ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಅಧ್ಯಕ್ಷರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಬಹಿರಂಗ ಎಚ್ಚರಿಕೆಗೆ ಉದ್ಯಮಿ ಮೋಹನ್‌ದಾಸ್ ಪೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗಿದೆ ಎಂದು ಪೈ ಪ್ರತಿಪಾದಿಸಿದ್ದಾರೆ.

ಬೆಂಗಳೂರು: ನಾನು ಯಾರೆಂದು ಕೆಲವರಿಗೆ ಗೊತ್ತಿಲ್ಲ ಅಂತ ಕಾಣುತ್ತದೆ. ಬೇಸಿಕ್ ಕಾಮನ್‌ಸೆನ್ಸ್ ಇಟ್ಕೊಂಡು ನನ್ನ ಹತ್ರ ಡೀಲ್ ಮಾಡಬೇಕು. ನನಗೆ ವಾರ್ನ್ ಮಾಡೋದು, ಎಚ್ಚರಿಕೆ ಕೊಡೋದು ನಡೆಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಅಧ್ಯಕ್ಷರೊಬ್ಬರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ ಘಟನೆ ನಡೆದಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಉದ್ಯಮಿ ಹಾಗೂ ಸಾಮಾಜಿಕ ಚಿಂತಕ ಮೋಹನ್‌ದಾಸ್ ಪೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಗೊಡ್ಡು ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂಬ ಡಿಸಿಎಂ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಈ ರೀತಿಯ ಭಾಷೆ ಮತ್ತು ಧೋರಣೆ ಪ್ರಜಾಪ್ರಭುತ್ವದ ಮೂಲಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋಹನ್‌ದಾಸ್ ಪೈ, ಹೌದು, ನೀವು ನಮ್ಮ ಸಚಿವರು ಮತ್ತು ಜನಪ್ರತಿನಿಧಿಗಳು. ಆದರೆ ನೀವು ನಮ್ಮ ಯಾಜಮಾನರಲ್ಲ. ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ನಾಗರಿಕರಿಗೆ ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ಇದೆ. ನಾಗರಿಕರೊಂದಿಗೆ ಈ ರೀತಿಯಲ್ಲಿ ಮಾತನಾಡುವುದು ಮತ್ತು ಭಯದ ವಾತಾವರಣ ನಿರ್ಮಿಸುವುದು ಅತ್ಯಂತ ತಪ್ಪು ನಡೆ ಎಂದು ಹೇಳಿದ್ದಾರೆ. ನಾಗರಿಕರು ಇಂದು ಹಲವು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ಬೆದರಿಕೆಗಳಲ್ಲ, ಪರಿಹಾರ ಮತ್ತು ಸಹಾಯ ಅಗತ್ಯವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದು ಸರ್ಕಾರಕ್ಕೂ, ಮಂತ್ರಿಗಳಿಗೂ ಶ್ರೇಯಸ್ಕರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಗಿದ್ದೇನು?

ಶನಿವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಪದಾಧಿಕಾರಿಗಳೊಂದಿಗಿನ ಸಭೆಯಲ್ಲಿ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಒಂದರ ಅಧ್ಯಕ್ಷ ಕಿರಣ್‌ ಹೆಬ್ಬಾರ್‌ ಎಂಬುವವರು ಬರೆದ ಪತ್ರವನ್ನು ಬಹಿರಂಗವಾಗಿ ಓದಿದ ಶಿವಕುಮಾರ್‌ ಅವರು, ಪ್ರಧಾನ ಮಂತ್ರಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿದ್ದೇನೆ. ಅವನ್ಯಾರೋ ಹೆಬ್ಬಾರ್ ಎಂಬುವವನಿಗೆ ಹೆದರುತ್ತೇನೆಯೇ? ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ. ಯಾರೇ ಆಗಲಿ ಯಾರ ಜತೆಗೆ ಮಾತನಾಡುತ್ತಿದ್ದೇವೆ ಎಂಬ ಬಗ್ಗೆ ಕನಿಷ್ಠ ಪರಿಜ್ಞಾನ ಇಟ್ಟುಕೊಳ್ಳಬೇಕು. ಯಾವನೇ ಆಗಿರಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಆಗುವುದಿಲ್ಲ ಎಂದು ಕಿಡಿಕಾರಿದರು.

ನಾನು ಇರುವುದು ನಿಮಗಾಗಿ. ನಾನು ನಿಮ್ಮನ್ನು ಕರೆದು ಅಭಿಪ್ರಾಯ ಪಡೆಯುವ ಅಗತ್ಯವಿರಲಿಲ್ಲ. ನಿಮ್ಮ ಮೇಲೆ ಪ್ರೀತಿ- ವಿಶ್ವಾಸವಿಟ್ಟು ಕರೆದಿದ್ದೇವೆ. ‘ನಿಮ್ಮನ್ನು ನೀವು ನಿಯಂತ್ರಿಸಬೇಕಾದರೆ ನಿಮ್ಮ ಮೆದುಳನ್ನು ಪ್ರಯೋಗಿಸಿ, ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಪ್ರಯೋಗಿಸಿ’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ನಾನು ನನ್ನ ಹೃದಯದಿಂದ ಜನರ ಮನಸ್ಸು ಗೆದ್ದಿದ್ದೇನೆ. ಸತತ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ನನ್ನ ವಿರುದ್ಧ ಸ್ಪರ್ಧಿಸಿದ್ದರೂ ಜನ ನನ್ನನ್ನು 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಅಂತರದ ಗೆಲುವು ಎಂದು ತಿಳಿಸಿದರು.

ರಾಜಕೀಯ ವಲಯದಲ್ಲಿ ಚರ್ಚೆ

ಈ ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳು, ಸರ್ಕಾರದ ನಿಲುವು ಮತ್ತು ಜನಪ್ರತಿನಿಧಿಗಳ ಭಾಷಾಶೈಲಿ ಕುರಿತು ಸಾರ್ವಜನಿಕ ವಲಯದಲ್ಲೂ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರ ಪ್ರಶ್ನೆ ಮತ್ತು ಸರ್ಕಾರದ ಉತ್ತರಗಳು ಯಾವ ರೀತಿ ಇರಬೇಕು ಎಂಬ ವಿಚಾರ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ.

Scroll to load tweet…