Asianet Suvarna News Asianet Suvarna News

ದೇಶಾದ್ಯಂತ  ದೀಪಾವಳಿ ಸಂಭ್ರಮ ಆದ್ರೆ ಈ ಏಳೂರಲ್ಲಿ ಮಾತ್ರ ಇಂದು ಹಬ್ಬದ ಸಡಗರ ಇಲ್ಲ! ಕಾರಣ ಇಲ್ಲಿದೆ

ಇಂದು ದೇಶಾದ್ಯಂತ ದೀಪ ಬೆಳಗಿಸಿ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತಿದೆ. ಆದ್ರೆ ಚಾಮರಾಜನಗರದ ಏಳು ಗ್ರಾಮಗಳಲ್ಲಿ ದೀಪಾವಳಿಯ ಸಡಗರ ಸಂಭ್ರಮ ಯಾವುದೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿದೆ.

Do you know why there is no Diwali celebration in 7 villages of Chamarajanagar rav
Author
First Published Nov 12, 2023, 7:21 PM IST

ವರದಿ - ಪುಟ್ಟರಾಜು.

ಚಾಮರಾಜನಗರ (ನ.12):  ಇಂದು ದೇಶಾದ್ಯಂತ ದೀಪ ಬೆಳಗಿಸಿ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತಿದೆ. ಆದ್ರೆ ಚಾಮರಾಜನಗರದ ಏಳು ಗ್ರಾಮಗಳಲ್ಲಿ ದೀಪಾವಳಿಯ ಸಡಗರ ಸಂಭ್ರಮ ಯಾವುದೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಮಂಗಳವಾರ ಹಬ್ಬ ಬಂದಿರುವುದು. ಹಾಗಾದ್ರೆ ಈ ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಯಾವಾಗ ಆಚರಿಸುತ್ತಾರೆ ಯಾಕೆ ಬುಧವಾರದ ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಹಬ್ಬ ಆಚರಿಸಲ್ಲ ಅಂತೀರಾ ಹಾಗಾದ್ರೆ ಮುಂದೆ ಓದಿ.  

ಹೌದು, ದೀಪದಿಂದ ದೀಪವನ್ನು ಹಚ್ಚುತ್ತಾ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿ ಮಾಡುವುದೇ ದೀಪಾವಳಿ ಹಬ್ಬ. ದೇಶಾದ್ಯಂತ ಸಂಭ್ರಮ,ಸಡಗರದಿಂದ ದೀಪಾವಳಿಯನ್ನ ಆಚರಿಸಲಾಗುತ್ತಿದೆ. ಆದ್ರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ಇಂದು ದೀಪಾವಳಿ ಹಬ್ಬವನ್ನ ಆಚರಿಸುತ್ತಿಲ್ಲ. ಇದಕ್ಕೆ ಕಾರಣ ದೀಪಾವಳಿಯ ಬಲಿ ಪಾಡ್ಯಮಿ ಮಂಗಳವಾರ  ಬಂದಿರುವುದು. ಈ ಮೇಲಿನ 7 ಗ್ರಾಮಗಳಲ್ಲಿ ಹಿಂದಿನ ಕಾಲದಿಂದಲೂ ದೀಪಾವಳಿಯ ಬಲಿ ಪಾಡ್ಯಮಿ ಬುಧವಾರ ಬಿಟ್ಟು ವಾರದ ಬೇರೆ ಯಾವುದೇ ದಿನಗಳಲ್ಲಿ ಬಂದರೂ ಆಚರಿಸುವುದಿಲ್ಲ. ಬದಲಾಗಿ ಹಬ್ಬವನ್ನ ಮುಂದಿನ  ಬುಧವಾರ ಆಚರಿಸುತ್ತಾರೆ. ಬುಧವಾರದಂದು ಹೊಸ ಬಟ್ಟೆ ತೊಟ್ಟು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಸುಗಳಿಗೆ ಎಣ್ಣೆ ಸ್ನಾನ ಮಾಡಿಸಿ ಮನೆಯಲ್ಲಿ ಸಿಹಿ ಊಟ ಮಾಡುತ್ತಾರೆ. ಕಳೆದ ಮೂರು ತಲೆಮಾರುಗಳಿಂದ ಈ ಏಳು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಅಷ್ಟಕ್ಕೂ ಬುಧವಾರವೇ ಏಕೆ ಹಬ್ಬ ಆಚರಿಸಬೇಕು ಎಂಬ ಪ್ರಶ್ನೆ ಗ್ರಾಮದ ಉತ್ತರ ಹೀಗಿದೆ.

ಬುಧವಾರ ಹೊರತು ಪಡಿಸಿ ಬೇರೆ ಯಾವ ದಿನದಲ್ಲಿ ಹಬ್ಬ ಆಚರಿಸಿದ್ರೆ ಊರಿಗೆ ಕೆಡಕಾಗುತ್ತೆ, ರಾಸುಗಳು ಜಾನುವಾರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ನೂರಾರು ವರ್ಷಗಳಿಂದ ದೀಪಾವಳಿ ಹಬ್ಬವನ್ನ ಬುಧವಾರವನ್ನ ಹೊರತು ಪಡಿಸಿ ಇನ್ಯಾವುದೇ ದಿನದಲ್ಲಿ ಹಬ್ಬ ಬಂದ್ರು ಸುತ್ತಾ ಮುತ್ತಾ 7 ಗ್ರಾಮದ ಜನರು ಹಬ್ಬವನ್ನ ಆಚರಿಸುವುದಿಲ್ಲ. ಬುಧವಾರದಂದು ದೇವಸ್ಥಾನದಿಂದ ತೀರ್ಥ ತಂದು ಹಸುಗಳಿಗೆ ಪೂಜೆ ಮಾಡಿ ಬಳಿಕ ಹಸುಗಳನ್ನ ಊರಿನ ಸುತ್ತಾ ಒಂದು ಸುತ್ತು ಹಾಕಿಸಲಾಗುವುದು. ಆ ನಂತರವೇ ಹಬ್ಬವನ್ನ ಆಚರಿಸುವುದು ಎನ್ನುತ್ತಾರೆ .

ಒಟ್ಟಾರೆ ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಆಚಾರ, ವಿಚಾರಗಳು ಮಾತ್ರ ಬದಲಾಗಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಗ್ರಾಮಗಳಲ್ಲಿ ನಡೆಯುತ್ತಿರುವ ಹಬ್ಬದ ಪದ್ಧತಿಗಳೇ ಸಾಕ್ಷಿಯಾಗಿದೆ.

Follow Us:
Download App:
  • android
  • ios