ಭದ್ರಾವತಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನರೇಗಾ ಯೋಜನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಶಿವಮೊಗ್ಗ (ಜ.29): 37 ವರ್ಷದ ನಂತರ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ನಡಡೆಯುತ್ತಿದೆ. ಅದಕ್ಕಾಗಿಯೇ ಶಿವಮೊಗ್ಗಕ್ಕೆ ಬಂದಿದ್ದೇನೆ. ಅಸೆಂಬ್ಲಿ ಅಧಿವೇಶನ, ಕನಕಪುರದ 'ಕನಕೋತ್ಸವ'ದ ಬಿಡುವಿಲ್ಲದ ಕೆಲಸಗಳ ನಡುವೆಯೂ ಈ ವಿಶೇಷ ಕಾರ್ಯಕ್ರಮಕ್ಕಾಗಿ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನುಡಿದರು.

ಇಂದು ಭದ್ರಾವತಿಯಲ್ಲಿ ನಡೆದ ಐತಿಹಾಸಿಕ 'ತರಳಬಾಳು ಹುಣ್ಣಿಮೆ' ಮಹೋತ್ಸವದಲ್ಲಿ ಪಾಲ್ಗೊಂಡರು ಬಳಿಕ ಮಾತನಾಡಿದ ಡಿಕೆ ಶಿವಕುಮಾರ, ಕನಕಪುರದಲ್ಲಿ ಕನಕೋತ್ಸವದ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ 73 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಮೆಹೆಂದಿ ಸ್ಪರ್ಧೆಯಲ್ಲಿ 11 ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು, ಈ ಮಧ್ಯೆ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದರು.

ನರೇಗಾ ಯೋಜನೆಗೆ 'ಸಮಾಧಿ' ಕಟ್ಟುತ್ತಿದೆ ಕೇಂದ್ರ

ನರೇಗಾ (ಉದ್ಯೋಗ ಖಾತರಿ) ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದರು. 'ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರವನ್ನು ಕೇಂದ್ರ ಕಿತ್ತುಕೊಂಡಿದೆ. 7 ಸಾವಿರ ಕೋಟಿ ನರೇಗಾ ಹಣ ಕೇಂದ್ರದಿಂದ ಬರುತ್ತಿತ್ತು. ಅದರೀಗ ದೆಹಲಿಯಲ್ಲಿ ಕುಳಿತು ಸ್ಯಾಟಲೈಟ್ ಮೂಲಕ ತೀರ್ಮಾನ ಮಾಡ್ತಾರಂತೆ! ಮಹಾತ್ಮ ಗಾಂಧಿಯವರನ್ನು ಹಿಂದೆ ಮರ್ಡರ್ ಮಾಡಿದ್ದರು, ಈಗ ಅವರ ಹೆಸರನ್ನೇ ಯೋಜನೆಯಿಂದ ತೆಗೆದು ಹಾಕುತ್ತಿದ್ದಾರೆ. ನರೇಗಾ ಯೋಜನೆಗೆ ಕೇಂದ್ರ ಸಮಾಧಿ ಕಟ್ಟುತ್ತಿದೆ' ಎಂದು ಕಿಡಿಕಾರಿದರು. ಅಲ್ಲದೆ, ನರೇಗಾ ಹಣವನ್ನು ಕೇಂದ್ರವೇ ಭರಿಸಬೇಕು ಮತ್ತು ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಘೋಷಿಸಿದರು.

ಜರ್ಜ್ ರಾಜೀನಾಮೆ ಹಾಗೂ ಅಪೆಕ್ಸ್ ಬ್ಯಾಂಕ್ ಚುನಾವಣೆ

ಹಿರಿಯ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಲಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಡಿಕೆಶಿ ತಳ್ಳಿಹಾಕಿದರು. 'ಜಾರ್ಜ್ ಅವರು ಅತ್ಯಂತ ಹಿರಿಯ ಮತ್ತು ಸ್ವಾಭಿಮಾನಿ ಮಂತ್ರಿ, ಅವರ ರಾಜೀನಾಮೆ ಬಗ್ಗೆ ನನಗಂತೂ ಮಾಹಿತಿಯಿಲ್ಲ, ಇದೆಲ್ಲಾ ವಿರೋಧ ಪಕ್ಷದವರ ಸೃಷ್ಟಿ ಎಂದರು. ಇನ್ನು ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್ ಒಂದು ತೀರ್ಮಾನ ಮಾಡುತ್ತದೆ, ಅದರಂತೆಯೇ ಎಲ್ಲವೂ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಬ್ಯಾಲೆಟ್ ಪೇಪರ್ ಮೂಲಕ ಸ್ಥಳೀಯ ಸಂಸ್ಥೆ ಚುನಾವಣೆ?

ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಹತ್ವದ ಸುಳಿವು ನೀಡಿದ ಡಿ.ಕೆ. ಶಿವಕುಮಾರ್, ನಾಳೆ ಅಥವಾ ನಾಡಿದ್ದು ನ್ಯಾಯಾಲಯದಲ್ಲಿ ಮೀಸಲಾತಿ ಬಗ್ಗೆ ನಿರ್ಧಾರವಾಗಲಿದೆ. ನಮ್ಮ ನಾಯಕರಿಗೆ ಚುನಾವಣೆಗೆ ಸಿದ್ಧವಾಗಲು ಸೂಚಿಸಿದ್ದೇವೆ. ಈ ಬಾರಿ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕವೇ ಚುನಾವಣೆ ನಡೆಸುವ ಆಲೋಚನೆ ಇದೆ ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದರು. ಬೆಳಗಾವಿಯ 400 ಕೋಟಿ ಹಣ ನಾಪತ್ತೆ ಪ್ರಕರಣದ ಬಗ್ಗೆ ಕೇಳಿದಾಗ, ಸಿಬಿಐ ಇದೆಯಲ್ಲಾ, ಅವರೇ ತನಿಖೆ ಮಾಡಿ ಹೇಳಲಿ ಎಂದು ಟಾಂಗ್ ನೀಡಿದರು.

ಸಿಎಂ ಬದಲಾವಣೆ ಚರ್ಚೆಗೆ ಕಾಲವೇ ಉತ್ತರ!

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ 'ಮುಖ್ಯಮಂತ್ರಿ ಬದಲಾವಣೆ' ವಿಚಾರಕ್ಕೆ ಡಿಕೆಶಿ ಅತ್ಯಂತ ನಾಜೂಕಾಗಿ ಉತ್ತರಿಸಿದರು. ಈ ಬಗ್ಗೆ ಈಗಾಗಲೇ ಹೇಳಿದ್ದೇನೆ, ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾನಷ್ಟೇ ಅಲ್ಲ, ಲಕ್ಷಾಂತರ ಕಾರ್ಯಕರ್ತರು ಮತ್ತು ಎಲ್ಲಾ ಮುಖಂಡರು ಶ್ರಮಿಸಿದ್ದಾರೆ ಎಂದು ಹೇಳುವ ಮೂಲಕ ಕುತೂಹಲವನ್ನು ಹಾಗೆಯೇ ಉಳಿಸಿದರು.