ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಶಾಸಕರಾದ ದಿನೇಶ್‌ ಗೂಳಿಗೌಡ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಕೆಆರ್‌ಎಸ್‌ ಅಣೆಕಟ್ಟಿನ ಸ್ಥಿತಿಗತಿಯನ್ನು ಅರಿಯಲು ತಜ್ಞರ ತಂಡ ನೇಮಿಸುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ  ಡಿ.ಕೆ.ಶಿವಕುಮಾರ್‌, ಕೆಆರ್‌ಎಸ್‌ ಜಲಾಶಯದ ಸದೃಢತೆ ಸೇರಿ ಇನ್ನಿತರ ವಿಚಾರಗಳ ಕುರಿತು ಅಧ್ಯಯನ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಬೆಂಗಳೂರು(ಡಿ.16): ಕೆಆರ್‌ಎಸ್‌ ಜಲಾಶಯದಲ್ಲಿ ಹೂಳು ತುಂಬಿರುವ ಪ್ರಮಾಣ, ಆಧುನಿಕ ತಂತ್ರಜ್ಞಾನದ ಕ್ರಮಗಳಿಗೆ ಅಣೆಕಟ್ಟು ಹೊಂದಿಕೆಯಾಗಿದೆಯೇ ಎಂಬುದರ ಅಧ್ಯಯನ ನಡೆಸಲು ತುರ್ತಾಗಿ ಜಲಾಶಯಕ್ಕೆ ತಜ್ಞರ ತಂಡವನ್ನು ನೇಮಿಸುವಂತೆ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಶಾಸಕರಾದ ದಿನೇಶ್‌ ಗೂಳಿಗೌಡ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಕೆಆರ್‌ಎಸ್‌ ಅಣೆಕಟ್ಟಿನ ಸ್ಥಿತಿಗತಿಯನ್ನು ಅರಿಯಲು ತಜ್ಞರ ತಂಡ ನೇಮಿಸುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್‌, ಕೆಆರ್‌ಎಸ್‌ ಜಲಾಶಯದ ಸದೃಢತೆ ಸೇರಿ ಇನ್ನಿತರ ವಿಚಾರಗಳ ಕುರಿತು ಅಧ್ಯಯನ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದಕ್ಕಾಗಿ ಸೂಕ್ತ ತಜ್ಞರ ತಂಡವನ್ನು ರಚಿಸಿ ಅಣೆಕಟ್ಟೆಗೆ ಕಳುಹಿಸಬೇಕು ಹಾಗೂ ಅವರಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕಾವೇರಿ ನೀರಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ರೈತರು

ತಜ್ಞರ ತಂಡವು ಅಣೆಕಟ್ಟಿನ ಗರಿಷ್ಠ ಸಾಮರ್ಥ್ಯದ 49.50 ಟಿಎಂಸಿ ನೀರು ಈಗಲೂ ಸಂಗ್ರಹವಾಗುತ್ತಿದೆಯೇ? ನೀರು ಪೋಲಾಗುತ್ತಿರುವುದನ್ನು ತಡೆಯಲಾಗಿದೆ, ಆಣೆಕಟ್ಟಿನ ಗೇಟ್‌ಗಳು ಸುಸ್ಥಿತಿಯಲ್ಲಿವೆಯೇ ಎಂಬುದು ಸೇರಿ ಇನ್ನಿತರ ವಿಚಾರಗಳ ಕುರಿತು ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ.

ಶಾಸಕರಿಬ್ಬರು ಸಲ್ಲಿಸಿರುವ ಮನವಿಯಲ್ಲಿ, ಕೆಆರ್‌ಎಸ್‌ ಜಲಾಶಯದಿಂದ ಮಂಡ್ಯ ಜಿಲ್ಲೆಯ ಕೃಷಿ, ಕುಡಿಯುವ ನೀರು ಪೂರೈಸುವುದಲ್ಲದೆ ಮೈಸೂರು, ಬೆಂಗಳೂರು ಸೇರಿದಂತೆ ಮತ್ತಿತರ ನಗರಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅದರಿಂದ ಅಣೆಕಟ್ಟೆಯ ಸುರಕ್ಷತೆ, ಕಾರ್ಯನಿರ್ವಹಣಾ ಸಾಮರ್ಥ್ಯದ ಬಗ್ಗೆ ಪರಿಶೀಲಿಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.

ಪ್ರಮುಖವಾಗಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗುತ್ತಿದೆಯೇ? ನೀರು ಪೋಲಾಗುವುದನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಸಬೇಕು. ಅದರ ಜತೆಗೆ ಜಲಾಶಯವು ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೆಯಾಗಲಿದೆಯೇ, ಪ್ರವಾಹ ಪರಿಸ್ಥಿತಿಯಲ್ಲಿ ಆಗುವ ಅನಾಹುತ ತಪ್ಪಿಸಲು ಯಾವೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಅಧ್ಯಯನ ನಡೆಸಲು ತಜ್ಞರ ತಂಡ ನೇಮಿಸಬೇಕು. ಆ ತಂಡವು ನೀಡುವ ವರದಿ ಆಧರಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.