Asianet Suvarna News

ರಾಜ್ಯದಲ್ಲಿ ಲೂಟಿಕೋರರ ಆಡಳಿತ, ಜಿದ್ದಿಗೆ ಬಿದ್ದವರಂತೆ ಪೈಪೋಟಿಯಿಂದ ಭ್ರಷ್ಟಾಚಾರ: ಸಿದ್ದು ಗುದ್ದು

* ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
* ರಾಜ್ಯದಲ್ಲಿ ಹಣ ದೋಚಲು ಆಡಳಿತ ಪಕ್ಷದವರ ನಡುವೆಯೇ ಕಿತ್ತಾಟ ನಡೆಯುತ್ತಿದೆ ಎಂದ ಸಿದ್ದು
* ಪಡಿತರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಿದ್ದು ಗುದ್ದು

Siddaramaiah Hits out at Karnataka BJP Govt rbj
Author
Bengaluru, First Published Jun 19, 2021, 10:19 PM IST
  • Facebook
  • Twitter
  • Whatsapp

ಬೆಂಗಳೂರು, (ಜೂನ್.19): ರಾಜ್ಯದಲ್ಲಿ ಹಣ ದೋಚಲು ಆಡಳಿತ ಪಕ್ಷದವರ ನಡುವೆಯೇ ಕಿತ್ತಾಟ ನಡೆಯುತ್ತಿದೆ. ನಾನೆಷ್ಟು, ನೀನೆಷ್ಟು ಎಂದು ಜಿದ್ದಿಗೆ ಬಿದ್ದವರಂತೆ ಪೈಪೋಟಿಯಿಂದ ಬ್ರಷ್ಟಾಚಾರ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕಿದರೆ ಮಾತ್ರ ರಾಜ್ಯಕ್ಕೆ ಪರಿಹಾರ ದೊರೆಯಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಜನ್ಮದಿನದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಮಲ್ಲೇಶ್ವರಂ 18 ಕ್ರಾಸ್ ನಲ್ಲಿರುವ ಆಟದ ಮೈದಾನದಲ್ಲಿ ಕಾಂಗ್ರೆಸ್ ಸಹಾಯ ಹಸ್ತ ಘೋಷಣೆಯಡಿ, ರಾಹುಲ್ ಕೇರ್ ಆಶ್ರಯದಲ್ಲಿ ಅರ್ಚಕರು, ಆಟೋ ಚಾಲಕರು, ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕ ದಳ ಕಾರ್ಯಕರ್ತರಿಗೆ ಪಡಿತರ ಕಿಟ್ ವಿತರಿಸಿ ಮಾತನಾಡಿದರು.

ತಿಗಣೆಯಂತೆ ಜನರ ರಕ್ತ ಹೀರುತ್ತಿರುವ ಮೋದಿ: ಪ್ರಧಾನಿ ವಿರುದ್ಧ ಸಿದ್ದು ಕೆಂಡಾಮಂಡಲ

ಬಿಜೆಪಿ ನಾಯಕರ ಮೇಲೆ, ಸರ್ಕಾರದ ಮೇಲೆ ಪ್ರತಿಪಕ್ಷದವರಾಗಿ ನಾವು ಆರೋಪ ಮಾಡುತ್ತಿಲ್ಲ. ಆಡಳಿತ ಪಕ್ಷದವರೇ ಸ್ವತಃ ಭ್ರಷ್ಟಾಚಾರ ಕುರಿತು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ. ಇದು ಜನ ವಿರೋಧಿ, ಜನದ್ರೋಹಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಏಳು .ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು, ಆದರೆ ಬಿಜೆಪಿಯವರು ಅಧಿಕಾರಕ್ಕೆ ಬಂದು ಎರಡು ಕೆ.ಜಿ.ಗೆ ಇಳಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಿದ್ದರೆ ಏಳು ಕೆ.ಜಿ. ಅಲ್ಲ, ಹತ್ತು .ಕೆ.ಜಿ. ನೀಡುತ್ತಿದ್ದೇವು. ಜನ ಸಂಕಷ್ಟದಲ್ಲಿರುವಾಗ ನೆರವಿಗೆ ಧಾವಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಣ್ಣ ರಾಜ್ಯ ಕೇರಳ 20 ಸಾವಿರ ಕೋಟಿ ರೂ ಪರಿಹಾರ ಪ್ರಕಟಿಸಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ ಮುಖ್ಯಮಂತ್ರಿಯಾದ ದಿನವೇ ಬಡವರಿಗೆ 4 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ನಮ್ಮಲ್ಲಿ ಸೂಕ್ತ ಪ್ರಮಾಣದಲ್ಲಿ ಪರಿಹಾರ ವಿತರಣೆಯಾಗುತ್ತಿಲ್ಲ ಎಂದು ದೂರಿದರು.

 'ಯಡಿಯೂರಪ್ಪನವರನ್ನುಇಟ್ಕೊಳ್ತೀರಾ..? ಕಿತ್ತು ಹಾಕ್ತೀರಾ..?'

ಯುವ ಜನತೆ ಮೋದಿ ಮೋದಿ ಎನ್ನುತ್ತಿದ್ದರು. ಈಗ ಕೆಲಸ ಕೇಳಿದರೆ ಬೊಂಡ, ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಆದರೆ ಪಕೋಡ ಮಾರಲೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅಡುಗೆ ಎಣ್ಣೆ ಬೆಲೆ 200 ರೂ ಆಗಿದೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಡುಗೆ ಅನಿಲ ಸಿಲಿಂಡರ್ ಬೆಲೆ 414 ರೂ ಇತ್ತು. ಈಗ 850 ರೂಪಾಯಿಗೆ ಏರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂ 17 ಪೈಸೆ ಅಗಿದೆ. ಡೀಸೆಲ್ ದರ 93 ರೂಪಾಯಿಗೆ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ಗೆ 37.98, ಡೀಸೆಲ್ ಮೇಲೆ 37 ರೂ, ತೆರಿಗೆ ವಿಧಿಸಿ ಹೊರೆ ಹೇರುತ್ತಿದೆ. ಇಂತಹ ಲಜ್ಜೆಗೆಟ್ಟ ಸರ್ಕಾರಗಳನ್ನು ಹಿಂದೆಂದೂ ಕಂಡಿರಲಿಲ್ಲ. ಮೊದಲು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕಬೇಕು ಎಂದರು.

ಈ ಸರ್ಕಾರ ಕುಡುಕರ ಸರ್ಕಾರವಾಗಿದೆ. ಏನೇ ಲಾಕ್ ಡೌನ್ ಮಾಡಿದರೂ ಸಹ ಮದ್ಯದಂಗಡಿಗಳನ್ನು ತೆರೆದು ಜನರಿಗೆ ಕುಡಿಯುವ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಿದೆ. ಇಲ್ಲವಾದಲ್ಲಿ ಸರ್ಕಾರಕ್ಕೆ ಆದಾಯ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು. ರಾಜ್ಯದ ಎಲ್ಲಾ ಬಡವರಿಗೆ ಹತ್ತು ಸಾವಿರ ರೂ ಹಣವನ್ನು ಖಾತೆಗಳಿಗೆ ವರ್ಗಾವಣೆ ಮಾಡಿದರೆ 13 ಸಾವಿರ ಕೋಟಿ ರೂ ವೆಚ್ಚವಾಗಲಿದೆ, ಹತ್ತು ಕೆ.ಜಿ. ಆಹಾರ ಧಾನ್ಯಕ್ಕೆ ಎರಡು ಸಾವಿರ ರೂ ಸೇರಿ 15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಬಡವರ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

Follow Us:
Download App:
  • android
  • ios