಡವರೆಲ್ಲಾ ಆಪ್ತರಲ್ಲ
ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ವೇದಮೂರ್ತಿ ಬಂಧನದ ಬಗ್ಗೆ ಮಾತನಾಡಿದ ಸಚಿವರು, ಸಾರ್ವಜನಿಕ ಜೀವನದಲ್ಲಿ ಇರುವಾಗ ಸಾಕಷ್ಟು ಜನ ಬಂದು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರಲ್ಲಿ ಯಾರು ಯಾವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಯಲು ಸಾಧ್ಯವಿಲ್ಲ. ವೇದಮೂರ್ತಿ ಚಿಕ್ಕಪ್ಪ ಲೋಕಣ್ಣನ ಮನೆಯವರು ಹಿಂದೆ ನಮ್ಮ ಪಕ್ಷದ ಕಾರ್ಪೊರೇಟರ್ ಆಗಿದ್ದರು ಎಂಬುದು ನಿಜ. ಆದರೆ, ಫೋಟೋ ತೆಗೆಸಿಕೊಳ್ಳುವುದು ಅಪರಾಧವಲ್ಲ. ಅವರು ಮಾಡಿದ್ದನ್ನೆಲ್ಲಾ ನಮ್ಮ ತಲೆಗೆ ಕಟ್ಟಿದರೆ ಹೇಗೆ? ಎಂದು ಪ್ರಶ್ನಿಸಿದರು.
ಅಕ್ರಮ ಬಿಡಿ, ನ್ಯಾಯಯುತ ಕೆಲಸ ಮಾಡಿ
ನಾನು ಯಾವಾಗಲೂ ನ್ಯಾಯಯುತವಾಗಿ ಕೆಲಸ ಮಾಡಿ ಎಂದು ಜನರಿಗೆ ಹೇಳುತ್ತೇನೆ ಎಂದ ಸಚಿವರು, 'ಬದುಕು ಕಟ್ಟಿಕೊಳ್ಳಲು ಟೆಂಪೋ ಅಥವಾ ಲಾರಿ ಕೊಡಿಸಲು ನಾನೇ ಸಹಾಯ ಮಾಡುತ್ತೇನೆ, ಆದರೆ ಒಳ್ಳೆಯ ಕೆಲಸ ಮಾಡಿ ಎಂದು ಹಲವರಿಗೆ ಕಿವಿಮಾತು ಹೇಳಿದ್ದೇನೆ. ಅಕ್ರಮ ದಂಧೆಗಳಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ. ಊರಲ್ಲಿ ಎಲ್ಲಿ ಏನೇ ಆದರೂ ಅದಕ್ಕೆ ನಾನು ಕಾರಣ ಅಂದ್ರೆ ಏನರ್ಥ? ಎಂದು ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ: ಸಚಿವರ ಆದೇಶ
ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಮಲ್ಲಿಕಾರ್ಜುನ ಅವರು, 'ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕೇಸ್ ರಿಜಿಸ್ಟರ್ ಆಗಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಹೇಳಿದ್ದೇನೆ. ಇದರಲ್ಲಿ ಎರಡು ಮಾತಿಲ್ಲ, ಕಾನೂನು ತನ್ನ ಕೆಲಸ ತಾನು ಮಾಡಲಿದೆ' ಎಂದು ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ನೀಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ
ವಿರೋಧ ಪಕ್ಷದವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 'ಬಿಜೆಪಿಯವರ ಮಾತುಗಳನ್ನು ದಾವಣಗೆರೆ ಜನ ಯಾರೂ ನಂಬುವುದಿಲ್ಲ. ರಾಜಕೀಯವಾಗಿ ಆರೋಪ ಮಾಡುವುದು ಸುಲಭ, ಆದರೆ ಸತ್ಯವೇನೆಂದು ಜನರಿಗೆ ಗೊತ್ತಿದೆ' ಎಂದರು. ದಂಧೆಕೋರರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಲಿದೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.


