ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಹಾರೈಸಿ, ಹಾವೇರಿ ಜಿಲ್ಲೆಯ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅಭಿಮಾನಿಯೊಬ್ಬರು ಗೊರವಯ್ಯನ ವೇಷ ಧರಿಸಿ ಛಾಟಿ ಸೇವೆ ನೆರವೇರಿಸಿದ್ದು ವಿಶೇಷವಾಗಿತ್ತು.

ಹಾವೇರಿ (ನ.23): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಆಶಿಸಿ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಇಂದು (ಭಾನುವಾರ) ಅವರ ಅಭಿಮಾನಿಗಳು ವಿಶೇಷ ಪೂಜೆ ಮತ್ತು ವಿಶಿಷ್ಟ ಸೇವಾ ಕಾರ್ಯಕ್ರಮವನ್ನು ನೆರವೇರಿಸಿದರು. ಬಸಾಪುರ ಗ್ರಾಮದ ಮಣಿಕಂಠ ಬಳ್ಳಾರಿ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗೊರವಯ್ಯನ ವೇಷ ಧರಿಸಿ ಛಾಟಿ ಸೇವೆ:

ಡಿಕೆ ಶಿವಕುಮಾರ್ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಯೊಬ್ಬರು ಸಾಂಪ್ರದಾಯಿಕ ಗೊರವಯ್ಯನ ವೇಷ ಧರಿಸಿ ಛಾಟಿ ಸೇವೆಯನ್ನೂ ಸಲ್ಲಿಸಿದ್ದು ಗಮನ ಸೆಳೆಯಿತು. 

ನಾಗರಾಜ ನಾಯರ್, ಕರಿಯಲ್ಲಪ್ಪ ಕೇಸರಹಳ್ಳಿ, ಮಲ್ಲಪ್ಪ ಮುದ್ದಿ, ಸುರೇಶ ದೊಡ್ಡಮನಿ, ನೇತ್ರಾವತಿ ಬಳ್ಳಾರಿ, ಪರಮೇಶ ನಾಯರ್, ಮೈಲಪ್ಪ ಉರ್ಮಿ, ಬಸವರಾಜ ಹುಲ್ಲೂರ, ಮಲ್ಲಪ್ಪ ಕಂಬಳಿ ಮತ್ತು ಹನಮಂತ ಕೇಸರಳ್ಳಿ, ಬೀರಪ್ಪ ದೊಡ್ಡ ಕುರುಬರ ಸೇರಿದಂತೆ ಹಲವು ಅಭಿಮಾನಿಗಳು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವರಗುಡ್ಡದ ಮಾಲತೇಶನ ಆಶೀರ್ವಾದ ಸದಾ ಡಿಕೆ ಶಿವಕುಮಾರ್ ಅವರ ಮೇಲಿರಲಿ ಎಂದು ಎಲ್ಲರೂ ಪ್ರಾರ್ಥಿಸಿದರು.