* ಆರೋಪವನ್ನು ಪರೋಕ್ಷವಾಗಿ ಒಪ್ಪಿದ ಸಿಎಂ* ಹಗರಣವನ್ನು ನಾನೇ ಪ್ರಸ್ತಾಪಿಸಬೇಕೆಂದಿದ್ದೆ* ಕೂಡಲೇ ಅಧಿವೇಶನ ಕರೆಯಿರಿ  

ಬೆಂಗಳೂರು(ಜೂ.20): ರಾಜ್ಯದ ಜಲಸಂಪನ್ಮೂಲ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿ 20 ಸಾವಿರ ಕೋಟಿ ರು. ಮೊತ್ತದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ ಎಂದು ಬಿಜೆಪಿ ನಾಯಕರೇ ಆರೋಪ ಮಾಡಿದ್ದಾರೆ. ಇದಕ್ಕೆ ಮೌನವಹಿಸುವ ಮೂಲಕ ಮುಖ್ಯಮಂತ್ರಿಗಳು ಆರೋಪ ನಿಜ ಎಂದು ಒಪ್ಪಿಕೊಂಡಿದ್ದು, ಹಗರಣದ ತನಿಖೆಗೆ ಸರಕಾರ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ನೀರಾವರಿ ಇಲಾಖೆ ಅವ್ಯವಹಾರದ ಬಗ್ಗೆ ಮಾಡಿರುವ ಆರೋಪ ಸಂಬಂಧ ನನಗೂ ಮಾಹಿತಿ ಇದೆ. 10 ಸಾವಿರ ಕೋಟಿ ರು. ಕಾಮಗಾರಿಗೆ 20 ಸಾವಿರ ಕೋಟಿ ರು. ಅಂದಾಜು ವೆಚ್ಚ ಸಿದ್ಧವಾಗಿದೆ. ಈ ಸರ್ಕಾರ ಬಂದ ಮೇಲೆ ಆರ್ಥಿಕ ಸಮಸ್ಯೆ ಇದ್ದರೂ, ನೀರಾವರಿ ಇಲಾಖೆಯಲ್ಲಿ ಹೇಗೆ ನಿಯಮಗಳ ಉಲ್ಲಂಘನೆ ಮಾಡಿ ಕಾಮಗಾರಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂಬುದೂ ತಿಳಿದಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕೆಂದು ನಾನು ಸುಮ್ಮನಿದ್ದೆ. ಇನ್ನೂ ಏನೆಲ್ಲಾ ಮಾಡುತ್ತಾರೋ ಮಾಡಲಿ, ಸದನದಲ್ಲಿ ಎಲ್ಲವನ್ನೂ ಒಟ್ಟಿಗೆ ಚರ್ಚೆ ಮಾಡೋಣ ಎಂದು ಕಾಯುತ್ತಿದ್ದೆವು. ಈ ಮಧ್ಯದಲ್ಲಿ ವಿಶ್ವನಾಥ್‌ ಅವರು ರಾಜ್ಯದ ಜನರ ಮುಂದೆ ಈ ವಿಚಾರ ಬಿಚ್ಚಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಬಳಿ ಈ ಇಲಾಖೆ ಇದ್ದು, ಈ ಬಗ್ಗೆ ಅವರು ಸ್ಪಷ್ಟನೆ ನೀಡದೇ ಅಧಿಕಾರಿಗಳ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಈ ಆರೋಪ ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಲೂಟಿಕೋರರ ಆಡಳಿತ, ಜಿದ್ದಿಗೆ ಬಿದ್ದವರಂತೆ ಪೈಪೋಟಿಯಿಂದ ಭ್ರಷ್ಟಾಚಾರ: ಸಿದ್ದು ಗುದ್ದು

ಕೂಡಲೇ ಅಧಿವೇಶನ ಕರೆಯಿರಿ:

ಈ ಸಮಯದಲ್ಲಿ ಬಿಜೆಪಿಯವರಿಗೆ ಹೆಚ್ಚು ಮಾತನಾಡಲು ನಾವು ಅವಕಾಶ ಕೊಡಬೇಕು. ರಾಜ್ಯಕ್ಕೆ ಅವರೇ ಸಂದೇಶ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ನೀರಾವರಿ ಇಲಾಖೆ ಹಗರಣದ ಬಗ್ಗೆ ಜಂಟಿ ಸದನ ಸಮಿತಿ ರಚನೆ ಮಾಡಬೇಕು. ಬೇಕಾದರೆ ಸಮಿತಿಗೆ ನಿಮ್ಮ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಶಾಸಕರು ಹಾಗೂ ಪರಿಷತ್‌ ಸದಸ್ಯರನ್ನು ಸಮಿತಿಗೆ ಸೇರಿಸಿ. ಈ ವಿಚಾರ ಚರ್ಚಿಸಲು ತಕ್ಷಣ ಅಧಿವೇಶನ ಕರೆಯಿರಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನಿಂದ ಕೋವಿಡ್‌ ಮೃತರ ಮಾಹಿತಿ ಸಂಗ್ರಹ

ರಾಜ್ಯದಲ್ಲಿ ಕೊರೋನಾದಿಂದ ಸತ್ತವರ ಡೆತ್‌ ಆಡಿಟ್‌ ಮಾಡಿ ಎಂದು ನಾವು ಒತ್ತಾಯ ಮಾಡುತ್ತಿದ್ದೇವೆ. ಆದರೆ ಸರ್ಕಾರ ಅದನ್ನು ಮಾಡದೆ ಮೃತರ ಕುಟುಂಬಕ್ಕೆ 1 ಲಕ್ಷ ರು. ಪರಿಹಾರ ಘೋಷಿಸಿದೆ. ಹೀಗಾಗಿ, ಪಕ್ಷದ ಪಂಚಾಯತಿ ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರು ಕಳೆದ ವರ್ಷ ಮಾರ್ಚ್‌ನಿಂದ ಇಲ್ಲಿಯವರೆಗೂ ಎಷ್ಟುಜನ ಕೊರೋನಾದಿಂದ ಸತ್ತಿದ್ದಾರೆ ಎಂಬುದರ ಮಾಹಿತಿ ಕಲೆಹಾಕಿ, 1 ಲಕ್ಷ ರು. ಪರಿಹಾರಕ್ಕೆ ತಹಶೀಲ್ದಾರರಿಗೆ ಅರ್ಜಿ ನೀಡಬೇಕು. ನಂತರ ನಾನು ಒಂದು ನಂಬರ್‌ ಕಳುಹಿಸಿಕೊಡುತ್ತೇನೆ. ಅದಕ್ಕೆ ನೀವು ಮಾಹಿತಿ ಕಳುಹಿಸಬೇಕು. ನಾನು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಎಲ್ಲ ಹಿರಿಯ ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿ ಹಣ ಸಿಗುವಂತೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.