ತುಮಕೂರಿಗೆ ಎಲ್ಲ ದಿಕ್ಕುಗಳಿಂದ ಭೇಟಿ ನೀಡುವ ಜನರನ್ನು ಮೊದಲು ಸ್ವಾಗತಿಸುವುದು ಶಾಲಾ ಕಾಲೇಜುಗಳು. ಶ್ರೀ ಸಿದ್ಧಗಂಗಾ ಸಂಸ್ಥೆ ಮತ್ತು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾಲೇಜುಗಳು ಜನರಿಗೆ ಸ್ವಾಗತ ಕೋರುತ್ತವೆ.

ಈ ಎರಡು ಶಿಕ್ಷಣ ಸಂಸ್ಥೆಗಳ ಮೊದಲ ಆದ್ಯತೆ ಗ್ರಾಮೀಣ ಮತ್ತು ಬಡವರ ಮನೆಗಳ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದು. ಈ ಮಹತ್ವವಾದ ಧ್ಯೇಯ ಮತ್ತು ಗುರಿಯನ್ನು ಮುಟ್ಟುವಲ್ಲಿ ಉಭಯ ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಿವೆ. ತುಮಕೂರು ಜಿಲ್ಲೆಯ ಹಳ್ಳಿಗಾಡಿನ ಮಕ್ಕಳನ್ನು ಮತ್ತು ಇಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನ ಹಾಗೂ ಹುದ್ದೆಗಳನ್ನು ಪಡೆದು ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳನ್ನು ನೋಡಿದಾಗ ಈ ಮಾತಿನ ಸತ್ಯ ಅರಿವಾಗುತ್ತದೆ.

ಸಿದ್ಧಗಂಗಾ ಕ್ಷೇತ್ರವೆಂದರೆ ಅದೊಂದು ಸಣ್ಣ ಕರ್ನಾಟಕ

ಈ ಎರಡು ಸಂಸ್ಥೆಗಳು ಕೇವಲ ತುಮಕೂರು ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಅಕ್ಕಪಕ್ಕದ ಮತ್ತು ದೂರದ ಜಿಲ್ಲೆಗಳಲ್ಲೂ ಶಾಲಾ ಕಾಲೇಜುಗಳನ್ನು ಆರಂಭಿಸಿವೆ. ಚಿತ್ರಕಲೆಯ ಶಿಕ್ಷಕರಾಗಿದ್ದ ನಮ್ಮ ತಂದೆ ಎಚ್‌.ಎಂ. ಗಂಗಾಧರಯ್ಯ ಅವರು ನೆಲೆಸಿದ್ದ ಊರು ತುಮಕೂರಿನ ಗೊಲ್ಲಹಳ್ಳಿ. ಐವತ್ತರ ದಶಕದಲ್ಲಿ ಭೂದಾನ ಚಳವಳಿ ಆರಂಭಿಸಿದ್ದ ವಿನೋಭಾ ಭಾವೆಯವರು ಒಂದು ರಾತ್ರಿ ನಮ್ಮ ತಂದೆಯ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ‘ನೀವು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ’ ಎಂದು ವಿನೋಭಾ ಭಾವೆ ನಮ್ಮ ತಂದೆ ಗಂಗಾಧರಯ್ಯ ಅವರಿಗೆ ಸಲಹೆ ನೀಡಿದ್ದರು.

ಸಿದ್ಧಗಂಗಾ ಮಠದ ಅಪಾರ ಆದಾಯ ಮೂಲ ಯಾವುದು..?

ಈ ಸಲಹೆ ನಮ್ಮ ತಂದೆಯನ್ನು ನೂರಾರು ಬಾರಿ ಯೋಚನೆ ಮಾಡುವಂತೆ ಮಾಡಿತ್ತು. ಸಿದ್ಧಗಂಗಾ ಮಠ ಮತ್ತು ಅಲ್ಲಿನ ಶಿಕ್ಷಣ ಸಂಸ್ಥೆ ಹಲವು ಶಾಲಾ ಕಾಲೇಜುಗಳನ್ನು ನಡೆಸುತ್ತಿರುವಾಗ ನಾನು ಮಾಡುವುದಾದರೂ ಏನು ಎಂದುಕೊಂಡರಂತೆ. ಒಂದು ದಿನ ಈ ಪ್ರಯತ್ನಕ್ಕೆ ಕೈಹಾಕಿ ಅಳುಕುತ್ತಲೇ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬಳಿ ಹೋಗಿ ವಿನೋಭಾ ಭಾವೆಯವರ ಸಲಹೆ ಮತ್ತು ತಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯವನ್ನು ಮುಂದಿಟ್ಟರಂತೆ. ಆಗ ಸ್ವಾಮೀಜಿ ಅವರು ‘ಗಂಗಾಧರಯ್ಯನವರೆ ನಿಮ್ಮ ಉದ್ದೇಶ ಸರಿಯಾಗಿದೆ. ನೀವು ಶಾಲೆಗಳನ್ನು ಆರಂಭಿಸಿ. ನಮ್ಮ ಆಶೀರ್ವಾದ ಖಂಡಿತಾ ಇದೆ’ ಎಂದರಂತೆ.

ಸಿದ್ಧಗಂಗಾ ಮಠದ ವೈಭವ ನೋಡಲು ಅರ್ಧ ದಿನವೇ ಬೇಕು!

ಸ್ವಾಮೀಜಿಗಳ ಈ ಮಾತು ನಮ್ಮ ತಂದೆಯನ್ನು ಉತ್ತೇಜಿಸಿತ್ತು. 1956ರಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮತ್ತು ಗೊಲ್ಲಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲು ತೀರ್ಮಾನಿಸಿದ್ದರು. ಆ ಶಿಕ್ಷಣ ಸಂಸ್ಥೆ ಮತ್ತು ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶಿವಕುಮಾರ ಸ್ವಾಮೀಜಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ನಡೆಸುವ ಎಂಜಿನಿಯರಿಂಗ್‌ ಕಾಲೇಜು, ವೈದ್ಯಕೀಯ ಕಾಲೇಜು ಹೀಗೆ ಯಾವುದೇ ಕಾಲೇಜುಗಳನ್ನು ಆರಂಭಿಸಿದ್ದರೂ ಅವುಗಳಿಗೆಲ್ಲ ಸ್ವಾಮೀಜಿಯವರೇ ಅಡಿಗಲ್ಲು ಹಾಕಿದ್ದರು. ಸ್ವಾಮೀಜಿಯವರ ಆಶೀರ್ವಾದದಿಂದಲೇ ನಮ್ಮ ಶಿಕ್ಷಣ ಸಂಸ್ಥೆ ಇಂದು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗಿದೆ. ಈ ವಿಶ್ವಾಸ ನಮ್ಮ ತಂದೆ ದಿವಂಗತ ಗಂಗಾಧರಯ್ಯ ಮತ್ತು ಸೋದರ ದಿವಂಗತ ಡಾ.ಜಿ.ಶಿವಪ್ರಸಾದ್‌ ಮತ್ತು ನನ್ನಲ್ಲಿ ಉಳಿದಿದೆ.

ಬಟ್ಟೆ ಹರಿದಿದ್ದರೂ ಪರವಾಗಿಲ್ಲ, ಕೈಲೊಂದು ಪುಸ್ತಕವಿರಲಿ: ಶಿವಕುಮಾರ ಸ್ವಾಮೀಜಿ

ಡಾ.ಶಿವಕುಮಾರ ಸ್ವಾಮೀಜಿ ಅವರ ಮೇಲಿನ ಅಪಾರವಾದ ವಿಶ್ವಾಸದಿಂದಾಗಿ ಮಠದಲ್ಲಿ ಅತಿಥಿ ಗೃಹವೊಂದನ್ನು ಕಟ್ಟಿಸಿಕೊಟ್ಟು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ತನ್ನ ಋುಣವನ್ನು ತೀರಿಸಿದೆ. ನಮ್ಮ ತಂದೆಯವರ ಜನ್ಮದಿನಾಚರಣೆ ಅಥವಾ ಅವರ ಪುಣ್ಯಸ್ಮರಣೆಯ ಸಮಾರಂಭಗಳು ಡಾ.ಶಿವಕುಮಾರ ಸ್ವಾಮೀಜಿ ಅವರ ಉಪಸ್ಥಿತಿ ಇಲ್ಲದೆ ನೆರವೇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಕುಟುಂಬವು ಸಿದ್ಧಗಂಗಾ ಮಠಕ್ಕೆ ಶ್ರದ್ಧೆಯಿಂದ ನಡೆದುಕೊಂಡಿದೆ.

ನಮ್ಮ ತಂದೆ 90ರ ದಶಕದ ಆರಂಭದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದ್ದರು. ಅದಕ್ಕೆ ಸ್ವಾಮೀಜಿ ಅವರ ಆಶೀರ್ವಾದವಿತ್ತು ಎಂದು ತಂದೆ ಪದೇ ಪದೇ ಸ್ಮರಿಸುತ್ತಿದ್ದರು. ಕೆಲ ಭಕ್ತರು ಸ್ವಾಮೀಜಿ ಬಳಿ ಬಂದು ‘ಬುದ್ಧಿಗಳೇ, ಮಠದ ವತಿಯಿಂದ ಒಂದು ವೈದ್ಯಕೀಯ ಕಾಲೇಜು ಆರಂಭಿಸಿ’ ಎಂದು ಮನವಿ ಮಾಡಿದಾಗೆಲ್ಲ ‘ಅದು ಬೇಡ. ಗಂಗಾಧರಯ್ಯನವರು ಈಗಾಗಲೇ ವೈದ್ಯಕೀಯ ಕಾಲೇಜು ಆರಂಭಿಸಿದ್ದಾರೆ. ಅವರ ಜೊತೆ ನಾವು ಪೈಪೋಟಿಗೆ ಇಳಿಯಬಾರದು. ಅವರ ಕಾಲೇಜಿನಿಂದ ನಮ್ಮ ಜಿಲ್ಲೆಯ ಜನರಿಗೇ ಸಹಾಯವಾಗುತ್ತಿದೆ’ ಎಂಬುದಾಗಿ ಸ್ವಾಮೀಜಿ ಹೇಳುತ್ತಿದ್ದರು. ಅದು ಅವರ ದೊಡ್ಡ ಮನಸ್ಸನ್ನು ಪ್ರತಿಬಿಂಬಿಸುತ್ತದೆ.

'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು

ನಮ್ಮ ತಂದೆ ಗಂಗಾಧರಯ್ಯ ಅವರ ನಿಧನದ ನಂತರವೂ ಅವರ ಮಕ್ಕಳಾದ ನಾವು ಡಾ.ಶಿವಕುಮಾರ ಸ್ವಾಮೀಜಿ ಮತ್ತು ಅವರ ಸಿದ್ಧಗಂಗಾ ಮಠಕ್ಕೆ ವಿಧೇಯರಾಗಿ ನಡೆದುಕೊಳ್ಳುತ್ತಿದೇವೆ. ಡಾ. ಶಿವಕುಮಾರ ಸ್ವಾಮೀಜಿ ಅವರು ಮನಸ್ಸು ಮಾಡಿದ್ದರೆ ಒಂದು ವೈದ್ಯಕೀಯ ಕಾಲೇಜು ಮಾಡುವುದು ಕಷ್ಟವೇನೂ ಆಗುತ್ತಿರಲಿಲ್ಲ. ರಾಜ್ಯದಲ್ಲಿ ಅಧಿಕಾರ ನಡೆಸಿದ ಯಾವುದೇ ಸರ್ಕಾರ ಅಥವಾ ಮುಖ್ಯಮಂತ್ರಿಯೂ ಅವರು ಏನೇ ಕೇಳಿದ್ದರೂ ನಮ್ರತೆಯಿಂದ ಅನುಮತಿ ನೀಡುತ್ತಿದ್ದರು. ಆದರೆ ನಮ್ಮ ತಂದೆ ಹಾಗೂ ಕುಟುಂಬಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಅವರು ಅಂತಹ ಯತ್ನಕ್ಕೆ ಕೈಹಾಕಲಿಲ್ಲ. ಅದು ಅವರ ದೊಡ್ಡ ಗುಣ. ತುಮಕೂರು ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟಛಾಪು ಬೆಳೆಸಿಕೊಂಡಿರುವ ಈ ಎರಡು ಶಿಕ್ಷಣ ಸಂಸ್ಥೆಗಳ ಬಾಂಧವ್ಯ ಅನುಕರಣೀಯ ಮತ್ತು ಆದರ್ಶ.

-ಡಾ. ಜಿ.ಪರಮೇಶ್ವರ