Asianet Suvarna News Asianet Suvarna News

Weekend Curfew ಬದುಕಿದವರ ಸಾಯಿಸುವಂಥ ಕ್ರಮ: ಡಿ.ಕೆ.ಶಿವಕುಮಾರ್‌

*  ಸೋಂಕು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ
*  ಜನರ ಬದುಕಿನ ಸಂಪಾದನೆ ಏಕೆ ಹಾಳು ಮಾಡ್ತೀರಿ?
*  ನಿಯಮ ಮೀರಿದ ಬಿಜೆಪಿ ವಿರುದ್ಧ ಕ್ರಮಕ್ಕೆ ಡಿಕೆಶಿ ಪಟ್ಟು
 

DK Shivakumar Slams on BJP Government for Impose Weekend Curfew in Karnataka grg
Author
Bengaluru, First Published Jan 21, 2022, 8:44 AM IST

ಬೆಂಗಳೂರು(ಜ.21):  ವಾರಾಂತ್ಯ ಕರ್ಫ್ಯೂದಂತಹ(Weekend Curfew) ಕ್ರಮಗಳು ಸರಿಯಲ್ಲ. ಈ ಸರ್ಕಾರದವರು ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳದೆ ಅನಗತ್ಯವಾಗಿ ಕರ್ಫ್ಯೂ ಹೇರುವ ಮೂಲಕ ಜನರ ಪ್ರಾಣವನ್ನು ತೆಗೆಯುತ್ತಿದ್ದಾರೆ. ಬದುಕಿದ್ದವರನ್ನೇ ಸಾಯಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಇದೀಗ ಮತ್ತೆ ವಾರಾಂತ್ಯದ ಕರ್ಫ್ಯೂಗಳ ಮೂಲಕ ಸರ್ಕಾರದವರು ಜನರ ಪ್ರಾಣ ತೆಗೆಯುತ್ತಿದ್ದಾರೆ. ಇವರು ಈ ರೀತಿ ಮಾಡುತ್ತಾ ಹೋದರೆ ವ್ಯಾಪಾರ-ವಹಿವಾಟು, ಜನರ ಬದುಕು ಏನಾಗಬೇಕು? ಎಂದು ಪ್ರಶ್ನಿಸಿದರು.

ಬೇರೆ ಬೇರೆ ದೇಶಗಳಲ್ಲಿ ಲಾಕ್ಡೌನ್‌(Lockdown) ಇಲ್ಲ. ನಾನು ಹೈದರಾಬಾದ್‌ಗೆ(Hyderabad) ಹೋಗಿದ್ದೆ ಅಲ್ಲಿ ಯಾವ ನಿರ್ಬಂಧವೂ ಇಲ್ಲ. ಆದರೆ ಇಲ್ಲಿ ಸರ್ಕಾರ ಮಾತ್ರ ಏಕೆ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ. ಒಮಿಕ್ರೋನ್‌(Omicron) ಸೋಂಕು ಉಂಟಾದರೆ ಆರೋಗ್ಯ ಕಾಪಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಆದರೆ ಜನರ ದಿನನಿತ್ಯದ ಬದುಕಿನ ಸಂಪಾದನೆಯನ್ನು ಹಾಳು ಮಾಡುವುದು ಏಕೆ? ಎಂದು ಕಿಡಿಕಾರಿದರು.

Congress Padayatre ಪಾದಯಾತ್ರೆ ವೇಳೆ ಶಾಲಾ ಮಕ್ಕಳ ಜತೆ ಬೆರೆತ ಡಿಕೆ ಶಿವಕುಮಾರ್‌ ವಿರುದ್ಧ ಕೇಸ್ ಬುಕ್

ಇವರು ಕರ್ಫ್ಯೂ ಮಾಡಿದರೆ ಬ್ಯಾಂಕ್‌ನವರು ಜನರಿಗೆ ನೀಡಿರುವ ಸಾಲದ ಬಡ್ಡಿ ಮನ್ನಾ ಮಾಡುತ್ತಾರಾ? ಬಾಡಿಗೆದಾರರಿಗೆ ಸರ್ಕಾರ ಬಾಡಿಗೆ ಮನ್ನಾ ಮಾಡುತ್ತಾ? ಹೋಟೆಲ್‌ ಉದ್ಯಮದವರು, ವ್ಯಾಪಾರಸ್ಥರು, ಜನಸಾಮಾನ್ಯರು ಏನಾಗಬೇಕು? ಈ ವಿಷಯದಲ್ಲಿ ವಿವಿಧ ಕ್ಷೇತ್ರಗಳವರು ಹೊರ ಹಾಕುತ್ತಿರುವ ಆಕ್ರೋಶಕ್ಕೆ ಅರ್ಥವಿದೆ ಎಂದು ಸಮರ್ಥಿಸಿದರು.

ನಿಯಮ ಮೀರಿದ ಬಿಜೆಪಿ ವಿರುದ್ಧ ಕ್ರಮಕ್ಕೆ ಡಿಕೆಶಿ ಪಟ್ಟು

ಕೋವಿಡ್‌ ನಿಯಮ ಉಲ್ಲಂಘನೆ(Violation of the Covid Guidelines) ಮಾಡಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಭರವಸೆ ನೀಡಿದ್ದಾರೆ. ಅದರಂತೆ ಈಗ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದ್ದು, ನಿಯಮ ಉಲ್ಲಂಘಿಸಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಆಗಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ(Coronavirus) ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ(BJP) ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ ನಾನು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ನಮ್ಮ ಪಕ್ಷದ ನಿಯೋಗವೂ ಅವರನ್ನು ಭೇಟಿ ಮಾಡಿತ್ತು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಕೂಡ ಕೊರೋನಾ ನಿಯಮಗಳ ವಿರುದ್ಧವಾಗಿ ನಡೆದುಕೊಂಡ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ. ಜತೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ ಪೊಲೀಸ್‌(Police) ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದ್ದಾರೆ. ಈ ಇಬ್ಬರೂ ಕ್ರಮಕ್ಕೆ ಆದೇಶಿಸಿರುವುದರಿಂದ ಇನ್ನೇನಿದ್ದರೂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Mekedatu Project: ನಾಯಕತ್ವಕ್ಕಾಗಿ ಡಿಕೆಶಿ ಪಾದಯಾತ್ರೆ ಡ್ರಾಮಾ: ನಳಿನ್‌ ಕುಮಾರ್‌ ಕಟೀಲ್‌!

ಸರ್ಕಾರ ಆದೇಶ ನೀಡಿರುವುದರಿಂದ ಈಗ ಪ್ರಕರಣ ದಾಖಲಿಸುವುದು ಉಪ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಬಿಟ್ಟವಿಚಾರ. ಅವರ ನಡೆ ನೋಡಿ, ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧವೇ ಹೋರಾಟ ಮಾಡುತ್ತೇವೆ. ಕೇವಲ ನಮ್ಮವರ ಮೇಲೆ (ವಿಪಕ್ಷ) ಕೇಸು ದಾಖಲಿಸಿ ಅವರ (ಆಡಳಿತಪಕ್ಷ) ಕಡೆಯವರ ಮೇಲೆ ದಾಖಲಿಸದಿದ್ದರೆ ನಾವು ಸುಮ್ಮನಿರುವುದಿಲ್ಲ. ಹೋರಾಟ ಹೇಗಿರಲಿದೆ ಎಂಬುದನ್ನು ನೀವೇ ನೋಡುತ್ತೀರಿ ಎಂದರು.

ಎಲ್ಲರ ಮೇಲೂ ಕ್ರಮವಾಗಬೇಕು:

ಬಿಜೆಪಿಯ ಶಾಸಕರೊಬ್ಬರ ಮೇಲೆ ಕೇಸು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇವಲ ಒಬ್ಬರ ಮೇಲೆ ಪ್ರಕರಣ ದಾಖಲಿಸುವುದಲ್ಲ. ನಿಯಮ ಉಲ್ಲಂಘಿಸಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ಸಿದ್ದರಾಮಯ್ಯ(Siddaramaiah) ಅವರೊಂದಿಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಕ್ರಮ ಕೈಗೊಳ್ಳದಿದ್ದರೆ ನಿಯಮ ಉಲ್ಲಂಘಿಸಿರುವವರ ಪಟ್ಟಿತರಿಸಿಕೊಂಡು ಆಯಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
 

Follow Us:
Download App:
  • android
  • ios