ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬಡವರ ಪಾಲಿನ 'ಅನ್ನಭಾಗ್ಯ' ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, 1,150 ಕೆ.ಜಿ. ಪಡಿತರ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ .

ಉತ್ತರ ಕನ್ನಡ(ಜ.18): ಉಕ ಜಿಲ್ಲೆಯ ಭಟ್ಕಳದಲ್ಲಿ ಬಡವರ ಪಾಲಿನ 'ಅನ್ನಭಾಗ್ಯ' ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ದೊಡ್ಡ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಬರೋಬ್ಬರಿ 1,150 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಈ ಅಕ್ರಮ ಬೆಳಕಿಗೆ ಬಂದಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ಹೈವೇ ಮೇಲೆ ಫಿಲ್ಮಿ ಸ್ಟೈಲ್ ದಾಳಿ!

ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ನೇತೃತ್ವದ ತಂಡ ಭಟ್ಕಳದ ರಂಗಿನಕಟ್ಟಾ ಬಳಿಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಖದೀಮರಿಗಾಗಿ ಕಾದು ಕುಳಿತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಮಾರುತಿ ಓಮ್ನಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಅಕ್ರಮವಾಗಿ ತುಂಬಿದ್ದ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಮುಗ್ಧಂ ಕಾಲೋನಿ ನಿವಾಸಿ ಆಸೀಫ್ ಉಲ್ಲಾ (38) ಎಂಬಾತ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಮೂವರು ಆರೋಪಿಗಳ ವಿರುದ್ಧ ಕೇಸ್ ದಾಖಲು

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಆಸೀಫ್ ಉಲ್ಲಾ, ಈ ಅಕ್ಕಿಯನ್ನು ಪುರವರ್ಗದ ಮೊಹಮ್ಮದ ಸಮೀರ್ ಹಾಗೂ ಹನುಮಾನ್ ನಗರದ ರಾಮಚಂದ್ರ ನಾಯ್ಕ ಎಂಬುವವರಿಗೆ ತಲುಪಿಸಲು ಹೊರಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಧಿಕಾರಿಗಳು ಸುಮಾರು 39,100 ರೂ. ಮೌಲ್ಯದ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ. ಆಹಾರ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.