Asianet Suvarna News Asianet Suvarna News

Dharmasthala, ವೀರೇಂದ್ರ ಬೆಂಬಲಿಸಿ ಭಕ್ತರಿಂದ ಬೃಹತ್‌ ರ್ಯಾಲಿ: ಯಾವುದೇ ತನಿಖೆಗೆ ಸಿದ್ಧ ಎಂದ ಹೆಗ್ಗಡೆ

ಕ್ಷೇತ್ರದ ಅವಹೇಳನ ಹಾಗೂ ನಿಂದನೆ ಖಂಡಿಸಿ ಧರ್ಮಸ್ಥಳದಲ್ಲಿ ಭಕ್ತರು ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳಿಂದ ಭಾನುವಾರ ಬೃಹತ್‌ ಧರ್ಮ ಸಂರಕ್ಷಣೆ ಯಾತ್ರೆ ನಡೆಯಿತು. 

dr veerendra heggade reacts we are ready to face investigation in soujanya case gvd
Author
First Published Oct 30, 2023, 4:23 AM IST | Last Updated Oct 30, 2023, 4:23 AM IST

ಬೆಳ್ತಂಗಡಿ (ಅ.30): ಕ್ಷೇತ್ರದ ಅವಹೇಳನ ಹಾಗೂ ನಿಂದನೆ ಖಂಡಿಸಿ ಧರ್ಮಸ್ಥಳದಲ್ಲಿ ಭಕ್ತರು ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳಿಂದ ಭಾನುವಾರ ಬೃಹತ್‌ ಧರ್ಮ ಸಂರಕ್ಷಣೆ ಯಾತ್ರೆ ನಡೆಯಿತು. ಕೊಲ್ಲೂರು ಹಾಗೂ ಮಂಗಳೂರಿನಿಂದ ಧರ್ಮಸಂರಕ್ಷಣ ರಥಗಳು ಭವ್ಯ ಮೆರವಣಿಗೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದವು. ಜೊತೆಗೆ, ಉಜಿರೆಯಿಂದ 50 ಸಾವಿರಕ್ಕೂ ಹೆಚ್ಚು ಭಕ್ತರು ಹಾಗೂ ಅಭಿಮಾನಿಗಳು ಪಾದಯಾತ್ರೆಯಲ್ಲಿ ಬಂದರು.

ಬಳಿಕ ದೇವಸ್ಥಾನದ ಎದುರು ಆಯೋಜಿಸಿದ್ದ ಧರ್ಮಸಭೆಯಲ್ಲಿ ಹಲವು ಮಠಾಧೀಶರ ಸಮ್ಮುಖದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ‘ಧರ್ಮಸ್ಥಳ ಬಸದಿಯಲ್ಲಿರುವ ಮೂಲ ಸ್ವಾಮಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮತ್ತು ದೇವಸ್ಥಾನದ ಮುಖ್ಯ ಆರಾಧ್ಯ ದೇವರಾದ ಶ್ರೀ ಮಂಜುನಾಥ ಸ್ವಾಮಿ ಶಾಂತಿ, ತಾಳ್ಮೆಯ ಸಾಕಾರ ಮೂರ್ತಿಗಳಾಗಿದ್ದು, ಅವರು ಶಾಂತವಾಗಿರುವ ಹಿನ್ನೆಲೆಯಲ್ಲಿ ನಾನು ಕೂಡ ಶಾಂತನಾಗಿದ್ದೇನೆ’ ಎಂದು ಹೇಳಿದರು.

50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ

‘ನಿಮ್ಮ ಕಾರ್ಯಕ್ರಮದಲ್ಲಿ ನಿಮ್ಮ ಕೋರಿಕೆ ಮೇಲೆ ಬಂದಿದ್ದೇನೆ. ಕ್ಷೇತ್ರದ ವಿಚಾರವಾಗಿ ಧರ್ಮ ರಕ್ಷಕರ ತಂಡ ಉತ್ತಮವಾಗಿ ಕೆಲಸ ಮಾಡಿದೆ. ದುಷ್ಟ ಶಕ್ತಿ ವಿಜೃಂಭಿಸುತ್ತಿವೆ, ಇಂಥ ಪರಿಸ್ಥಿತಿಯಲ್ಲಿ ನೀವೇ ಶಿಷ್ಟರ ರಕ್ಷಣೆ ಮಾಡಬೇಕು’ ಎಂದರು. ನಮ್ಮ ಯಾವುದೇ ಹಿಂದೂ ಕ್ಷೇತ್ರಗಳಿಗೂ ಈ ರೀತಿಯ ಹಾನಿಗಳು ಆಗಬಾರದು. ನಮಗೆ ಯಾವುದೇ ಭಯವಿಲ್ಲ. ನನಗೆ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಅಭಯವಿದೆ ಎಂದ ಡಾ.ಹೆಗ್ಗಡೆ, ತಿಳಿದು ತಪ್ಪು ಮಾಡಿದರೆ ಮಾತ್ರ ದೇವರು ಶಿಕ್ಷೆ ನೀಡುತ್ತಾನೆ. ಧರ್ಮ, ದೇವತೆಗಳಿಗೆ ಉತ್ತರ ಕೊಡಬೇಕಾದ ನೈತಿಕ ಬಾಧ್ಯತೆ ನನಗಿದೆ, ನಾನು ತಪ್ಪು ಮಾಡಿಲ್ಲ, ಸತ್ಯ ಮತ್ತು ನ್ಯಾಯದಲ್ಲಿದ್ದೇನೆ. ಯಾವ ತನಿಖೆ ಬೇಕಾದರೂ ಮಾಡಿ, ನಾನು ಅದನ್ನು ಎದುರಿಸಲು ಸಿದ್ಧ. ನಾನು ನ್ಯಾಯಕ್ಕೆ ತಲೆ ಬಾಗುತ್ತೇನೆ ಎಂದರು.

ಸಭೆ ಆರಂಭದಲ್ಲಿ ಡಾ.ಹೆಗ್ಗಡೆ ವೇದಿಕೆ ಮಧ್ಯದಲ್ಲಿರುವ ಧರ್ಮಪೀಠದಲ್ಲಿ ಆಸೀನರಾದರು. ಎಲ್ಲ ಸ್ವಾಮೀಜಿಯವರು ಹಣ್ಣು-ಹಂಪಲು, ತಾಂಬೂಲ, ಕಾಯಿ, ವೀಳ್ಯದೆಲೆ ಇರುವ ಹರಿವಾಣಕ್ಕೆ ಅಭಿಮಂತ್ರಿಸಿದ ಮಂತ್ರಾಕ್ಷತೆ ಹಾಕಿ ಶುಭ ಹಾರೈಸಿದರು. ಬಳಿಕ ಸಂಕಲ್ಪ ಪೀಠದಲ್ಲಿದ್ದ ಹರಿವಾಣವನ್ನು ಹೆಗ್ಗಡೆ ಅವರಿಗೆ ಹಸ್ತಾಂತರಿಸಲಾಯಿತು. ತರುವಾಯ ಸೇರಿದ ಸಭಾಸದರೆಲ್ಲರೂ ನಾವು ಸದಾ ಧರ್ಮದ ರಕ್ಷಣೆಗಾಗಿ ಧರ್ಮಸ್ಥಳದ ರಕ್ಷಣೆಗೆ ನಿಮ್ಮೊಂದಿಗಿದ್ದೇವೆ ಎಂದು ದೃಢಸಂಕಲ್ಪ ಮಾಡಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ, ಫಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಸೇರಿ 15 ಮಂದಿ ಮಠಾಧೀಶರು ವೇದಿಕೆಯಲ್ಲಿ ಹಾಜರಿದ್ದರು. ಸಂಸದ ನಳಿನ್‍ ಕುಮಾರ್ ಕಟೀಲ್, ಶಾಸಕ ಹರೀಶ್‍ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಹಿತ ಪ್ರಮುಖ ಮುಖಂಡರು ಪಾಲ್ಗೊಂಡರು.

ರೈತರ ಸಾಲ ಕೇಳಬೇಕು ಆದರೆ, ಒತ್ತಡ ಹಾಕುವಂತಿಲ್ಲ: ಸಚಿವ ಸಂತೋಷ್‌ ಲಾಡ್‌

ಇದಕ್ಕೂ ಮುನ್ನ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಕೊಲ್ಲೂರಿನಿಂದ ಹೊರಟ ಧರ್ಮಸಂರಕ್ಷಣ ರಥ ಮತ್ತು ಮಂಗಳೂರಿನಿಂದ ಕದ್ರಿ ದೇವಸ್ಥಾನದಿಂದ ಹೊರಟ ಧರ್ಮಸಂರಕ್ಷಣ ರಥ ಆಗಮಿಸಿದಾಗ ಉಭಯ ರಥಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉಜಿರೆಯಿಂದ ಧರ್ಮಸ್ಥಳಕ್ಕೆ ‘ಹರಹರ ಮಹಾದೇವ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Latest Videos
Follow Us:
Download App:
  • android
  • ios