ಕನಕಪುರದಲ್ಲಿ 7ನೇ ಆವೃತ್ತಿಯ ಕನಕೋತ್ಸವಕ್ಕೆ ಡಿಕೆ ಬ್ರದರ್ಸ್ ಚಾಲನೆ ನೀಡಿದ್ದು, ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ, ದೆಹಲಿ ಸ್ತಬ್ಧಚಿತ್ರ ನಿರಾಕರಣೆ ಮತ್ತು ಮನರೇಗಾ ಹೆಸರು ಬದಲಾವಣೆ ವಿರುದ್ಧ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಸವಾಲು ಹಾಕಿದರು
ಕನಕಪುರ(ಜ.26): ಕಳೆದ 16 ವರ್ಷಗಳಿಂದ ಸತತವಾಗಿ ನಾವು ಕನಕೋತ್ಸವ ನಡೆಸುತ್ತಾ ಬಂದಿದ್ದು, ಇದು 7ನೇ ಆವೃತ್ತಿಯಾಗಿದೆ. ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗೆ ಉತ್ತೇಜನ ನೀಡುವುದು ನಮ್ಮ ಮೂಲ ಉದ್ದೇಶ ಎಂದು ಡಿಕೆ ಬ್ರದರ್ಸ್ ತಿಳಿಸಿದರು.
ಇಂದು ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಜಿಲ್ಲಾಮಟ್ಟದ 'ಕನಕೋತ್ಸವ'ದ ಬಗ್ಗೆ ಮಾಹಿತಿ ನೀಡಿದರು.
ರಾಮನಗರದಲ್ಲಿ ರಾಮೋತ್ಸವ ಹಾಗೂ ಚನ್ನಪಟ್ಟಣದಲ್ಲಿ ಬೊಂಬೆನಾಡು ಉತ್ಸವದ ಮಾದರಿಯಲ್ಲೇ ಕನಕಪುರದಲ್ಲೂ ಕನಕೋತ್ಸವದ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

'ಮನೆಗೆ ಐದು ಗ್ಯಾರೆಂಟಿ, ಮನೆಗೊಂದು ರಂಗೋಲಿ' ವಿಶೇಷ ಕಾರ್ಯಕ್ರಮ
ಕನಕೋತ್ಸವದಲ್ಲಿ ವಿಶೇಷ ಕಾರ್ಯಕ್ರಮ ಕುರಿತು ಮಾತನಾಡಿದ ಡಿಕೆ ಸುರೇಶ್, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ 'ಮನೆಗೆ ಐದು ಗ್ಯಾರಂಟಿ, ಮನೆಗೊಂದು ರಂಗೋಲಿ' ಎಂಬ ವಿನೂತನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಎಂದರು. ಕ್ಷೇತ್ರದ ಪ್ರತಿಯೊಬ್ಬ ಮಹಿಳೆಯೂ ಅತ್ಯಂತ ಉತ್ಸಾಹದಿಂದ ಈ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಕನಕೋತ್ಸವದ ವೇದಿಕೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ದೆಹಲಿ ಸ್ತಬ್ಧಚಿತ್ರಕ್ಕೆ ಕೋಕ್: ಕೇಂದ್ರ ಸಚಿವರಿಗೆ ಡಿಕೆಶಿ ಸವಾಲು
ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಮ್ಮ ರಾಜ್ಯದ ಸ್ತಬ್ಧಚಿತ್ರಕ್ಕೆ ಏಕೆ ಅವಕಾಶ ಸಿಗಲಿಲ್ಲ ಎಂಬ ಪ್ರಶ್ನೆಗೆ ರಾಜ್ಯದ ಕೇಂದ್ರ ಸಚಿವರಾದ ಹೆಚ್‌ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್ ಹಾಗೂ ಶೋಭಾ ಕರಂದ್ಲಾಜೆ ಉತ್ತರ ನೀಡಬೇಕು. ಅವರಿಗೆ ಎಷ್ಟು ಶಕ್ತಿಯಿದೆ ಎಂಬುದು ಇದರಿಂದ ತಿಳಿಯುತ್ತದೆ. ನಾನೇನೂ ಟೀಕೆ ಮಾಡುವುದಿಲ್ಲ, ಅವರೇ ಉತ್ತರಿಸಲಿ' ಎಂದು ಸವಾಲು ಹಾಕಿದರು.
ಮನರೇಗಾ ಹೆಸರು ಬದಲಾವಣೆ ವಿರುದ್ಧ 'ರಾಜಭವನ ಚಲೋ'
ನರೇಗಾ ಯೋಜನೆಯ ಹೆಸರು ಬದಲಾವಣೆಯನ್ನು ವಿರೋಧಿಸಿ ಕಾಂಗ್ರೆಸ್ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಡಿಕೆಶಿ ತಿಳಿಸಿದರು. 'ನಾಳೆ ಬೆಳಿಗ್ಗೆ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದ್ದು, ಪ್ರತಿ ತಾಲೂಕಿನಲ್ಲಿಯೂ 'ರನ್ ಫಾರ್ ಮನರೇಗಾ' ಹೆಸರಿನಲ್ಲಿ 5 ಕಿಲೋಮೀಟರ್ ಪಾದಯಾತ್ರೆ ನಡೆಸುತ್ತೇವೆ. ಜನರ ಹಕ್ಕುಗಳ ಕುರಿತು ಅರಿವು ಮೂಡಿಸಲು ಈ ಹೋರಾಟ ಅನಿವಾರ್ಯ' ಎಂದು ಅವರು ಹೇಳಿದರು.


