ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೇಶ್ವರದ ಮುಕ್ತಿಮಂದಿರಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಹುದ್ದೆಯ ಕುರಿತ ಪ್ರಶ್ನೆಗೆ 'ಕಾಲವೇ ಎಲ್ಲಕ್ಕೂ ಉತ್ತರ ಕೊಡಲಿದೆ' ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. 

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ (ಏ.20): ‘ನಾನು ಕೂತಿರುವ ಈ ಜಾಗದಲ್ಲಿ ಶಕ್ತಿ ಇದೆ. ಟೈಮ್ ಬರಲಿ, ಕಾಲ ಎಲ್ಲಕ್ಕೂ ಉತ್ತರ ಕೊಡುತ್ತೆ’, ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ರೀತಿಯಿದು. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಪವಿತ್ರ ಮುಕ್ತಿಮಂದಿರ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ ಡಿಕೆಶಿ, ಲಿಂ.ರಂಭಾಪುರಿ ವೀರಗಂಗಾಧರ ಸ್ವಾಮಿಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ, ಮುಕ್ತಿಮಂದಿರದಲ್ಲಿ ಕೆಲ ಹೊತ್ತು ಧ್ಯಾನ, ಜಪ ಮಾಡಿದರು.

ಈ ವೇಳೆ ಮಾತನಾಡಿ, ಮುಕ್ತಿಮಂದಿರ ಧರ್ಮಕ್ಷೇತ್ರ ಲಿಂ.ವೀರಗಂಗಾಧರ ಸ್ವಾಮಿಗಳ ತಪೋಭೂಮಿಯಾಗಿದ್ದು, ಇದು ವಿಶೇಷವಾದ ಸ್ಥಳವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಗಂಗಾಧರ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದೇನೆ. ವೀರಗಂಗಾಧರ ಸ್ವಾಮಿಗಳಲ್ಲಿ ವಿಶೇಷ ಶಕ್ತಿ ಇರುವುದರಿಂದ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.

‘ಡಿಕೆಶಿ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ’ ಎಂಬ ನೊಣವಿನಕೆರೆ ಶ್ರೀಗಳ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಟೈಂ ಬರಲಿ, ಕಾಲವು ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಈ ವೇಳೆ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ಡಿ.ಕೆ.ಶಿವಕುಮಾರ ಅವರನ್ನು ಸನ್ಮಾನಿಸಿದರು.

ಮುಂದಿನ ಸಿಎಂ ಡಿಕೆಶಿ ಘೋಷಣೆ

ಡಿಸಿಎಂ ಡಿ.ಕೆ.ಶಿವಕುಮಾರ ಅವರು ಲಕ್ಷ್ಮೇಶ್ವರ ಪಟ್ಟಣದ ಮಹಾಕವಿ ಪಂಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಡಿ.ಕೆ. ಶಿವಕುಮಾರ ಅವರಿಗೆ ಜಯವಾಗಲಿ, ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎನ್ನುವ ಜಯಘೋಷ ಕೂಗಿ, ಬೃಹತ್ ಗುಲಾಬಿ ಹೂವಿನ ಮಾಲೆ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಡಿ.ಕೆ.ಶಿವಕುಮಾರ ಅವರ ಕಟ್ಟಾ ಅಭಿಮಾನಿ ಲಕ್ಷ್ಮೇಶ್ವರದ ನೀಲಪ್ಪ ಶೆರಸೂರಿ ಅವರು ಶಿವಕುಮಾರ ಅವರಿಗೆ ಕಂಬಳಿ ಹೊದೆಸಿ, ಟಗರು ಮರಿ ಕಾಣಿಕೆ ನೀಡಿದರು.

ಸಂಸತ್ತಲ್ಲಿ ಇಂಡಿಯಾಕ್ಕೆ ಜಯ, ಬಿಜೆಪಿಗೆ ಮುಖಭಂಗ

‘ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕಕ್ಕೆ ಆದ ಸೋಲು ಇಂಡಿಯಾ ಮೈತ್ರಿಕೂಟದ ಗೆಲುವು. ಈ ವಿಧೇಯಕ ವಿರೋಧಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ. ಮೀಸಲಾತಿ ನೆಪದಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡಲು ಹೋದ ಬಿಜೆಪಿಗೆ ಮುಖಭಂಗವಾಗಿದೆ’ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ನೆಪದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಹೊರಟಿದ್ದರು. ಆ ಮೂಲಕ ಉತ್ತರ ಭಾರತದ ಸ್ಥಾನಗಳನ್ನು ಹೆಚ್ಚಳ ಮಾಡಿಕೊಂಡು ದಕ್ಷಿಣ ಭಾರತದ ಸ್ಥಾನಗಳನ್ನು ಕುಗ್ಗಿಸಲು ಹೊರಟಿದ್ದರು. ಇದನ್ನು ಸಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ. ಅವಮಾನ ಆಗಿರುವುದು ಬಿಜೆಪಿಗೆ ಎಂದರು.ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರ್ಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ ಎಂದು ಹೇಳಿದರು.

ನಮ್ಮದು ಹಿಟ್ಲರ್ ಆಡಳಿತವಲ್ಲ. 2023ರಲ್ಲೇ ಮಹಿಳಾ ಮೀಸಲಾತಿ ವಿಧೇಯಕ ಪಾಸಾಗಿದ್ದರೂ ಅದರ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕ ತಂದಿದ್ದು ಯಾಕೆ ಎಂದು ಪ್ರಶ್ನಿಸಿದರು.

ಸೋಲುತ್ತದೆ ಎಂದರೂ ಬಿಲ್ ತಂದಿದ್ದು ಬಿಜೆಪಿ

ವಿಪಕ್ಷಗಳ ವಿರುದ್ಧ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, ಬಿಲ್ ಸೋಲುತ್ತದೆ ಎಂದು ಗೊತ್ತಿದ್ದರೂ ತಂದವರು ಅವರು. ಅವರುಗಳು ಮಹಿಳಾ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಇವರುಗಳು ಜನರಿಂದ ಗೆದ್ದಿಲ್ಲವೇ? ಅವರುಗಳು ಇದರ ಬಗ್ಗೆ ಮಾತನಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಬಿಲ್ ಅವರ ಆಸ್ತಿಯಲ್ಲ. ದೇಶದ ಆಸ್ತಿ ಎಂದು ಇದೇ ವೇಳೆ ಶಿವಕುಮಾರ್‌ ಹೇಳಿದರು.