ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತಮಿಳುನಾಡಿನ ನಂತರ, ಕರ್ನಾಟಕ ರಾಜಕೀಯಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಬೆಂಗಳೂರು ಜಿಬಿಎ ಚುನಾವಣೆಯಲ್ಲಿ, ತಮಿಳು ಮತದಾರರು ಹೆಚ್ಚಿರುವ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ವಿಜಯ್ ಯೋಜನೆ ರೂಪಿಸಿದ್ದಾರೆ.
ಬೆಂಗಳೂರು (ಮೇ 23): ತಮಿಳುನಾಡು ರಾಜಕೀಯದಲ್ಲಿ ಹೊಸ ಮನ್ವಂತರ ಬರೆದು, ಅಧಿಕಾರದ ಗದ್ದುಗೆಯತ್ತ ದಾಪುಗಾಲು ಹಾಕುತ್ತಿರುವ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ಈಗ ಕರ್ನಾಟಕಕ್ಕೂ ಕಾಲಿಡಲು ಸನ್ನದ್ಧವಾಗುತ್ತಿದೆ. ತಮಿಳುನಾಡು ಮತ್ತು ಪಾಂಡಿಚೇರಿ ಬಳಿಕ ಈಗ ಬೆಂಗಳೂರಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ವಿಜಯ್ ಸ್ಕೆಚ್ ಹಾಕಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಮಹಾನಗರದಲ್ಲಿ ಟಿವಿಕೆ ವಿಶಲ್?
ಬೆಂಗಳೂರಿನ ನೂತನ 'ಗ್ರೇಟರ್ ಬೆಂಗಳೂರು ಅಥಾರಿಟಿ' (GBA) ಚುನಾವಣೆ ಘೋಷಣೆಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಟಿವಿಕೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರಿನ ಒಟ್ಟು 369 ವಾರ್ಡ್‌ಗಳ ಪೈಕಿ ಕನಿಷ್ಠ 50 ವಾರ್ಡ್‌ಗಳ ಮೇಲೆ ಹಿಡಿತ ಸಾಧಿಸುವುದು ವಿಜಯ್ ಅಭಿಮಾನಿಗಳ ಮತ್ತು ಪಕ್ಷದ ತಂತ್ರಗಾರಿಕೆಯಾಗಿದೆ.
ತಮಿಳು ಮತದಾರರೇ ಟಿವಿಕೆ ಟಾರ್ಗೆಟ್:
ಬೆಂಗಳೂರಿನ ಹಲವು ಭಾಗಗಳಲ್ಲಿ ತಮಿಳು ಭಾಷಿಕ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ವಿಶೇಷವಾಗಿ ಶ್ರೀರಾಮಪುರ, ಹಲಸೂರು, ಶಿವಾಜಿನಗರ, ವಿವೇಕ್ ನಗರ, ಈಜಿಪುರ, ಮಡಿವಾಳ ಮತ್ತು ಶಾಂತಿನಗರದಂತಹ ವಾರ್ಡ್‌ಗಳಲ್ಲಿ ತಮಿಳು ಮತದಾರರ ಸಂಖ್ಯೆ ಹೆಚ್ಚಿದೆ. ಈ ವಾರ್ಡ್‌ಗಳನ್ನೇ ಗುರಿಯಾಗಿಸಿಕೊಂಡು ಟಿವಿಕೆ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಈಗಾಗಲೇ ಈ ಭಾಗದ ವಿಜಯ್ ಅಭಿಮಾನಿಗಳು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗುವುದನ್ನೇ ಕಾಯುತ್ತಿದ್ದಾರೆ.
ಅಭಿಮಾನಿಗಳಿಗೆ ಟಿಕೆಟ್ ಭಾಗ್ಯ?
ಬೆಂಗಳೂರಿನಲ್ಲಿ ದಳಪತಿ ವಿಜಯ್‌ಗೆ ಕೇವಲ ಸಿನಿಮಾ ಅಭಿಮಾನಿಗಳಲ್ಲದೆ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಅಭಿಮಾನಿ ಪಡೆಯೇ ಇದೆ. ವಿಜಯ್ ಅವರ ಸೂಚನೆಯಂತೆ ಈಗಾಗಲೇ ಹಲವು ಅಭಿಮಾನಿ ಸಂಘಗಳು ಜನಸೇವೆಯಲ್ಲಿ ತೊಡಗಿವೆ. ಈ ಅಭಿಮಾನಿಗಳನ್ನೇ ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಡಿ, ಬೆಂಗಳೂರಿನಲ್ಲಿ ಪ್ರಾದೇಶಿಕ ಪಕ್ಷದ ಅಸ್ತಿತ್ವ ಕಂಡುಕೊಳ್ಳಲು ವಿಜಯ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಚಾರಕ್ಕೆ ಬರಲಿದ್ದಾರಾ ದಳಪತಿ ವಿಜಯ್?
ಜಿಬಿಎ ಚುನಾವಣೆ ಘೋಷಣೆಯಾದರೆ, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ದಳಪತಿ ವಿಜಯ್ ಸ್ವತಃ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ತಮಿಳುನಾಡು ರಾಜಕೀಯದಲ್ಲಿ ಮುಖ್ಯಮಂತ್ರಿಯಾಗುವ ಗುರಿ ಹೊಂದಿರುವ ವಿಜಯ್, ಬೆಂಗಳೂರಿನ ತಮಿಳು ಮತದಾರರ ಒಲವು ಗಳಿಸುವ ಮೂಲಕ ಕರ್ನಾಟಕದಲ್ಲೂ ತನ್ನ ಪಕ್ಷದ ಪ್ರಭಾವ ಬೀರಲು ಬಯಸಿದ್ದಾರೆ. ಮೊದಲ ಬಾರಿಗೆ ತಮಿಳುನಾಡಿನ ಪ್ರಾದೇಶಿಕ ಪಕ್ಷವೊಂದು ಬೆಂಗಳೂರಿನ ಮಹಾನಗರ ಚುನಾವಣೆಯಲ್ಲಿ ನೇರವಾಗಿ ಸ್ಪರ್ಧಿಸುತ್ತಿರುವುದು ರಾಷ್ಟ್ರೀಯ ಮತ್ತು ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗೆ ತಲೆನೋವಾಗಿ ಪರಿಣಮಿಸಬಹುದು.
ಒಟ್ಟಾರೆಯಾಗಿ, ತಮಿಳುನಾಡಿನ ರಾಜಕೀಯ ಸಂಚಲನ ಈಗ ಬೆಂಗಳೂರಿನ ಬೀದಿಗಳಲ್ಲೂ ಸೌಂಡ್ ಮಾಡಲು ಸಜ್ಜಾಗಿದ್ದು, 'ದಳಪತಿ' ವಿಜಯ್ ಅವರ ಎಂಟ್ರಿ ಬೆಂಗಳೂರು ರಾಜಕೀಯದ ಲೆಕ್ಕಾಚಾರಗಳನ್ನು ಹೇಗೆ ಬದಲಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.


