ಡಿಕೆ ಶಿವಕುಮಾರ್‌ಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ? ಕಾರ್ಯಕರ್ತರ ಎಂಟ್ರಿಯಿಂದ ಹೊಸ ತಿರುವು, ಒಂದೆಡೆ ನಾಯಕರು ಡಿಕೆ ಶಿವಕುಮಾರ್ ಪರ ಲಾಭಿ ಆರಂಭಿಸಿದ್ದರೆ, ಇದೀಗ ಕಾರ್ಯಕರ್ತರು ಹೊಸ ದಾಳ ಉರುಳಿಸಿದ್ದಾರೆ.
ಬಾಗಲಕೋಟೆ (ನ.22) ಕರ್ನಾಟಕ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ದಿನಗಳು ಹತ್ತಿರ ಬರುತ್ತಿರುವ ಸೂಚನೆಗಳು ಸಿಗುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಮಾತುಕತೆ, ಚರ್ಚೆ, ಊಹಾಪೋಹಗಳ ನಡುವೆ ಸಿಎಂ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ತೆರೆ ಮರೆಯಲ್ಲಿ ಕಸರತ್ತುಗಳು ಜೋರಾಗಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಬಣದ ನಾಯಕರು ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಒಂದೆಡೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ನಾಯಕರು ಲಾಭಿ ಮಾಡುತ್ತಿದ್ದಾರೆ.ಇದರ ನಡುವೆ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ಹಗ್ಗಜಗ್ಗಾಟದ ನಡುವೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಸಿಎಂ ಕುರ್ಚಿ ಚರ್ಚೆಗೆ ಹೊಸ ತಿರುವು ಸಿಕ್ಕಿದೆ.
ನಾಯಕರ ಲಾಭಿ ಬೆನ್ನಲ್ಲೇ ಕಾರ್ಯಕರ್ತರಿಂದ ಲಾಭಿ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಪಕ್ಷದ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ. ನಾಯಕ ಶಕ್ತಿ ಪ್ರದರ್ಶನದ ಬೆನ್ನಲ್ಲೇ ಇದೀಗ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಪರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಡಿಕೆಶಿ ಸಿಎಂ ಆಗಬೇಕೆಂದು ದೇವರಿಗೆ ಪಾರ್ಥನೆ, ಈಡುಗಾಯಿ ಒಡೆದು ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಅನ್ನೋ ಕೂಗ ಪಕ್ಷದ ಕಾರ್ಯಕರ್ತರಲ್ಲಿ ಇದೆ ಎಂಬ ಸಂದೇಶವನ್ನು ನೀಡಿದ್ದಾರೆ.
1001 ತೆಂಗಿನಕಾಯಿ ಈಡು ಒಡೆದು ಪೂಜೆ
ಡಿಕೆ ಶಿವಕುಮಾರ್ ಪರ ಯುವ ಘಟಕದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕಾಂಗ್ರೆಸ್ ಯುವ ಘಟಕದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ. ಬಾಗಲಕೋಟೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಮಾರ್ ದಾನಕ್ಕನವರ್ ನೇತೃತ್ವದಲ್ಲಿ ಪೂಜೆ, ಪಾರ್ಥನಡೆದಿದೆ. ಕಲ್ಲೋಳ್ಳಿ ಗ್ರಾಮದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ನೇರವೇರಿಸಲಾಗಿದೆ. ದೇಗುಲದಲ್ಲಿ ಡಿಕೆಶಿ ಫೋಟೊ ಇಟ್ಟು, ಅಭಿಷೇಕ ಮಾಡಿಸಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿ 1001 ತೆಂಗಿನಕಾಯಿ ಈಡು ಒಡೆದು ಪೂಜೆ ಹರಕೆ ಸಲ್ಲಿಸಲಾಗಿದೆ.
ತೆರೆಮರೆ ಕಸರತ್ತು
ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ತೆರೆ ಮರೆ ಕಸರತ್ತು ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ಈಗಾಗಲೇ ತನ್ನ ಬೆಂಬಲಿಗ ಶಾಸಕರ ಸಹಿ ಸಂಗ್ರಹ ಮಾಡಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ಶಾಸಕರ ಸಹಿ ಪಡೆದು ಹೈಕಮಾಂಡ್ ಗೆ ತಲುಪಿಸಲು ಮುಂದಾಗಿದ್ದಾರೆ. ನಿನ್ನೆ (ನ.21) ಜೈಲಿಗೆ ತೆರಳಿ ಶಾಸಕರ ಸಹಿ ಪಡೆದಿರುವುದಾಗಿ ವರದಿಯಾಗಿದೆ. ಜೈಲಿನಲ್ಲಿರುವ ಶಾಸಕ ವಿರೇಂದ್ರ ಪಪ್ಪಿ, ವಿನಯ ಕುಲಕರ್ಣಿ ಭೇಟಿ ಮಾಡಿ ಸಹಿ ಪಡೆದಿದ್ದಾರೆ. ಸಹಿ ಸಂಗ್ರಹದಲ್ಲಿ ಒಕ್ಕಲಿಗ ಶಾಸಕರೇ ಟಾರ್ಗೆಟ್ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.


