ಬೆಂಗಳೂರು(ಅ.08): ಜನರ ಕಡು ವಿರೋಧ ನಡುವೆಯೂ ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಮಾಸ್ಕ್‌ ಹಾಕದವರ ವಿರುದ್ಧ ಕಾರ್ಯಾಚರಣೆಗಿಳಿದ ಪೊಲೀಸರು, ಬುಧವಾರ ಸುಮಾರು 711 ಜನರಿಗೆ ಬಿಸಿ ಮುಟ್ಟಿಸಿ ದಂಡ ವಸೂಲಿ ಮಾಡಿದ್ದಾರೆ. ಬೆಳಗ್ಗೆಯಿಂದಲೇ ದಂಡ ವಿಧಿಸಲು ಆರಂಭಿಸಿದ ಪೊಲೀಸರು, ದುಬಾರಿ ದಂಡಕ್ಕೆ ಸರ್ಕಾರ ತಡೆ ನೀಡಿದ ಬಳಿಕ ಕಾರ್ಯಾಚರಣೆಗೆ ಸಂಜೆ ವಿರಾಮ ಹೇಳಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಸ್ಕ್‌ ಹಾಕದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರ ವಿರುದ್ಧ ಬಿಬಿಎಂಪಿ ಮಾರ್ಷಲ್‌ಗಳು ದಂಡ ವಿಧಿಸುತ್ತಿದ್ದರು. ಆದರೆ ಜನರು ನಿಯಮ ಪಾಲನೆ ಮಾಡದೆ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು, ಮಾಸ್ಕ್‌ ಹಾಕದ ವಿರುದ್ಧ ಬುಧವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಪೊಲೀಸರಿಗೆ ಸೂಚಿಸಿದ್ದರು.

ಜನರ ಹಣ ಲೂಟಿ ಕೈಬಿಟ್ಟ ರಾಜ್ಯ ಸರ್ಕಾರ, ಮಾಸ್ಕ್ ಹಾಕದವರಿಗೆ ವಿಧಿಸುವ ದಂಡ ಇಳಿಕೆ

ಪೊಲೀಸರಿಗೂ ಕಿರಿಕಿರಿ

ಜನರಿಗೆ ದುಬಾರಿ ದಂಡ ವಿಧಿಸುವ ವಿಚಾರದಲ್ಲಿ ಪೊಲೀಸರಲ್ಲೇ ವಿರೋಧ ವ್ಯಕ್ತವಾಯಿತು. ಹೀಗಾಗಿ ಮೊದ ಮೊದಲು ಈ ಕಾರ್ಯಾಚರಣೆಗೆ ಪಿಎಸ್‌ಐಗಳು ಅಸಹಕಾರ ತೋರಿದ್ದಾರೆ. ಆದರೆ ಪ್ರತಿ ಠಾಣೆಯಲ್ಲಿ 50 ಜನರಿಗೆ ದಂಡ ವಿಧಿಸಲೇಬೇಕು ಎಂದು ಹಿರಿಯ ಅಧಿಕಾರಿಗಳು ಮೌಖಿಕವಾಗಿ ತಾಕೀತು ಮಾಡಿದ್ದರು. ಇದರಿಂದ ಅನಿವಾರ್ಯವಾಗಿ ಪಿಎಸ್‌ಐಗಳು ದಂಡಾಸ್ತ್ರ ಪ್ರಯೋಗಕ್ಕೆ ಮುಂದಾದರು ಎಂದು ತಿಳಿದು ಬಂದಿದೆ. ಪ್ರತಿ ಠಾಣೆಯಲ್ಲಿ ಪಿಎಸ್‌ಐ ನೇತೃತ್ವದಲ್ಲಿ ಇಬ್ಬರು ಸಿಬ್ಬಂದಿಯನ್ನು ತಂಡ ರಚಿಸಿ ತರಬೇತಿ ಸಹ ಕೊಡಲಾಯಿತು. ಪಾಳಿ ಮೇರೆಗೆ ತಂಡದ ಸದಸ್ಯರು ಕಾರ್ಯನಿರ್ವಹಿಸಿದ್ದಾರೆ.

ವಿಭಾಗವಾರು ಮಾಹಿತಿ ವಿಭಾಗ ಪ್ರಕರಣ ದಂಡ ಸಂಗ್ರಹ

ದಕ್ಷಿಣ 135 .1,35,000
ಉತ್ತರ 140 .1,40,000
ಆಗ್ನೇಯ 88 .88,000
ಕೇಂದ್ರ 285 .2,85,000
ಈಶಾನ್ಯ 25 .25,000 
ಪೂರ್ವ 126 .1,26,000

25 ಬೆಲೆಯ ಮಾಸ್ಕ್‌ಗೆ .1 ಸಾವಿರ ದಂಡ ಹಾಕಿದರೆ ಯಾರೂ ತಾನೇ ಸಹಿಸುತ್ತಾರೆ ಹೇಳಿ. ದಂಡ ವಿಧಿಸಲು ನಮಗೆ ಹಿಂಸೆ ಅನಿಸುತ್ತದೆ. ದಿನಗೂಲಿ ನೌಕರು, ಆಟೋ ಚಾಲಕರು ಹೇಗೆ ಪಾವತಿಸಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಾರಿಗಳು 50 ಕೇಸ್‌ ಹಾಕಲೇಬೇಕು ಎಂತ ಟಾರ್ಗೆಟ್‌ ನೀಡಿದರು. ಕಡಿಮೆ ಕೇಸ್‌ ಹಾಕಿದ್ದಕ್ಕೆ ಅಧಿಕಾರಿಗಳು ನಮ್ಮನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೆಸರು ಹೇಳಬಯಸದ ಸಬ್‌ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. 

ನಮಗೆ ದಂಡ ವಿಧಿಸುವುದು ಮುಖ್ಯವಲ್ಲ. ಜನರು ಎಚ್ಚೆತ್ತುಕೊಳ್ಳಬೇಕಿದೆ. ಮಾಸ್ಕ್‌ ಹಾಕದವರ ವಿರುದ್ಧ ದಂಡ ಹಾಕಲು ಬಿಬಿಎಂಪಿ 110 ಉಪಕರಣಗಳನ್ನು ನೀಡಿದೆ. ಪ್ರತಿ ಠಾಣಾ ಮಟ್ಟದಲ್ಲಿ ಮಾಸ್ಕ್‌ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮಹತ್ವ ಕುರಿತು ಶುಕ್ರವಾರ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.