ಅಪಘಾತದಲ್ಲಿ ಸಾಕು ಪ್ರಾಣಿ ಸಾವು ಐಪಿಸಿ ಅಪರಾಧವಲ್ಲ: ಹೈಕೋರ್ಟ್‌

ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಜೀವ ಹಾನಿ ಮಾಡಿದ ಚಾಲಕನಿಗೆ ಶಿಕ್ಷೆ ವಿಧಿಸುವ ‘ಭಾರತೀಯ ದಂಡ ಸಂಹಿತೆ’ ಹಾಗೂ ಗಾಯಗೊಂಡವರ ನೆರವಿಗೆ ಧಾವಿಸಬೇಕು ಎಂಬ ‘ಮೋಟಾರು ವಾಹನಗಳ ಕಾಯ್ದೆ’ ಸಾಕು ಪ್ರಾಣಿಗಳಿಗೆ ಅನ್ವಯವಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್‌ ತೀರ್ಪು ನೀಡಿದೆ. 

Driver cant be punished for death of petitioners pet dog as there is no enmity says Karnataka High Court gvd

ಬೆಂಗಳೂರು (ಅ.30): ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಜೀವ ಹಾನಿ ಮಾಡಿದ ಚಾಲಕನಿಗೆ ಶಿಕ್ಷೆ ವಿಧಿಸುವ ‘ಭಾರತೀಯ ದಂಡ ಸಂಹಿತೆ’ ಹಾಗೂ ಗಾಯಗೊಂಡವರ ನೆರವಿಗೆ ಧಾವಿಸಬೇಕು ಎಂಬ ‘ಮೋಟಾರು ವಾಹನಗಳ ಕಾಯ್ದೆ’ ಸಾಕು ಪ್ರಾಣಿಗಳಿಗೆ ಅನ್ವಯವಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್‌ ತೀರ್ಪು ನೀಡಿದೆ. ಅತಿ ವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯ ಮೂಲಕ ಜೀವಕ್ಕೆ ಅಪಾಯ ಒಡ್ಡಿದ ಚಾಲಕನಿಗೆ ಆರು ತಿಂಗಳವರೆಗೆ ಶಿಕ್ಷೆ ವಿಧಿಸಬಲ್ಲ ಭಾರತೀಯ ದಂಡ ಸಂಹಿತೆ(ಐಪಿಸಿ) 279 ಸೆಕ್ಷನ್‌ ಮಾನವರಿಗೆ ತೊಂದರೆಯಾದರೆ ಮಾತ್ರ ಅನ್ವಯಿಸುತ್ತದೆ. ರಸ್ತೆ ಅಪಘಾತಗಳಲ್ಲಿ ಸಾಕು ನಾಯಿಗಳಿಗೆ ಗಾಯವಾದರೆ ಈ ಸೆಕ್ಷನ್‌ನಡಿ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. 

ಅದೇ ರೀತಿ ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಬೇಕು ಎಂಬ ಮೋಟಾರು ವಾಹನಗಳ ಕಾಯ್ದೆಯ 134 ಸೆಕ್ಷನ್‌ ಕೂಡ ಸಾಕು ಪ್ರಾಣಿಗಳ ಅಪಘಾತಕ್ಕೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ. 2018ರಲ್ಲಿ ವಾಹನ ಚಾಲನೆ ವೇಳೆ ನಾಯಿಗೆ ಡಿಕ್ಕಿ ಹೊಡೆದು ಅದರ ಸಾವಿಗೆ ಕಾರಣವಾದ ಪ್ರಕರಣ ರದ್ದತಿ ಕೋರಿ ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿ ಜಿ. ಪ್ರತಾಪ್‌ಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್‌ ಗೋವಿಂದರಾಜ್‌ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

PSI Recruitment Scam: ಇಡಿ ಮುಂದೆ ಹೇಳಿಕೆ ನೀಡುವ ಆದೇಶ ರದ್ದು

ಐಪಿಸಿ ಸೆಕ್ಷನ್‌ 279 ಮಾನವನಿಗೆ ಮಾತ್ರ ಸಂಬಂಧಿಸಿದೆ. ಪ್ರಾಣಿಗಳಿಗೆ ತೊಂದರೆಯಾದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಐಪಿಸಿಯಲ್ಲಿ ವ್ಯಕ್ತಿ ಎಂಬ ಪದದ ಬದಲಿಗೆ ಪ್ರಾಣಿ ಎಂದು ಅರ್ಥೈಸಿದರೆ ಆಗ ಸಾಕು ಪ್ರಾಣಿಗಳು ಸಾವನ್ನಪ್ಪಿದಾಗ ಸೆಕ್ಷನ್‌ 302 (ಕೊಲೆ) ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ವಿವರಿಸಿದ್ದಾರೆ. ಅಲ್ಲದೆ, ಐಪಿಸಿ 428(10 ರು.ಗಳಿಗೆ ಮೇಲ್ಪಟ್ಟಮೌಲ್ಯದ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ವಿಷ ಹಾಕಿ ಕೊಲ್ಲುವುದು ಇಲ್ಲವೇ ಅಂಗವೈಕಲ್ಯವನ್ನುಂಟು ಮಾಡುವುದು) ಮತ್ತು ಸೆಕ್ಷನ್‌ 429(50 ರು. ಮೌಲ್ಯಕ್ಕೂ ಹೆಚ್ಚಿನ ಬೆಲೆಯ ಪ್ರಾಣಿಗಳನ್ನು ಉದ್ದೇಶಪೂರ್ವಕವಾಗಿ ವಿಷ ಹಾಕಿ ಕೊಲ್ಲುವುದು ಹಾಗೂ ಅಂಗವೈಕಲ್ಯವನ್ನುಂಟು ಮಾಡುವುದು) ಅಡಿ ದೂರು ದಾಖಲಿಸಲಾಗಿದೆ. 

ಆದರೆ, ಈ ಪ್ರಕರಣ ಆಕಸ್ಮಿಕವಾಗಿದ್ದು, ಉದ್ದೇಶಪೂರ್ವಕವಾಗಿ ನಡೆದಿರುವುದಲ್ಲ. ಆದ್ದರಿಂದ ಈ ಎರಡೂ ಸೆಕ್ಷನ್‌ ಅಡಿ ಕ್ರಮಕ್ಕೆ ಅವಕಾಶವಿಲ್ಲ. ಹೀಗಾಗಿ ಸಾಕು ಪ್ರಾಣಿಗಳಿಗೆ ಅಪಘಾತದಲ್ಲಿ ಉಂಟಾಗುವ ಗಾಯ ಅಥವಾ ಸಾವು ಸಂಭವಿಸಿದಲ್ಲಿ ಐಪಿಸಿ 279, 428 ಮತ್ತು 429 ರಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮೋಟಾರು ವಾಹನ ಕಾಯಿದೆ ಸೆಕ್ಷನ್‌ 134(ಎ) ಮತ್ತು (ಬಿ) ಪ್ರಕಾರ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡದೆ ರಸ್ತೆ ಬದಿಯಲ್ಲಿ ಬಿಟ್ಟುಹೋಗುವುದು ಅಪರಾಧ. ಆದರೆ, ಈ ಪ್ರಕರಣದಲ್ಲಿ ಪ್ರಾಣಿಗೆ ತೊಂದರೆಯಾಗಿರುವುದರಿಂದ ಈ ಸೆಕ್ಷನ್‌ಗಳ ಅಡಿಯಲ್ಲಿಯೂ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಅರ್ಜಿ ಪುರಸ್ಕರಿಸಿ ಪ್ರಕರಣವನ್ನು ರದ್ದು ಮಾಡಿದೆ.

ಪಾನಮತ್ತ ಪತ್ನಿಯ ಕೊಂದ ಪತಿ ಬಿಡುಗಡೆಗೆ ಹೈಕೋರ್ಟ್‌ ಆದೇಶ

ಏನಿದು ಪ್ರಕರಣ?: 2018ರ ಫೆಬ್ರವರಿ 24ರಂದು ಬೆಳಗ್ಗೆ ತನ್ನ ತಾಯಿ ಎರಡು ಸಾಕು ನಾಯಿಗಳೊಂದಿಗೆ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ವಾಹನವೊಂದು ಒಂದು ನಾಯಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅದು ಮೃತಪಟ್ಟಿತು. ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುರುಬರಹಳ್ಳಿಯ ನಿವಾಸಿಯಾಗಿರುವ ದಿಲ್ರಾಜ್‌ ರಾಖೇಜಾ ಎಂಬುವರು ವಿಜಯನಗರ ಠಾಣೆಗೆ ದೂರು ದಾಖಲಿಸಿದ್ದರು. ಪೊಲೀಸರು ವಾಹನ ಚಾಲಕ ಪ್ರತಾಪ್‌ (ಅರ್ಜಿದಾರ) ವಿರುದ್ಧ ಮೋಟಾರು ವಾಹನ ಕಾಯಿದೆ 134(ಎ), (ಬಿ) ಮತ್ತು 187 ಹಾಗೂ ಐಪಿಸಿ 279, 428, 429 ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ನಗರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣ ರದ್ದು ಕೋರಿ ಪ್ರತಾಪ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios