ರಾಜ್ಯ ಸಂಪುಟ ಪುನಾರಚನೆಯ ಚರ್ಚೆಯ ನಡುವೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಿದರೂ ನಿಭಾಯಿಸುವ ಸಾಮರ್ಥ್ಯವಿದೆ ಎಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಚರ್ಚೆಯ ಮಧ್ಯೆ ಹೊಸ ಕುತೂಹಲವನ್ನು ಸೃಷ್ಟಿಸಿದೆ.
ಬೆಂಗಳೂರು (ಮೇ 23): ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಸದ್ದು ಜೋರಾಗತೊಡಗಿದೆ. ಒಂದೆಡೆ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದರೆ, ಇನ್ನೊಂದೆಡೆ ಹಿರಿಯ ಸಚಿವರನ್ನು ಕೈಬಿಡಲಾಗುತ್ತದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. 'ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಶಕ್ತಿ ಇದೆ, ಸಿಎಂ ಸ್ಥಾನ ಕೊಟ್ಟರೂ ನಿಭಾಯಿಸುವೆ' ಎಂದು ಹೇಳುವ ಮೂಲಕ ತಮ್ಮ ಆಕಾಂಕ್ಷೆಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

ಸಂಪುಟ ಪುನಾರಚನೆ: ಶಾಸಕರ ಬೇಡಿಕೆ ನ್ಯಾಯಯುತ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, ಸಂಪುಟ ಪುನಾರಚನೆಗೆ ಶಾಸಕರು ಒತ್ತಾಯ ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. 'ಸಚಿವರಾಗಲು ನಮ್ಮ ಶಾಸಕರಿಗೂ ಸಾಮರ್ಥ್ಯ ಇದೆ. ಅವರು ಕೇಳುವುದು ಸಹಜ. ಆದರೆ, ಸಂವಿಧಾನದ ಪ್ರಕಾರ ಒಟ್ಟು ಶಾಸಕರ ಸಂಖ್ಯೆಯ 15% ರಷ್ಟು ಮಾತ್ರ ಸಚಿವರನ್ನಾಗಿ ಮಾಡಲು ಅವಕಾಶವಿದೆ. ಹೀಗಾಗಿ ಸಂಖ್ಯೆಗಳು ಸೀಮಿತವಾಗಿರುತ್ತವೆ. ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ' ಎಂದು ಸ್ಪಷ್ಟಪಡಿಸಿದರು.
ಹಿರಿಯ ಸಚಿವರನ್ನು ಕೈಬಿಡುವ ವಿಚಾರ ಹೈಕಮಾಂಡ್ ಅಂಗಳಕ್ಕೆ
ಕೆಲ ಹಿರಿಯ ಮಂತ್ರಿಗಳನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ವದಂತಿಗಳ ಬಗ್ಗೆ ಉತ್ತರಿಸಿದ ಅವರು, 'ಇದು ನಮ್ಮ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ. ಸದ್ಯಕ್ಕೆ ನಡೆಯುತ್ತಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಒಂದು ರೊಟೀನ್ ಪ್ರಕ್ರಿಯೆ. ಅದಕ್ಕೆ ಅಭ್ಯರ್ಥಿಗಳ ಆಯ್ಕೆಯನ್ನು ಅಧ್ಯಕ್ಷರು ಮತ್ತು ಸಿಎಂ ಮಾಡಲಿದ್ದಾರೆ' ಎಂದರು.
ಗೃಹ ಇಲಾಖೆ ಬಗ್ಗೆ ಅಸಮಾಧಾನವಿಲ್ಲ
ಖಾತೆ ಬದಲಾವಣೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, 'ನಾನು ಈವರೆಗೂ ಒಟ್ಟು ಎಂಟು ವರ್ಷಗಳ ಕಾಲ ಗೃಹ ಇಲಾಖೆಯನ್ನು ನಿಭಾಯಿಸಿದ್ದೇನೆ. ನನಗೆ ನನ್ನ ಇಲಾಖೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಗೃಹ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಡೆಸಿಕೊಂಡು ಬಂದಿದ್ದೇನೆ. ಖಾತೆ ಬದಲಾವಣೆ ಬೇಕೆಂದು ನಾನು ಯಾರನ್ನೂ ಕೇಳಿಲ್ಲ' ಎಂದು ತಿಳಿಸಿದರು.
ಸಿಎಂ ಸ್ಥಾನ ಕೊಟ್ಟರೂ ಸೈ: ಪರಮೇಶ್ವರ್ ಪಂಚ್
ಇದೇ ವೇಳೆ ಸುದ್ದಿಗಾರರು ನಿಮಗೆ ಮುಖ್ಯಮಂತ್ರಿ ಸ್ಥಾನ ನೀಡಿದರೂ ನಿಭಾಯಿಸುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ ಪರಮೇಶ್ವರ್, 'ಖಂಡಿತವಾಗಿಯೂ ನಿಭಾಯಿಸುತ್ತೇನೆ. ಗೃಹ ಇಲಾಖೆಯ ಜೊತೆಗೆ ಬೇರೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವ ಸಾಮರ್ಥ್ಯ ನನಗಿದೆ. ನನಗೆ ಯಾವುದೇ ಬೇಸರವಿಲ್ಲ, ಸವಾಲುಗಳನ್ನು ಸ್ವೀಕರಿಸಲು ನಾನು ಸದಾ ಸಿದ್ಧ' ಎಂದು ಹೇಳುವ ಮೂಲಕ ರಾಜಕೀಯ ಆಪ್ತ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಚರ್ಚೆಗಳ ಮಧ್ಯೆಯೇ, ಹಿರಿಯ ನಾಯಕ ಪರಮೇಶ್ವರ್ ಅವರ ಈ 'ಸಾಮರ್ಥ್ಯ'ದ ಹೇಳಿಕೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.


