'ಮಾಸ್ಕ್ ದಂಡದ ನಿಯಮ ಜನಪ್ರತಿನಿಧಿಗಳಿಗೂ ಅನ್ವಯ'
ಸರ್ಕಾರ ಸೂಚಿಸಿದರೆ ಕೋವಿಡ್ ಪರೀಕ್ಷೆ ಕಡ್ಡಾಯ| ಸರ್ಕಾರ ಸೂಚಿಸುವ ವ್ಯಕ್ತಿಗಳು ಕೋವಿಡ್ ಪರೀಕ್ಷೆ ನಿರಾಕರಿಸಿದರೆ ಜೈಲು ಹಾಗೂ ದಂಡ| ಕೊರೋನಾ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿಯೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ|
ಬೆಂಗಳೂರು(ಅ.08): ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದು ಜನ ಸಾಮಾನ್ಯರಿಗೆ ಮಾತ್ರ ಎಂಬುದು ಸರಿಯಲ್ಲ. ಕಾನೂನಿನ ಪ್ರಕಾರ ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತದೆ. ಹೀಗಾಗಿ ಯಾರೇ ನಿಯಮ ಉಲ್ಲಂಘನೆ ಮಾಡಿದರೂ ದಂಡ ವಿಧಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಾಸ್ಕ್ ಧರಿಸದಿದ್ದರೆ ಜನಪ್ರತಿನಿಧಿಗಳಿಗೆ ದಂಡ ವಿಧಿಸುತ್ತಿಲ್ಲ ಕೇವಲ ಜನ ಸಾಮಾನ್ಯರನ್ನು ಮಾತ್ರ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೊರೋನಾ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯಕ್ಕಾಗಿಯೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ದಂಡಕ್ಕೆ ಹೆದರಿ ನಿಯಮ ಪಾಲನೆ ಮಾಡುವ ಬದಲು ತಮ್ಮ ಆರೋಗ್ಯ ಹಾಗೂ ಸುರಕ್ಷತೆಗಾಗಿಯಾದರೂ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ದುಬಾರಿ ದಂಡ ಪಾವತಿಸಬೇಕು ಎಂದು ಹೇಳಿದರು.
ಮಾಸ್ಕ್ ಧರಿಸದೆ ಓಡಾಡುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಕೋವಿಡ್ ಟೆಸ್ಟ್ ನಿರಾಕರಿಸಿದರೆ ಜೈಲು, ಡಂಡ:
ಸರ್ಕಾರ ಸೂಚಿಸುವ ವ್ಯಕ್ತಿಗಳು ಕೋವಿಡ್ ಪರೀಕ್ಷೆ ನಿರಾಕರಿಸಿದರೆ ಜೈಲು ಹಾಗೂ ದಂಡ ಕಟ್ಟಬೇಕಾಗುತ್ತದೆ ಎಂದು ಪಾಟೀಲ್ ಮತ್ತೊಮ್ಮೆ ಎಚ್ಚರಿಕೆ ನೀಡಿದರು. ಆರೋಗ್ಯ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಗುರುತಿಸಿದ ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ಸೋಂಕು ಲಕ್ಷಣಗಳುಳ್ಳವರು, ಕಂಟೈನ್‌ಮೆಂಟ್ ವಲಯದಲ್ಲಿರುವವರು ಸೇರಿದಂತೆ ಅಧಿಕಾರಿಗಳು ಪರೀಕ್ಷೆಗೆ ಶಿಫಾರಸು ಮಾಡಿದವರು ಕಡ್ಡಾಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆಗೆ ಒಪ್ಪದಿದ್ದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆಯ ಸುಗ್ರೀವಾಜ್ಞೆಯ ಸೆಕ್ಷನ್ 4ರ ಅಡಿ ಕಾನೂನು ಬಾಹಿರ. ಇದಕ್ಕೆ ಸೆಕ್ಷನ್‌ನ 5ರ ಅಡಿ 3 ವರ್ಷದವರೆಗೆ ಜೈಲು ಹಾಗೂ 50 ಸಾವಿರ ರು.ವರೆಗೆ ದಂಡ ವಿಧಿಸಲು ಅವಕಾಶವಿದೆ’ ಎಂದರು.
ಸೋಂಕು ಪರೀಕ್ಷೆಯಿಂದ ರೋಗಿಗೆ ತ್ವರಿತವಾಗಿ ಚಿಕಿತ್ಸೆ ನೀಡುವ ಜೊತೆಗೆ ಬೇರೆಯವರಿಗೆ ಹರಡದಂತೆ ತಡೆಯಬಹುದು. ಜೊತೆಗೆ ಸಾವಿನ ದರ ಕಡಿಮೆ ಮಾಡಬಹುದು ಎಂದರು.