ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಹುಟ್ಟೂರಾದ ದೊಡ್ಡ ಆಲಹಳ್ಳಿಯಲ್ಲಿ ಶ್ರೀರಾಮ ಮಂದಿರವನ್ನು ಉದ್ಘಾಟಿಸಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಜನರೇ ನನ್ನ ಆಸ್ತಿ ಎಂದರಲ್ಲದೆ, ಜಿಬಿಐಟಿ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಸವಾಲು ಸ್ವೀಕರಿಸಿದರು.

ರಾಮನಗರ(ಜ.25): ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಇಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಹುಟ್ಟೂರಲ್ಲಿ ಶ್ರೀರಾಮ ಮಂದಿರ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಭವ್ಯ ಶ್ರೀರಾಮ ಮಂದಿರವನ್ನು ಉದ್ಘಾಟಿಸಿದರು. ಈ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಜಾನಪದ ಕಲಾತಂಡಗಳ ವೈಭವದೊಂದಿಗೆ ಡಿಕೆಶಿ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ಜೈಲಿಗೆ ಹೋದಾಗ ನನಗಾಗಿ ಪ್ರಾರ್ಥಿಸಿದ ಈ ಜನರೇ ನನ್ನ ಆಸ್ತಿ

ಮಂದಿರ ಉದ್ಘಾಟನೆ ಬಳಿಕ ಭಾವುಕರಾಗಿ ಮಾತನಾಡಿದ ಡಿಕೆಶಿ, ನಾನು ಸಂಕಷ್ಟದಲ್ಲಿದ್ದಾಗ, ಜೈಲಿಗೆ ಹೋದಾಗ ನಮ್ಮ ಜನ ಚಪ್ಪಲಿ ಹಾಕದೆ ನನ್ನನ್ನು ನೋಡಲು ಬಂದಿದ್ರು. ನನಗಾಗಿ ಪ್ರಾರ್ಥಿಸಿದ್ದರು. ಅವರ ಪ್ರಾರ್ಥನೆಯ ಫಲವಾಗಿಯೇ ನಾನು 48 ದಿನಕ್ಕೆ ವಾಪಸ್ ಬಂದೆ. ಈ ಜನರೇ ನನ್ನ ನಿಜವಾದ ಆಸ್ತಿ. ನನ್ನ ಮುತ್ತಾತನ ಆಸ್ತಿಯನ್ನೆಲ್ಲ ಶಾಲೆ ನಿರ್ಮಾಣಕ್ಕೆ ಬಿಟ್ಟಿದ್ದೇನೆ. ನಾನು ಆಸ್ತಿ ಮಾರಾಟ ಮಾಡುತ್ತೇನೆ ಅಂದರೂ ಯಾರೂ ಖರೀದಿ ಮಾಡಲ್ಲ, ಹಾಗಾಗಿ ಎಲ್ಲವನ್ನೂ ಜನರೇ ಬಳಸಿಕೊಳ್ಳಲಿ ಎಂದು ಘೋಷಿಸಿದರು.

ಜಿಬಿಐಟಿ ಚರ್ಚೆಗೆ ಸದಾ ಸಿದ್ಧ: ಕುಮಾರಸ್ವಾಮಿಗೆ ತಿರುಗೇಟು

ಜಿಬಿಐಟಿ ವಿಚಾರವಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ಸವಾಲನ್ನು ರಾಮಮಂದಿರದಲ್ಲೇ ನಿಂತು ಸ್ವೀಕರಿಸಿದ ಡಿಕೆಶಿ, ಅವರು ಯಾವತ್ತು ಹೇಳುತ್ತಾರೋ ಅವತ್ತು ನಾನು ಚರ್ಚೆಗೆ ಬರಲು ಸಿದ್ಧ. ನನಗೆ ಮೂರು ದಿನ ಮುಂಚಿತವಾಗಿ ತಿಳಿಸಿದರೆ ಸಾಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ನಾನು ಈ ಸವಾಲನ್ನು ಸ್ವೀಕರಿಸಿದ್ದೆ. ನಾನು ನುಡಿದಂತೆ ನಡೆಯುವವನು, ನಿಮ್ಮ ಚಾನಲ್‌ನಲ್ಲೇ ನೇರವಾಗಿ ಕುಮಾರಸ್ವಾಮಿಗೆ ಉತ್ತರ ನೀಡುತ್ತೇನೆ ಎಂದು ಗುಡುಗಿದರು.

ಯಾರೂ ಪರ್ಮನೆಂಟ್ ಅಲ್ಲ, ನಾವು ಮಾಡುವ ಕೆಲಸ ಶಾಶ್ವತ

ರಾಜಕಾರಣದ ಬಗ್ಗೆ ಮಾತನಾಡುತ್ತಾ, ನಾನಾಗಲಿ ಅಥವಾ ಕುಮಾರಸ್ವಾಮಿಯಾಗಲಿ ಇಲ್ಲಿ ಯಾರೂ ಶಾಶ್ವತವಲ್ಲ. ಆದರೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಪರ್ಮನೆಂಟ್ ಆಗಿ ಉಳಿಯುತ್ತವೆ. ಮುಂದಿನ ತಲೆಮಾರಿನ ಜನರು ನಾವು ಮಾಡಿದ ಯೋಜನೆಗಳನ್ನು ನೆನಪಿಸಿಕೊಳ್ಳಬೇಕು. ನಾನು ರಾಜಕಾರಣ ಮಾಡುತ್ತಿಲ್ಲ, ಕುಮಾರಸ್ವಾಮಿ ಅವರೇ ರಾಜಕಾರಣ ಮಾಡಿದ್ದು, ನಾವು ಅದನ್ನು ಮುಂದುವರಿಸುತ್ತಿದ್ದೇವೆ ಅಷ್ಟೇ ಎಂದರು. ರಾಮನಗರದಿಂದ ಹೆಚ್‌ಡಿಕೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ದೇವರು ಒಳ್ಳೆಯದು ಮಾಡಲಿ, ಆಸೆ ಇಟ್ಟುಕೊಳ್ಳಲಿ, ಜನರು ಯಾರನ್ನು ಬೆಂಬಲಿಸುತ್ತಾರೋ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

ಮುದ್ದೆ, ಅವರೆಕಾಳು ಸಾರು ಸವಿದ ಡಿಸಿಎಂ

ಮಂದಿರದಲ್ಲಿ ರಾಮನ ದರ್ಶನ ಪಡೆದ ಬಳಿಕ ಡಿ.ಕೆ. ಶಿವಕುಮಾರ್ ಅವರು ಭಕ್ತರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರು. ವಿಶೇಷವಾಗಿ ನಾಟಿ ಶೈಲಿಯ ಮುದ್ದೆ ಮತ್ತು ಅವರೆಕಾಳು ಸಾರನ್ನು ಸವಿದರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್‌ಸಿ ಎಸ್. ರವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.